ಮೈಸೂರು: ‘ಕೃತಕ ಬುದ್ಧಿಮತ್ತೆಯು ಪ್ರತಿ ವ್ಯಕ್ತಿಯ ಆಸಕ್ತಿ, ಅವಶ್ಯಕತೆ, ಅವರು ಬಳಸುವ ಸೇವೆಗೆ ಅನುಗುಣವಾದ ಮಾಧ್ಯಮವಾಗಿದೆ. ಈಚಿನ ದಿನಗಳಲ್ಲಿ ಮಾಧ್ಯಮಗಳಲ್ಲೂ ಇದರ ಬಳಕೆ ಹೆಚ್ಚುತ್ತಿದೆ’ ಎಂದು ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ‘ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಪತ್ರಿಕೋದ್ಯಮದಲ್ಲಿ ಬರವಣಿಗೆ ಹಾಗೂ ಜ್ಞಾನ ಅತ್ಯಗತ್ಯ. ತಂತ್ರಜ್ಞಾನ ಅಭಿವೃದ್ಧಿ ಅದಂತೆ ನಾವು ಅದಕ್ಕೆ ಹೊಂದಿಕೊಳ್ಳುತ್ತಾ ಹೋಗಬೇಕು. ಕೃತಕ ಬುದ್ಧಿಮತ್ತೆ ಕಳೆದ ಒಂದು ದಶಕದಿಂದ ಈಚೆಗೆ ಹೆಚ್ಚು ಬಳಕೆ ಆಗುತ್ತಿದೆ. ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮ, ಶಾಪಿಂಗ್ ಮೊದಲಾದ ಕಡೆಗಳ ವಿದ್ಯುನ್ಮಾನ ಆಟಗಳು ಮುಂತಾದ ಕಡೆ ಕೃತಕ ಬುದ್ಧಿಮತ್ತೆ ಹೆಚ್ಚಾಗಿ ಇದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ವಸಂತ ಕುಮಾರ್ ‘ಮಾಧ್ಯಮಗಳು ನೊಂದವರ ಪರ ಧ್ವನಿಯಾಗಿ ಅವರಿಗೆ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು’ ಎಂದು ಆಶಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ‘ಇಂದು ಮಾಹಿತಿಯು ಪ್ರವಾಹದ ರೀತಿಯಲ್ಲಿ ಮೊಬೈಲ್‌ಗಳನ್ನು ತಲುಪುತ್ತಿದೆ. ಆದರೆ ಅವುಗಳ ವಿಶ್ವಾಸಾರ್ಹತೆ ಪ್ರಶ್ನೆ ಎದ್ದಿದೆ. ವಿದ್ಯಾರ್ಥಿಗಳು ಪತ್ರಿಕೋದ್ಯಮ ಕಲಿಯಬೇಕಾದರೆ ತಪ್ಪದೇ ಪತ್ರಿಕೆ ಓದಿ’ ಎಂದು ಸಲಹೆ ನೀಡಿದರು.
ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಕೇಶವ ಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಡಿ. ಅಶೋಕ್ ಕುಮಾರ್, ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಮಹಾರಾಣಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಶ್ವಿನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.