ಭಾನುವಾರ, ಏಪ್ರಿಲ್ 2, 2023
33 °C
ಪ್ರಗತಿಪರ ಚಿಂತಕ ಪ್ರೊ.ಎಚ್.ಎಸ್.ರಾಘವೇಂದ್ರರಾವ್ ಪ್ರತಿಪಾದನೆ

ಅವಕಾಶವಿಲ್ಲದೆ ಸಮಾನತೆ ಅಸಾಧ್ಯ: ಪ್ರೊ.ಎಚ್.ಎಸ್.ರಾಘವೇಂದ್ರರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಅವಕಾಶಗಳೇ‌ ಇಲ್ಲದ ಸಮಾಜದಲ್ಲಿ ಸಮಾನತೆ ಸಾಧ್ಯವೇ ಇಲ್ಲ’ ಎಂದು ಪ್ರಗತಿಪರ ಚಿಂತಕ ಪ್ರೊ.ಎಚ್.ಎಸ್.ರಾಘವೇಂದ್ರರಾವ್ ಪ್ರತಿಪಾದಿಸಿದರು.

ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದ ಗಾಂಧಿ ಭವನ ಸಭಾಂಗಣದಲ್ಲಿ ಶೇಷಾದ್ರಿಪುರಂ ಪದವಿ ಕಾಲೇಜಿನ ಸಹಯೋಗದಲ್ಲಿ ಸೋಮವಾರ ನಡೆದ ‘75ನೇ ಸರ್ವೋದಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯ ಬದಲಾದರೆ ಸಮಾಜ ಬದಲಾಗುತ್ತದೆ. ಹೀಗಾಗಿ, ಪರಿವರ್ತನೆ ನಮ್ಮ ಹೃದಯದಲ್ಲಿ ಮೂಡಬೇಕು. ಎಲ್ಲ ವರ್ಗದ ಪ್ರತಿಯೊಬ್ಬರನ್ನೂ ಪ್ರೀತಿ–ಗೌರವದಿಂದ ಕಾಣಬೇಕು. ಎಲ್ಲ ಜಾತಿಗಳಿಗೂ ಮೇಲೆ ಬರಲು ಅವಕಾಶಗಳನ್ನು ಕೊಡದಿದ್ದರೆ ಸಮಾನತೆ ಬರುವುದಿಲ್ಲ’ ಎಂದರು.

‘ಗಾಂಧಿ ಕೊಂದ‌ಂದಿನಿಂದ ಅವರ ನಿಲುವು, ತತ್ವ ಹಾಗೂ ‌ನಂಬಿಕೆಗಳನ್ನು‌ ನಿತ್ಯವೂ ಕೊಲ್ಲುತ್ತಾ ಬಂದಿದ್ದೀವಲ್ಲಾ? ಗಾಂಧೀಜಿ ನಮ್ಮ ನಡುವೆ ನಿಜವಾಗಿಯೂ ಇದ್ದಾರೆಯೇ?’ ಎಂದು ಕೇಳಿದ ಅವರು, ‘ಗಾಂಧಿ, ಬುದ್ಧ, ಬಸವ ಮೊದಲಾದವರನ್ನು ಪ್ರತಿಮೆಗಳನ್ನಾಗಿ ಮಾಡಿ ಪೂಜಿಸಿ ಮರೆಯುತ್ತಿದ್ದೇವೆ. ಅವರು ತೋರಿಸಿದ ದಾರಿಗಳನ್ನು ‌ಬಿಟ್ಟು ಬೇರೆ ದಾರಿ ಹಿಡಿದಿದ್ದೀವಲ್ಲ ಯಾಕೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು’ ಎಂದು ತಿಳಿಸಿದರು.

ಗಾಂಧಿಯನ್ನು ತಿರಸ್ಕರಿಸದೇ, ಅನುಸರಿಸದೆ: ‘ಅಧಿಕಾರದಲ್ಲಿ ನಾಲ್ಕು ದಾರಿಗಳಿವೆ. ಅಧಿಕಾರವಿಲ್ಲದ ಆಲೋಚನೆ, ಆಲೋಚನೆಯೂ ಇರುವ ಅಧಿಕಾರ, ಆಲೋಚನೆಯೇ ಇಲ್ಲದ್ದು ಹಾಗೂ 4ನೇಯದು ದುರಾಸೆಯ ಅಧಿಕಾರ. ಜವಾಹರಲಾಲ್‌ ನೆಹರೂ ಅವರಿಂದ ಹಿಡಿದು ಈಗಿನ ನರೇಂದ್ರ ಮೋದಿವರೆಗೆ ಪ್ರಧಾನಿಯಾದವರು ಒಂದೊಂದು ‌ದಾರಿಯನ್ನು ತೋರಿದ್ದಾರೆ.‌ ಈ ಎಲ್ಲ ದಾರಿಗಳೂ ಗಾಂಧಿಯವರನ್ನು ತಿರಸ್ಕರಿಸದೇ, ಅನುಸರಿಸದೇ ಸಾಗುತ್ತಿವೆ’ ಎಂದು ವಿಶ್ಲೇಷಿಸಿದರು.

‘ನಿಜವಾಗಿಯೂ ಪ್ರಜಾಪ್ರಭುತ್ವ ಇದೆಯೇ? ಲೋಕಸಭಾ ಚುನಾವಣೆಯಲ್ಲಿ ₹ 10 ಕೋಟಿ, ₹ 100 ಕೋಟಿ ಖರ್ಚು ಮಾಡುವ ಸ್ಥಿತಿ ಬಂದಿದೆ. ಗಾಂಧೀಜಿಯೇ ಈಗ ಸ್ಪರ್ಧಿಸಿದ್ದರೆ ಠೇವಣಿ ಕಳೆದುಕೊಳ್ಳುತ್ತಿದ್ದರು. ಪ್ರಜಾಪ್ರಭುತ್ವ ‌ತೋರಿಸಿದ ದಾರಿಯ ಬಗ್ಗೆಯೂ ಯೋಚನೆ ಮಾಡಬೇಕಾಗಿದೆ’ ಎಂದರು.

‘ಗಾಂಧೀಜಿ ಸೇರಿದಂತೆ ಜಗತ್ತಿನ ಯಾವ ಚಿಂತಕ, ಸಮಾಜ ಸುಧಾರಕರೂ ರಾಮಬಾಣ ಅಲ್ಲ‌. ಅವರು ಎಲ್ಲ ಕಾಲಕ್ಕೂ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.

ಒಳಿತಿಗೆ ಬಳಸಿಕೊಳ್ಳಿ: ‘ಗಾಂಧೀಜಿ ವಿರೋಧಿಸಿದ್ದ ತಂತ್ರಜ್ಞಾನವು ಗೃಹ ಕೈಗಾರಿಕೆಗಳು ನಾಶವಾಗುವಷ್ಟರ ಮಟ್ಟಕ್ಕೆ ಬೆಳೆಯುತ್ತಿದೆ. ಹಾಗೆಂದು ತಂತ್ರಜ್ಞಾನವನ್ನು ಬಿಟ್ಟು ಬಿಡಲಾದೀತೇ? ಇಡೀ ಜಗತ್ತನ್ನೇ ವ್ಯಾಪಿಸಿರುವ ತಂತ್ರಜ್ಞಾನವನ್ನು ನಮ್ಮ ಆಲೋಚನೆಗೆ ತಕ್ಕಂತೆ ಒಳಿತಿಗೆ ಮಾತ್ರವೇ ಬಳಸಿಕೊಳ್ಳಬೇಕು’ ಎಂದರು.

ಗಾಂಧಿ ಭವನದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್ ಮಾತನಾಡಿ, ‘ಅಹಿಂಸೆ, ದಯೆ ಮತ್ತು ಕಾರುಣ್ಯವನ್ನು ಬೋಧಿಸುತ್ತಾ ಬಂದ ಪರಂಪರೆ‌ ನಮ್ಮದು. ಅವುಗಳನ್ನು ಇಟ್ಟುಕೊಂಡೇ‌ ನಾವು ಬದುಕು ಸಾಗಿಸಬೇಕು’ ಎಂದು ಹೇಳಿದರು.

ನಗರಪಾಲಿಕೆ ಪೌರಕಾರ್ಮಿಕರಾದ ಪಂಚಾಲಮ್ಮ ಅವರನ್ನು ಸನ್ಮಾನಿಸಲಾಯಿತು. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸೌಮ್ಯಾ ಈರಪ್ಪ ಕೆ. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು