ಭಾನುವಾರ, ಫೆಬ್ರವರಿ 23, 2020
19 °C
ಶಾಸಕ ಆರಗ ಜ್ಞಾನೇಂದ್ರ ಮಾಹಿತಿ

ಅಡಿಕೆ ಟಾಸ್ಕ್‌ಫೋರ್ಸ್‌ಗೆ ₹10 ಕೋಟಿ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಡಿಕೆ ಬೆಳೆಗಾರರ ಹಿತಾಸಕ್ತಿ, ಸಂಶೋಧನೆಗಳು ಹಾಗೂ ಟಾಸ್ಕ್‌ಫೋರ್ಸ್ ನಿರ್ವಹಣೆಗಾಗಿ ಬಜೆಟ್‌ನಲ್ಲಿ ₹10 ಕೋಟಿ ಅನುದಾನ ನೀಡುವಂತೆ ಕೋರಲಾಗಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಅಡಿಕೆ ಹಾನಿಕಾರಕ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಅಡಿಕೆ ಹಾನಿಕಾರಕವಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆದಿವೆ. ಅಗತ್ಯ ಸಂಶೋಧನಾ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ನೆರವು ನೀಡುತ್ತಿದೆ. ಈಗಾಗಲೇ ತಮ್ಮ ಅಧ್ಯಕ್ಷತೆಯಲ್ಲೇ ಟಾಸ್ಕ್‌ಫೋರ್ಸ್ ರಚನೆಯಾಗಿದೆ. ಅಡಿಕೆ ಬೆಳೆ ಸಂರಕ್ಷಣೆ, ಬೆಲೆ ಸ್ಥಿರತೆ, ರೈತರಿಗೆ ಸಬ್ಸಿಡಿದರಲ್ಲಿ ಯಂತ್ರಗಳ ವಿತರಣೆ, ಹಳದಿ ರೋಗಕ್ಕೆ ಶಾಶ್ವತ ಪರಿಹಾರ, ರೈತರಿಂದ ನೇರ ಅಡಿಕೆ ಖರೀದಿ ಮತ್ತಿತರ ಕಾರ್ಯಗಳನ್ನು ಟಾಸ್ಕ್‌ಫೋರ್ಸ್ ಮಾಡಲಿದೆ. ತೀರ್ಥಹಳ್ಳಿಯಲ್ಲಿ ಬಹುಕೋಟಿ ವೆಚ್ಚದ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೂ ಕ್ರಮಕೈಗೊಳ್ಳಲಾಗುವುದು ಎಂದರು

ಸಹಕಾರ ಭಾರತಿ ಬೆಂಬಲಕ್ಕೆ ಮನವಿ

ಫೆ.22 ರಂದು ನಡೆಯಲಿರುವ ಮ್ಯಾಮ್‌ಕೋಸ್ (ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ) ಚುನಾವಣೆಯಲ್ಲಿ ಸ್ಪರ್ಧಿಸಿರುವ ಸಹಕಾರ ಭಾರತೀಯ 19 ಜನ ಅಭ್ಯರ್ಥಿಗಳ ಗುಂಪು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಹಕಾರ ಭಾರತಿ ಅಡಿಕೆ ಬೆಳೆಗಾರರ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಬೆಳೆಗಾರರಿಗೆ ಎಲ್ಲ ರೀತಿಯ ನೆರವು ನೀಡಲು ಮುಂದಾಗಿದೆ. ಅಡಿಕೆ ಬೆಳೆಗೆ ತಗಲುತ್ತಿರುವ ರೋಗಗಳ ನಿವಾರಣೆಗೂ ಗಮನಹರಿಸಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕರ ಅಲ್ಲ ಎಂದು ಕೇಂದ್ರ ಸರ್ಕಾರಕ್ಕೆ, ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಿರಂತರವಾಗಿ ಮಾಡುತ್ತಿದೆ. ಅದಕ್ಕಾಗಿ ಈ ಬಾರಿಯೂ ಸಹಕಾರ ಭಾರತಿ ಬೆಂಬಲಿಸಬೇಕು ಎಂದು ಕೋರಿದರು. 

ಮ್ಯಾಮ್‌ಕೋಸ್ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ಮಾತನಾಡಿ, ಮ್ಯಾಮ್‌ಕೋಸ್ ಅಧಿಕಾರ ಹಿಡಿದ ಮೇಲೆ ಹಲವು ಉತ್ತಮ ಕೆಲಸ ಮಾಡಲಾಗಿದೆ. ಸದಸ್ಯರ ಮಕ್ಕಳ ಪುರಸ್ಕಾರ ನಿಧಿ ಹೆಚ್ಚಳ, ಅಪಘಾತ ವಿಮೆ, ವೈದ್ಯಕೀಯ ವೆಚ್ಚ, ಅಸ್ತ್ರ ಒಲೆಗೆ ಸಹಾಯಧನ, ಸುಸ್ತಿ ಷೇರುದಾರರಿಗೆ ಏಕಕಾಲಿಕ ಸಾಲ ತೀರುವಳಿ ವ್ಯವಸ್ಥೆ ಕಲ್ಪಿಸಲಾಗಿದೆ. ಆವಶ್ಯಕತೆಗಳಿಗೆ 
ತಕ್ಕಂತೆ ಶಾಖೆಗಳು, ಖರೀದಿ ಕೇಂದ್ರಗಳ ವಿಸ್ತರಣೆ, ಅಡಿಕೆ ವ್ಯಾಪಾರಕ್ಕಾಗಿ ಆ್ಯಪ್‌ ಅಭಿವೃದ್ಧಿ, ಸದಸ್ಯರಿಗೆ ಆರೋಗ್ಯವಿಮೆ, ಡಿಜಿಟಲ್ ತೂಕ ಯಂತ್ರ, ಸದಸ್ಯರ ತೋಟಗಳಲ್ಲಿ ಅಡಿಕೆ ಮತ್ತು ಆಂತರಿಕ ಬೆಳೆಗಳ ಅಭಿವೃದ್ದಿ ಕುರಿತು ಹಲವು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದಲ್ಲಿ 26 ಸಾವಿರ ಸದಸ್ಯರಿದ್ದಾರೆ. 6 ಸಾವಿರ ಸದಸ್ಯರಿಗೆ ಮತದಾನ ಹಕ್ಕು ಇದೆ. ಫೆ.22 ರಂದು ಮತದಾನ ನಡೆಯಲಿದೆ. ಶಿವಮೊಗ್ಗ, ಭದ್ರಾವತಿ, ಸಾಗರ, ಹೊಸನಗರ, ಕೊಪ್ಪ, ಶೃಂಗೇರಿ, ತರೀಕೆರೆ ಮತ್ತು ಚನ್ನಗಿರಿಯಲ್ಲಿ ಮತದಾನ ಕೇಂದ್ರಗಳಿವೆ. ಆಯಾ ಭಾಗದ ಮತದಾರರು ಆಯಾ ಕೇಂದ್ರಗಳಲ್ಲಿ ಮತದಾನ ಮಾಡಬಹುದು. ಒಬ್ಬರು 19 ಮತಗಳನ್ನು ಚಲಾಯಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿರೂಪಾಕ್ಷಪ್ಪ, ರವಿಕುಮಾರ್, ಭೀಮರಾವ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು