ಸೋಮವಾರ, ಏಪ್ರಿಲ್ 19, 2021
31 °C
ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪರಿಶ್ರಮ: ಜನರಲ್ಲಿ ಸ್ವಯಂ ಜಾಗೃತಿ

ಎಚ್‌ಐವಿ ಪೀಡಿತರ ಸಂಖ್ಯೆ ಇಳಿಮುಖ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯ ಜನರಲ್ಲಿ ಎಚ್‌ಐವಿ/ಏಡ್ಸ್‌ ರೋಗದ ಬಗ್ಗೆ ಅರಿವು ಮೂಡುತ್ತಿದ್ದು, ವರ್ಷದಿಂದ ವರ್ಷಕ್ಕೆ ರೋಗಿಗಳ ಪ್ರಮಾಣವೂ ಇಳಿಮುಖವಾಗುತ್ತಿದೆ.

ಕಳೆದ ದಶಕಕ್ಕೆ ಹೋಲಿಸಿದರೆ ಈಚಿನ ವರ್ಷಗಳಲ್ಲಿ ರೋಗಿಗಳ ಪ್ರಮಾಣ ಕಡಿಮೆಯಾಗಿರುವುದು ಸಮಾಧಾನದ ಸಂಗತಿಯಾಗಿದೆ. ಎಚ್‌ಐವಿ ಹರಡುವ ಬಗೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿರುವುದು ಇದಕ್ಕೆ ಕಾರಣವಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ 194 ಮಂದಿಯಲ್ಲಿ ಹೊಸದಾಗಿ ಈ ರೋಗವು ಪತ್ತೆಯಾಗಿದೆ. ಇವರಲ್ಲಿ 8 ಎಂಟು ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಪೀಡಿತರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಗರ್ಭಿಣಿಯರಲ್ಲೂ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಂತಹ ಮಹಿಳೆಯರ ಹೊಟ್ಟೆಯಲ್ಲಿರುವ ಶಿಶುಗಳಿಗೆ ರೋಗ ತಗುಲದಂತೆ ಚಿಕಿತ್ಸೆ ನೀಡುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ.

ವಲಸೆ ಕಾರ್ಮಿಕರಲ್ಲಿ ಹೆಚ್ಚು: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕನಕಪುರ ಹಾಗೂ ರಾಮನಗರ ತಾಲ್ಲೂಕಿನಲ್ಲಿ ಇಂತಹ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಇಲ್ಲಿನ ಗಣಿ ಪ್ರದೇಶಗಳಲ್ಲಿ, ಕೈಗಾರಿಕಾ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿದ್ದಾರೆ. ಅಶಿಕ್ಷಿತರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರಲ್ಲಿ ಈ ರೋಗದ ಬಗ್ಗೆ ಅರಿವಿನ ಕೊರತೆ ಇದೆ. ಹೀಗಾಗಿ ಇಂತಹ ಕಾರ್ಮಿಕರಲ್ಲಿ ಎಚ್ಐವಿ ಪೀಡಿತರು ಹೆಚ್ಚಾಗಿ ಕಂಡುಬಂದಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಚ್‌ಐವಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಅದರಲ್ಲಿಯೂ ಗರ್ಭಿಣಿಯರನ್ನು ಕಡ್ಡಾಯವಾಗಿ ಈ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಒಂದು ವೇಳೆ ಅಂತಹ ಮಹಿಳೆಯರು ಸೋಂಕು ಪೀಡಿತರಾಗಿದ್ದಲ್ಲಿ ಗರ್ಭದಲ್ಲಿನ ಮಗುವನ್ನು ಸೂಕ್ತ ವೈದ್ಯೋಪಚಾರದಿಂದ ರಕ್ಷಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

‘ಎಚ್‌ಐವಿ/ಏಡ್ಸ್‌ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯ ಕ್ರಮವೇ ಮದ್ದು’ ಎನ್ನುತ್ತಾರೆ ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾ ಅಧಿಕಾರಿ ಡಾ. ಟಿ. ಅರುಣ್‌ಕುಮಾರ್. ‘ಈಗ ಜನರಲ್ಲಿಯೂ ಈ ಬಗ್ಗೆ ಸಾಕಷ್ಟು ಅರಿವು ಮೂಡುತ್ತಿದೆ. ಹೀಗಾಗಿ ರೋಗದ ಪ್ರಮಾಣವೂ ಕಡಿಮೆ ಆಗಿದೆ. ಆದಾಗ್ಯೂ ಹೆಚ್ಚೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ರೋಗ ಹರಡುವ ಬಗೆ ಹಾಗೂ ಅದರ ದುಷ್ಪರಿಣಾಮಗಳ ಅರಿವು ಮೂಡಿಸುವುದು, ಕಾಂಡೋಮ್‌ ಬಳಕೆಗೆ ಪ್ರೋತ್ಸಾಹಿಸುವುದು. ಜನರಲ್ಲಿ ಈ ಬಗೆಗಿನ ಮುಜುಗರವನ್ನು ಹೋಗಲಾಡಿಸುವ ಪ್ರಯತ್ನವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪತ್ತೆಯಾದ ಎಚ್‌ಐವಿ ಪೀಡಿತರ ಪ್ರಮಾಣ

ವರ್ಷ           ಪರೀಕ್ಷೆಗೆ ಒಳಗಾದವರು    ಎಚ್‌ಐವಿ ಪೀಡಿತರು
2007–08      5388                          128
2008–09      16,335                         437
2009–10       21,768                       423
2010–11       20,374                           285
2011–12       33,681                       350
2012–13       24,826                         265
2013–14      45,366                         177
2014–15      46,528                           190
2015–16      49,819                        179
2016–17    54,035                             157
2017–18      54,469                            194
2018(ಅಕ್ಟೋಬರ್ ಅಂತ್ಯಕ್ಕೆ) 33,359 100

2017–18ರಲ್ಲಿ ತಾಲ್ಲೂಕುವಾರು ರೋಗ ಪತ್ತೆ ಪ್ರಮಾಣ
ತಾಲ್ಲೂಕು ಪರೀಕ್ಷೆಗೆ ಒಳಗಾದವರು ಎಚ್‌ಐವಿ ಪೀಡಿತರು

ಚನ್ನಪಟ್ಟಣ 9883 41
ಮಾಗಡಿ 11,725 14
ಕನಕಪುರ 13,520 74
ರಾಮನಗರ 19,341 65

2018ರಲ್ಲಿ (ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ) ರೋಗ ಪತ್ತೆ ಪ್ರಮಾಣ
ತಾಲ್ಲೂಕು ಪರೀಕ್ಷೆಗೆ ಒಳಗಾದವರು ಎಚ್‌ಐವಿ ಪೀಡಿತರು

ಚನ್ನಪಟ್ಟಣ 6453 15
ಮಾಗಡಿ 8477 21
ಕನಕಪುರ 9879 36
ರಾಮನಗರ 8550 28

* ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಎಚ್‌ಐವಿ ಬಾಧಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ರೋಗ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವೂ ನಿರಂತರ ನಡೆದಿದೆ
-ಡಾ. ಟಿ. ಅರುಣ್‌ಕುಮಾರ್, ಜಿಲ್ಲಾ ಎಚ್‌ಐವಿ/ಏಡ್ಸ್‌ ರೋಗ ನಿಯಂತ್ರಣಾಧಿಕಾರಿ

ರಾಮನಗರಕ್ಕೆ ಪ್ರಶಸ್ತಿ
ಎಚ್‌ಐವಿ/ಏಡ್ಸ್‌ ನಿಯಂತ್ರಣ ಕುರಿತು ಉತ್ತಮ ಕಾರ್ಯಕ್ರಮ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲೆಗೆ ಈ ಬಾರಿ ರಾಜ್ಯ ಸರ್ಕಾರದ ಪ್ರಶಸ್ತಿಯು ಲಭಿಸಿದೆ.

ರಾಮನಗರದೊಟ್ಟಿಗೆ ಶಿವಮೊಗ್ಗ ಹಾಗೂ ಗದಗ ಜಿಲ್ಲೆಗಳು ಈ ಗೌರವಕ್ಕೆ ಪಾತ್ರವಾಗಿವೆ. ಶನಿವಾರ ವಿಜಯಪುರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಲಿದೆ. ‘ರೋಗ ನಿಯಂತ್ರಣದ ಜೊತೆಗೆ ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯದ ಕಾಳಜಿಗೆ ತೆಗೆದುಕೊಂಡ ಕ್ರಮಗಳಿಂದಾಗಿ ಈ ಪುರಸ್ಕಾರ ದೊರೆತಿದೆ’ ಎಂದು ಡಾ. ಅರುಣ್‌ಕುಮಾರ್‌ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು