ಶುಕ್ರವಾರ, ಜನವರಿ 24, 2020
27 °C
ಇಸ್ರೆಲ್ ಮಾದರಿಯಲ್ಲಿ ಕಬ್ಬಿನ ನಡುವೆ ಶೇಂಗಾ, ಬದನೆ ಬಿತ್ತನೆ

ಆದಾಯ ದುಪ್ಪಟ್ಟುಗೊಳಿಸಿದ ಅಂತರಬೆಳೆ!

ಅಮರ್ ಎ.ಇಂಗಳೆ Updated:

ಅಕ್ಷರ ಗಾತ್ರ : | |

Prajavani

ತೇರದಾಳ: ಮೊದಲು ಸಾಂಪ್ರದಾಯಿಕ ಪದ್ದತಿಯಿಂದಲೇ ಕಬ್ಬು ಬೆಳೆಯುತ್ತಿದ್ದ ತೇರದಾಳ ತಾಲ್ಲೂಕಿನ ಸಸಾಲಟ್ಟಿಯ ಗುರುಪಾದ ಶಿವಣ್ಣವರ, ಈಗ ಇಸ್ರೇಲ್‌ ಮಾದರಿಯಲ್ಲಿ ಫಿಟ್ ಪದ್ಧತಿ ಮೂಲಕ ಕಬ್ಬು ನಾಟಿ ಮಾಡಿ ಯಶಸ್ವಿಯಾಗಿದ್ದಾರೆ.

ಏನಿದು ಪದ್ದತಿ: ಕಬ್ಬು ಬೆಳೆಯಲು ಜಮೀನು ಸಿದ್ದಪಡಿಸಿಕೊಂಡು, ಎರಡು ಸಾಲುಗಳ ಮಧ್ಯೆ ಆರು ಅಡಿ ಅಂತರವಿರುವಂತೆ, ಪ್ರತಿ ಸಾಲಿನಲ್ಲೂ ಮೂರು ಅಡಿಗೊಂದರಂತೆ ಸ್ವಲ್ಪ ಆಳದ ಗುಂಡಿ ಮಾಡಿಕೊಂಡು, ಅದರಲ್ಲಿ ನಾಟಿ ಮಾಡಲು ಆಯ್ಕೆ ಮಾಡಿಕೊಂಡ ಕಬ್ಬಿನ ಬೀಜವನ್ನು ಚಕ್ರಾಕಾರದಲ್ಲಿ ಇಟ್ಟು ಅದರ ಮೇಲೆ ಮಣ್ಣು ಮುಚ್ಚಿ ನೀರುಣಿಸಿ ಕಬ್ಬು ಬೆಳೆಯುವುದೇ ಫಿಟ್ ಪದ್ದತಿ.

ಈ ರೀತಿ ನಾಟಿಯನ್ನು ಮಾರ್ಚ್‌ನಲ್ಲಿ ಮಾಡಿದ ಗುರುಪಾದ, ಇದಕ್ಕೆ ಮೀರಾ-86 ಎಂಬ ತಳಿಯ ಎರಡು ಟನ್ ಬೀಜ ಬಳಸಿದರು. ಬೀಜ, ರಸಗೊಬ್ಬರ ಹಾಗೂ ಕೂಲಿಯವರ ವೇತನಕ್ಕಾಗಿ ಇಲ್ಲಿಯವರೆಗೆ ₹20 ಸಾವಿರ ಖರ್ಚು ಮಾಡಿದ್ದಾರೆ.

ಅಂತರ ಬೆಳೆಯಾಗಿ ಶೇಂಗಾ: ಕಬ್ಬು ಆಳೆತ್ತರ ಬೆಳೆಯುವವರಿಗೆ ಸಾಲುಗಳ ಮಧ್ಯೆ ಖಾಲಿ ಇದ್ದರೆ ಕಳೆ ಎದ್ದು ಬೆಳೆಗೆ ತೊಂದರೆಯಾದೀತೆಂದು ಅಂತರ ಬೆಳೆಯಾಗಿ ಶೇಂಗಾ ಬಿತ್ತನೆ ಮಾಡಿದ್ದರು. ನಾಟಿ ಮಾಡಿದ್ದ ಕಬ್ಬಿಗೆ ಎರಡನೇ ನೀರುಣಿಸುವ ಮೊದಲು ಶೇಂಗಾ ಬಿತ್ತನೆ ಮಾಡಿದರು. ಬಿತ್ತನೆಗೆ ಕೇವಲ 6 ಕೆ.ಜಿ ಶೇಂಗಾ ಬೀಜ ಬಳಸಿದ್ದರು. ಗೊಬ್ಬರ ಸೇರಿ ₹2000 ಖರ್ಚು ಮಾಡಿದ್ದರು. 100 ದಿನ ಅವಧಿಯ ಈ ಬೆಳೆ ಫಲ ನೀಡಿದ್ದು, ಐದೂವರೆ ಕ್ವಿಂಟಲ್ ಶೇಂಗಾ ಆಗಿದೆ. ಕ್ವಿಂಟಲ್‌ಗೆ ₹2000 ಬೆಲೆ ದೊರೆತಿದೆ.

ಬದನೆಕಾಯಿ ಬೆಳೆ: ಶೇಂಗಾ ತಂದುಕೊಟ್ಟ ಆದಾಯದಿಂದ ಉತ್ತೇಜಿತರಾದ ಗುರುಪಾದ, ಬದನೆ ಬೆಳೆಯಲು ಯೋಚಿಸಿ, ಅದಕ್ಕಾಗಿ ಮಾಂಜರಿ ತಳಿಯ ಸಸಿ ತಂದು ನಾಟಿ ಮಾಡಿದರು. ಈ ವರ್ಷ ಅತಿವೃಷ್ಟಿಯಿಂದ 500ರಷ್ಟು ಬದನೆ ಸಸಿಗಳು ಕೊಳೆತು ಹೋಗಿ, ಉಳಿದ 500 ಮಾತ್ರ ಈಗ ಕಾಯಿ ಬಿಡಲಾರಂಭಿಸಿವೆ. ಬದನೆ ಗಿಡ ತನ್ನ ಜೀವಿತಾವಧಿಯಲ್ಲಿ ಮೂರು ಕೆ.ಜಿಯಷ್ಟು ಕಾಯಿ ಕೊಡುತ್ತದೆ. ಹೀಗೆ 500 ಗಿಡದಿಂದ ಒಂದೂವರೆ ಕ್ವಿಂಟಲ್ ಬದನೆಕಾಯಿ ದೊರೆತಿದ್ದು,  ಪ್ರತಿ ಕೆ.ಜಿಗೆ ₹35ರಂತೆ, ₹50ಸಾವಿರ ಆದಾಯ ಪಡೆದಿದ್ದಾರೆ.

ಈಗ ಕಬ್ಬು ಕಟಾವಿಗೆ ಬಂದಿದ್ದು, 60ರಿಂದ 65 ಟನ್ ಇಳುವರಿ ಅಂದಾಜಿಸಲಾಗಿದೆ. ಈ ಹಿಂದೆ ಸಾಂಪ್ರದಾಯಿಕವಾಗಿ ಬೆಳೆದಾಗಲೂ ಇಷ್ಟೇ ಇಳುವರಿ ಪಡೆದಿದ್ದು, ಅಂತರ ಬೆಳೆಯಿಂದ ಅಷ್ಟೇ ಜಮೀನಿನಲ್ಲಿ ತಮ್ಮ ಆದಾಯ ದ್ವಿಗುಣಗೊಳಿಸಿಕೊಂಡಿದ್ದಾರೆ.
`ಸಾಕಷ್ಟು ಶಿಕ್ಷಣ ಪಡೆದು ರೈತರಾಗುವಲ್ಲಿ ಹಿಂದೇಟು ಹಾಕುವುದು ತಪ್ಪು, ಭೂಮಿಯಲ್ಲಿ ಯೋಜನಾಬದ್ಧವಾಗಿ ದುಡಿದರೆ ಯಾವ ನೌಕರಿಗೂ ಕಡಿಮೆ ಇಲ್ಲದಂತೆ ಜೀವನ ಸಾಗಿಸಬಹುದು' ಎಂದು ಗುರುಪಾದ ಹೇಳುತ್ತಾರೆ. ಈ ಕೆಲಸಕ್ಕೆ ಪುತ್ರರಾದ ಶಿವಾನಂದ ಹಾಗೂ ಪ್ರಕಾಶ ಕೂಡ ಅಪ್ಪನೊಂದಿಗೆ ಕೈಜೋಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು