ತಟ್ಟೆ ಇಡ್ಲಿಗೆ ಪ್ಲಾಸ್ಟಿಕ್ ವಿಷದ ಮಿಶ್ರಣ!

7
ಸಾಕಷ್ಟು ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ

ತಟ್ಟೆ ಇಡ್ಲಿಗೆ ಪ್ಲಾಸ್ಟಿಕ್ ವಿಷದ ಮಿಶ್ರಣ!

Published:
Updated:

ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿಯ ಆಸುಪಾಸು ತಟ್ಟೆ ಇಡ್ಲಿ ಹೋಟೆಲ್‌ಗಳದ್ದೇ ಸಾಮ್ರಾಜ್ಯ. ಆದರೆ ಇಲ್ಲಿನ ಅನೇಕ ಹೋಟೆಲ್‌ಗಳಲ್ಲಿ ಈ ಆಹಾರ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಸಲಾಗುತ್ತಿದ್ದು, ವಿಷಕಾರಿ ಅಂಶ ಗ್ರಾಹಕರ ಹೊಟ್ಟೆ ಸೇರುತ್ತಿದೆ.

ಆಹಾರ ತಯಾರಿಕೆ ಪ್ರಕ್ರಿಯೆಯಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗ ಬರಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ಹೀಗಾಗಿಯೇ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದೆ. ಆದರೆ ಜಿಲ್ಲೆಯ ಹೋಟೆಲ್‌ಗಳಲ್ಲಿ ಈ ಎಚ್ಚರಿಕೆಯನ್ನು ಗಾಳಿಗೆ ತೂರಲಾಗಿದ್ದು, ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆಗಳನ್ನೇ ಬಳಸಲಾಗುತ್ತಿದೆ.

ಇಡ್ಲಿಯು ಪಾತ್ರೆಗೆ ಅಂಟಿಕೊಳ್ಳದಿರಲಿ ಎನ್ನುವ ಕಾರಣಕ್ಕೆ ಪಾತ್ರೆಯ ಮೇಲೆ ಎಲೆ ಅಥವಾ ಬಟ್ಟೆ ಇಟ್ಟು ಬೇಯಿಸಲಾಗುತ್ತದೆ. ಆದರೆ ಪ್ರತಿ ಬಾರಿಯೂ ಹೊಸ ಎಲೆ ಬಳಸುವುದು ಕಷ್ಟ. ಬಟ್ಟೆಯನ್ನೂ ಆಗಾಗ್ಗೆ ಸ್ವಚ್ಛಗೊಳಿಸುತ್ತಲೇ ಇರಬೇಕು ಎನ್ನುವ ಕಾರಣಕ್ಕೆ ಹೋಟೆಲ್‌ ಮಾಲೀಕರು ಪ್ಲಾಸ್ಟಿಕ್ ಹಾಳೆ ಬಳಸಲು ಆರಂಭಿಸಿದರು. ಪ್ಲಾಸ್ಟಿಕ್ ಸುಲಭವಾಗಿ ಸಿಗುತ್ತದೆ ಹಾಗೂ ಸಂಪಳವು ಬಟ್ಟೆಗೆ ಅಂಟಿಕೊಳ್ಳುವುದಿಲ್ಲ ಎಂಬ ಅನುಕೂಲಕರ ಕಾರಣಕ್ಕೆ ಸಾಕಷ್ಟು ಹೋಟೆಲ್‌ಗಳ ಮಾಲೀಕರು ಇಂತಹ ಹಾಳೆಗಳ ಮೊರೆ ಹೋಗುತ್ತಿದ್ದಾರೆ. ಹೀಗೆ ಮಾಡುವ ಕಾರಣ ಹಬೆಯಲ್ಲಿ ಇಡ್ಲಿಯ ಜೊತೆಗೆ ಪ್ಲಾಸ್ಟಿಕ್ ಸಹ ಬೆಂದು ಅಷ್ಟೇ ಸಲೀಸಾಗಿ ಜನರ ಹೊಟ್ಟೆ ಸೇರುತ್ತಿದೆ.

ಕೈಕಟ್ಟಿ ಕುಳಿತ ಅಧಿಕಾರಿಗಳು: ಪ್ಲಾಸ್ಟಿಕ್ ಹಾಳೆಗಳು ಮನುಷ್ಟರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಿಳಿಸಿಕೊಟ್ಟು, ಅದರ ಬಳಕೆಗೆ ನಿರ್ಬಂಧ ಹೇರಬೇಕಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಆಗೊಮ್ಮೆ ಈಗೊಮ್ಮೆ ದಾಳಿ ನಡೆಸಿದ್ದು ಬಿಟ್ಟರೆ, ಹೋಟೆಲ್‌ ಮಾಲೀಕರನ್ನು ಸಂಪೂರ್ಣವಾಗಿ ಎಚ್ಚರಿಸುವ ಗೋಚಿಗೂ ಹೋಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

‘ಬಿಡದಿ–ರಾಮನಗರದ ಅನೇಕ ಹೋಟೆಲ್‌ಗಳಲ್ಲಿ ಇಂದಿಗೂ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಾರೆ. ನಮ್ಮ ಕಣ್ಣೆದುರಿಗೇ ಪ್ಲಾಸ್ಟಿಕ್ ಮೇಲಿನ ಇಡ್ಲಿ ತೆಗೆದು ತಟ್ಟೆಗೆ ಹಾಕುತ್ತಾರೆ. ಎಲ್ಲ ಕಡೆಯೂ ಈ ವ್ಯವಸ್ಥೆ ಇರುವ ಕಾರಣ ವಿರೋಧಿಸಿಯೂ ಪ್ರಯೋಜನ ಇಲ್ಲದಾಗಿದೆ’ ಎನ್ನುತ್ತಾರೆ ಬಿಡದಿಯ ನಿವಾಸಿ ಶಂಕರ್.

‘ಇಲ್ಲಿನ ಕೆಲವು ಹೋಟೆಲ್‌ಗಳು ಒಂದು ಪ್ಲೇಟ್‌ ಇಡ್ಲಿಗೆ ₨40–50 ದರ ವಿಧಿಸುತ್ತವೆ. ಹೀಗಿರುವಾಗ ಜನರ ಆರೋಗ್ಯ ಕಾಳಜಿಯನ್ನು ಮೂಲೆಗುಂಪು ಮಾಡಿ ಪ್ಲಾಸ್ಟಿಕ್ ಬಳಸುತ್ತಿವೆ. ಇಂತಹ ಹೋಟೆಲ್‌ಗಳ ಮಾಲೀಕರಿಗೆ ದಂಡ ವಿಧಿಸಿ ಅವರನ್ನು ಎಚ್ಚರಿಸಬೇಕಾದ ಸರ್ಕಾರಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ’ ಎನ್ನುತ್ತಾರೆ ಅವರು.

ಮಾಲೀಕರಿಗೆ ನೋಟಿಸ್‌: ‘ಬಿಡದಿಯ ಬಹುತೇಕ ಹೋಟೆಲ್ ಮಾಲೀಕರಿಗೆ ಈಗಾಗಲೇ ನೋಟಿಸ್‌ ನೀಡಿ ಪ್ಲಾಸ್ಟಿಕ್‌ ಬಳಸದಂತೆ ಎಚ್ಚರಿಸಲಾಗಿದೆ. ಖುದ್ದು ದಾಳಿ ನಡೆಸಿ ಅವರಲ್ಲಿನ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಅಲ್ಲಿಯೇ ಬೆಂಕಿ ಹಾಕಿ ಸುಟ್ಟಿದ್ದೇವೆ. ಹೀಗಾಗಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬಂದಿದೆ’ ಎನ್ನುತ್ತಾರೆ ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಪ್ರಾಧಿಕಾರದ ಅಂಕಿತಾಧಿಕಾರಿ ಬಿ. ಅನಸೂಯ.

‘ಬಿಡದಿಯ ದೊಡ್ಡ ಹೋಟೆಲ್‌ಗಳ ಮಾಲೀಕರು ಇಂದು ನಾನ್ ಸ್ಟಿಕ್‌ ಪಾತ್ರೆಗಳು, ಬಟ್ಟೆಗಳನ್ನು ಬಳಸತೊಡಗಿದ್ದಾರೆ. ಕೆಲವರು ಪಾತ್ರೆಗಳಿಗೆ ಎಣ್ಣೆ ಹಚ್ಚಿ ನೈಸರ್ಗಿಕ ರೀತಿಯಲ್ಲಿ ಇಡ್ಲಿ ಬಳಸುತ್ತಿದ್ದಾರೆ. ಇನ್ನೂ ಕೆಲವರು ಎಲೆಗಳನ್ನು ಬಳಕೆ ಮಾಡುತ್ತಿದ್ದಾರೆ. ಸಣ್ಣ–ಪುಟ್ಟ ಹೋಟೆಲ್‌ಗಳು ಪ್ಲಾಸ್ಟಿಕ್ ಬಳಸುತ್ತಿದ್ದಲ್ಲಿ ಮತ್ತೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ಲಾಸ್ಟಿಕ್‌ ವಿಷವಾಗುವುದು ಹೇಗೆ?
ಪ್ಲಾಸ್ಟಿಕ್‌ ಅನ್ನು 70 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಿದಾಗ ಅದರೊಳಗಿನ ರಾಸಾಯನಿಕಗಳು ಬಿಡುಗಡೆ ಆಗುತ್ತವೆ. ಇವುಗಳು ಆಹಾರದ ಮೂಲಕ ಮನುಷ್ಯರ ದೇಹ ಸೇರಿದಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಸ್ವರೂಪದ ಕಾಯಿಲೆಗಳನ್ನು ತರಬಲ್ಲವು ಎಂಬುದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳಿಂದ ಧೃಢಪಟ್ಟಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !