ಮೈಸೂರು: ನಗರದೆಲ್ಲೆಡೆ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ– ಸಂಭ್ರಮದಿಂದ ಆಚರಿಸಲಾಯಿತು. ದೇಗುಲಗಳಲ್ಲಿ ವಿಶೇಷ ಪೂಜೆ ನಡೆದರೆ, ಮನೆಗಳಲ್ಲಿ ಕಳಶದಲ್ಲಿ ಲಕ್ಷ್ಮಿದೇವಿ ಪ್ರತಿಷ್ಠಾಪಿಸಿ, ‘ಜೀವನ ಸಮೃದ್ಧಿ ಹೆಚ್ಚಾಗಲೆಂದು’ ಪ್ರಾರ್ಥಿಸಿದರು. ಸ್ನೇಹಿತರು, ನೆಂಟರು, ನೆರೆ–ಹೊರೆಯವರನ್ನು ಕರೆದು ವ್ರತ ನೆರವೇರಿಸಿದರು.
ಚಿಣ್ಣರು, ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟರೆ, ಸೀರೆಯುಟ್ಟು ಕಂಗೊಳಿಸುತ್ತಿದ್ದ ಮಹಿಳೆಯರು ಮನೆಗಳಲ್ಲಿ ಲಕ್ಷ್ಮಿ ದೇವಿಗೆ ಹೂವು, ಆಭರಣ, ನೋಟು–ನಾಣ್ಯ, ನೈವೇದ್ಯಗಳಿಂದ ವಿಶೇಷವಾಗಿ ಅಲಂಕರಿಸಿ ಭಕ್ತಿ ತೋರಿದರು. ಒಳಿತಾಗಲೆಂದು ಹಿರಿಯರು, ಮುತ್ತೈದೆಯರಿಂದ ಆಶೀರ್ವಾದ ಪಡೆದರು.
ಮುಂಜಾನೆಯೇ ಹೆಂಗಳೆಯರು ಮನೆಯ ಮುಂದೆ ಅಂದದ ರಂಗೋಲಿ ಬಿಡಿಸಿ ಹಬ್ಬವನ್ನು ಸ್ವಾಗತಿಸಿದರು. ಮನೆಯ ಬಾಗಿಲಿಗೆ ಮಾವಿನ ತೋರಣ, ಹೂಗಳಿಂದ ಸಿಂಗರಿಸಿ ಮನೆಯನ್ನು ಅಣಿಗೊಳಿಸಿದರು.
ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬದಂದು ಮಹಾಲಕ್ಷ್ಮಿಯನ್ನು ಪೂಜಿಸಿದರೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ವಿದ್ಯೆ, ಬುದ್ಧಿ, ಧಾನ್ಯ, ಸಂತಾನ, ಧೈರ್ಯ, ಬಲ ಹೀಗೆ ಅಷ್ಟೈಶ್ವರ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ.
ಹಲವು ಮಂದಿ ಕಲಶವಿಟ್ಟು ಪೂಜಿಸಿದರೆ, ಮತ್ತೆ ಹಲವರು ಕಲಶಕ್ಕೆ ಸೀರೆಯುಡಿಸಿ, ಆಭರಣಗಳನ್ನು ಹಾಕಿದ್ದರು. ಕೆಲವರು ಲಕ್ಷ್ಮಿ ಮೊಗವಾಡ ಹಾಕಿ ಪೂಜಿಸಿ ಭಕ್ತಿಭಾವ ಮೆರೆದರು. ಕಲಶವನ್ನು ಬಗೆಬಗೆ ಹೂಗಳಿಂದ ಸಿಂಗರಿಸಲಾಗಿತ್ತು. ಇದಕ್ಕಾಗಿ ವಾರದಿಂದಲೇ ಭರ್ಜರಿ ಸಿದ್ಧತೆಯನ್ನೂ ನಡೆಸಲಾಗಿತ್ತು. ನೈವೇದ್ಯಕ್ಕೆ ವಿವಿಧ ತಟ್ಟೆಗಳಲ್ಲಿ ಹಣ್ಣುಗಳನ್ನು ತಂದಿರಿಸಲಾಗಿತ್ತು. ಎರಡು ದಿನಗಳಿಂದ ತಯಾರಾದ ಸಿಹಿತಿಂಡಿಗಳು, ಚಕ್ಕುಲಿ, ಕೋಡಬಳೆ, ನಿಪ್ಪಟ್ಟುಗಳೂ ಸೇರಿದಂತೆ ತಮ್ಮ ಮನಕ್ಕೊಪ್ಪುವ ತಿಂಡಿಗಳನ್ನು ದೇವಿಗೆ ಒಪ್ಪಿಸಿ, ನೈವೇದ್ಯ ತೋರಿದರು.
ಅವರವರ ಶಕ್ತಿಗೆ ತಕ್ಕಂತೆ ಹಣವನ್ನು ಪೂಜೆಗೆ ಇರಿಸಲಾಗಿತ್ತು. ಇದರ ಜತೆಗೆ, ಕೆಲವರು ಪುಟ್ಟ ಎಲ್‌ಇಡಿ ದೀಪಗಳು ಹಾಗೂ ಬಾಳೆಕಂದಿನಿಂದ ಕಲಶವನ್ನು ಸಿಂಗರಿಸಿದ್ದರು. ಕೆಲವರು ಮೂರ್ತಿಗಾಗಿ ಮಂಟಪವನ್ನು ಮಾಡಿಸಿ, ಸರ್ವಾಲಂಕೃತಗೊಳಿಸಿದ್ದರು.
ನಗರಕ್ಕೆ ಬಂದ ಬಂಧುಗಳು: ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬದ ಆಚರಣೆ ಕಡಿಮೆ. ಹೀಗಾಗಿ, ಗ್ರಾಮಾಂತರ ಭಾಗಗಳಿಂದ ಜನರು, ನಗರ ಪ್ರದೇಶಗಳಲ್ಲಿರುವ ಬಂಧುಮಿತ್ರರ ಮನೆಗೆ ಬಂದು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಸಂಜೆಯಾಗುತ್ತಿದ್ದಂತೆ ತಮ್ಮ ತಮ್ಮ ಸ್ನೇಹಿತರನ್ನು, ಬಂಧುಗಳನ್ನು ಕುಂಕುಮ– ಅರಿಸಿನಕ್ಕಾಗಿ ಆಹ್ವಾನಿಸಲಾಗಿತ್ತು. ಎಲ್ಲರೂ ತಮ್ಮ ತಮ್ಮ ಗೆಳೆಯರು ಹಾಗೂ ಬಂಧು ಬಾಂಧವರ ಮನೆಗೆ ಹೋಗಿ ಬಾಗಿನ ಸ್ವೀಕರಿಸಿದರು. ಹಬ್ಬದಡುಗೆ ಸವಿದರು.
‘ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ 9 ಮುತ್ತೈದೆಯರಿಗೆ ಕುಂಕುಮ, ಅರಿಸಿನ ನೀಡಿದೆವು. ನಂತರ ಸಜ್ಜಿಗೆ ಸೇರಿದಂತೆ 12 ತರದ ವಿಶೇಷ ಭಕ್ಷ್ಯಗಳನ್ನು ಮಾಡಿ ಹಂಚಲಾಯಿತು’ ಎಂದು ರಾಮಕೃಷ್ಣನಗರದ ಅನಿತಾ ರೋಹಿತ್ ತಿಳಿಸಿದರು.
ಶಕ್ತಿ ದೇಗುಲಗಳಲ್ಲಿ ವಿಶೇಷ ಪೂಜೆ
ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಜರುಗಿದವು. ಚಾಮರಾಜ ಮೊಹಲ್ಲಾದ ಮಹಾಲಕ್ಷ್ಮಿ ಕೊಲ್ಹಾಪುರದಮ್ಮ ದೇಗುಲ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಿತ್ತು. ಅಗ್ರಹಾರ ಲಲಿತಾದ್ರಿಪುರ ದಟ್ಟಗಳ್ಳಿ ವಿದ್ಯಾರಣ್ಯಪುರಂ ಪಡುವಾರಹಳ್ಳಿ ಕುಂಬಾರಕೊಪ್ಪಲಿನ ಲಕ್ಷ್ಮಿ ದೇಗುಲಗಳಲ್ಲಿ ಮಹಾಲಕ್ಷ್ಮಿ ಬಡಾವಣೆಯ ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಹಬ್ಬದ ನಿಮಿತ್ತ ಬಹುತೇಕ ಮಂದಿ ರಜೆ ತೆಗೆದುಕೊಂಡಿದ್ದರು. ಹಲವು ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಹೀಗಾಗಿ ಮಕ್ಕಳೂ ಸಂಭ್ರಮದಿಂದ ಹಬ್ಬದಲ್ಲಿ ಹೊಸ ಬಟ್ಟೆ ತೊಟ್ಟು ಭಾಗಿಯಾದರು. ವಿವಿಧ ಬಡಾವಣೆಗಳಲ್ಲಿರುವ ತಮ್ಮ ಸ್ನೇಹಿತರು ಬಂಧುಗಳ ಮನೆಗೆ ವರಮಹಾಲಕ್ಷ್ಮಿ ಪೂಜೆಗೆಂದು ಚಿನ್ನದ ಆಭರಣಗಳನ್ನು ಧರಿಸಿ ಹೋಗುವವರ ಸಂಖ್ಯೆ ಹೆಚ್ಚಿತ್ತು. ಪೊಲೀಸರು ಸಂಜೆಯಾಗುತ್ತಿದ್ದಂತೆ ನಗರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.