ಶುಕ್ರವಾರ, ಜನವರಿ 24, 2020
16 °C
ಪ್ರತಿ ವರ್ಷ ಶ್ರಾವಣಮಾಸದಲ್ಲಿ ಷಟಸ್ಥಲ ಧ್ವಜಾರೋಹಣ

ಗಮನ ಸೆಳೆಯುವ ಬಸವ ವೃತ್ತ

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ಪಟ್ಟಣದಿಂದ ಮೂರು ಕಿ.ಮೀ ಅಂತರದಲ್ಲಿರುವ ಬಂದಾಳ ಚಿಕ್ಕ ಗ್ರಾಮ. ಇಲ್ಲಿ ಎಲ್ಲರೂ ಒಂದಾಗಿ ನಿರ್ಮಿಸಿರುವ ಸುಂದರ ಬಸವ ವೃತ್ತ ಹಾಗೂ ಅಶ್ವಾರೂಢ ಬಸವೇಶ್ವರ ಪುತ್ಥಳಿ ಗಮನ ಸೆಳೆಯುತ್ತಿದೆ.

2005ರ ಆಗಸ್ಟ್ 22ರಂದು ರುದ್ರಗೌಡ ಬಿರಾದಾರ, ಶ್ರೀಶೈಲ ತಳವಾರ, ದಿ.ರಾಮು ಬಡಾನೂರ, ಶರಣಗೌಡ ಬಿರಾದಾರ, ವಿಶ್ವನಾಥ ಹಿರೇಮಠ, ಮಹಾಂತೇಶ ಬಡಾನೂರ, ಈರಣ್ಣ ದೊರಿ, ನಿಂಗಪ್ಪ ಬೀರಗೊಂಡ, ಗೊಲ್ಲಾಳ ಮಳಲಿ, ಬಸು ಬೂದಿಹಾಳ, ದ್ಯಾಮನಗೌಡ ಪಾಟೀಲ ಹಾಗೂ ಯಲ್ಲಪ್ಪ ಹಿರೇಕುರುಬರ ನೇತೃತ್ವದ ಯುವಕರ ಪಡೆಯು ಬಸವ ವೃತ್ತದ ಚಿಕ್ಕ ನಾಮಫಲಕ ಅಳವಡಿಸುವ ಮೂಲಕ ವೃತ್ತವನ್ನು ಉದ್ಘಾಟಿಸಿದರು.

ಪುತ್ಥಳಿ ಇಲ್ಲದ ವೃತ್ತವನ್ನು ಗಮನಿಸಿದ ಬಸವಾಭಿಮಾನಿಗಳು ಬಸವೇಶ್ವರರ ಪುತ್ಥಳಿ ಸ್ಥಾಪಿಸುವ ಛಲ ಹೊತ್ತು, ಅಂದಿನ ಶಾಸಕ ರಮೇಶ ಭೂಸನೂರ ಅವರನ್ನು ಭೇಟಿ ಮಾಡಿ ಪುತ್ಥಳಿ ನಿರ್ಮಾಣಕ್ಕೆ ಧನಸಹಾಯ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಭೂಸನೂರ, ₹1 ಲಕ್ಷ ನೀಡುವ ಮೂಲಕ ಸುಂದರ ಬಸವ ಪುತ್ಥಳಿ ನಿರ್ಮಾಣಕ್ಕೆ ಕಾರಣೀಕರ್ತರಾದರು.

ಮಹಾರಾಷ್ಟ್ರದ ಫಂಡರಪುರದ ಕಲಾವಿದ ಸಂಜಯ ಮಂದೇವಾಲ ಅವರು ಶಿಲಗುರಿ ಕಲ್ಲಿನಲ್ಲಿ ಕೆತ್ತಿದ ಬಸವೇಶ್ವರ ಪುತ್ಥಳಿ ನೋಡುಗರಿಗೆ ಥೇಟ್ ಕಂಚಿನ ಪುತ್ಥಳಿಯಂತೆ ಭಾಸವಾಗುತ್ತದೆ.

ಪುತ್ಥಳಿ ಅನಾವರಣ ಸಂದರ್ಭದಲ್ಲಿಯೇ ವೃತ್ತವನ್ನು ಇನ್ನಷ್ಟು ವಿಶಾಲಗೊಳಿಸಿ ಸುಸಜ್ಜಿತವಾಗಿ ನಿರ್ಮಿಸಲಾಯಿತು. ಮಲಘಾಣದ ಯಶವಂತರಾಯಗೌಡ ರೂಗಿ ₹11 ಸಾವಿರ, ಸಿಂದಗಿಯ ಪ್ರಶಾಂತ ಸುಣಗಾರ ಅವರು ಜಲ್ಲಿ, 25 ಚೀಲ ಸಿಮೆಂಟ್ ಸೇರಿದಂತೆ ಇತರ ಸಾಮಗ್ರಿಗಳನ್ನು ಕೊಟ್ಟರು. ಗ್ರಾಮದ ಸಂಗಯ್ಯ ಹಿರೇಮಠ ಒಂಬತ್ತು ವಿದ್ಯುತ್ ದೀಪಗಳನ್ನು ಕೊಡುಗೆಯಾಗಿ ನೀಡಿದರು. ಇನ್ನುಳಿದ ಹಣವನ್ನು ಗ್ರಾಮಸ್ಥರಿಂದ ಸಂಗ್ರಹಿಸಲಾಗಿದ್ದು, ವೃತ್ತ ಮತ್ತು ಪುತ್ಥಳಿ ಎರಡೂ ಸೇರಿ ಒಟ್ಟು ₹3 ಲಕ್ಷ ಖರ್ಚಾಗಿದೆ.

‘ಗ್ರಾಮ ಪಂಚಾಯಿತಿ ಅನುಮತಿ ಪಡೆದುಕೊಂಡು ಅಧಿಕೃತವಾಗಿ ವೃತ್ತವನ್ನು ನಿರ್ಮಿಸಲಾಗಿದೆ’ ಎಂದು ವೃತ್ತ ನಿರ್ಮಾಣದ ರೂವಾರಿ ಶ್ರೀಶೈಲ ತಳವಾರ ಪ್ರತಿಕ್ರಿಯಿಸಿದರು.

ವೃತ್ತ ಮತ್ತು ಪುತ್ಥಳಿ ಉದ್ಘಾಟನಾ ಸಮಾರಂಭವು 2015ರ ಆಗಸ್ಟ್ 31ರಂದು ಅದ್ಧೂರಿಯಾಗಿ ಜರುಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಶೈಲ ಬಿರಾದಾರ ಉದ್ಘಾಟಿಸಿದರು. ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಬಸವದಳದ ಬಸವರಾಜ ಕೊಂಡಗೂಳಿ, ವಿವಿಧ ಗ್ರಾಮಗಳ ಗಣ್ಯರಾದ ಯಶವಂತರಾಯಗೌಡ ರೂಗಿ ಮಲಘಾಣ, ಕನ್ನೊಳ್ಳಿಯ ಶಂಕರ ಬಗಲಿ, ಸಿದ್ದನಗೌಡ ಪಾಟೀಲ, ಸಿದ್ದಣ್ಣ ಚೌಧರಿ, ಗ್ರಾಮದ ಶಿಕ್ಷಕ ಬಸವರಾಜ ಅಗಸರ ವೃತ್ತ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

‘ಪ್ರತಿ ವರ್ಷ ಶ್ರಾವಣಮಾಸದಲ್ಲಿ ಈ ವೃತ್ತದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ನಡೆಸಲಾಗುತ್ತದೆ’ ಎಂದು ಸಂತೋಷ ಬಿರಾದಾರ ತಿಳಿಸಿದರು.

ಪ್ರತಿಕ್ರಿಯಿಸಿ (+)