ಶುಕ್ರವಾರ, ಆಗಸ್ಟ್ 23, 2019
22 °C
ದೇವದುರ್ಗ, ರಾಯಚೂರು ನದಿತೀರಗಳಲ್ಲಿ ಅತಿಹೆಚ್ಚು ನಷ್ಟ

ರಾಯಚೂರು: 10 ಸಾವಿರ ಹೆಕ್ಟೇರ್‌ ಬೆಳೆಹಾನಿ

Published:
Updated:

ರಾಯಚೂರು: ಕೃಷ್ಣಾನದಿಯಲ್ಲಿ ಪ್ರತಿವರ್ಷ ಇರುವಷ್ಟೇ ಈ ವರ್ಷವೂ ಪ್ರವಾಹ ಬರಬಹುದು ಎಂದು ನಂಬಿಕೆಯಿಂದ ನೆಟ್ಟಿದ್ದ ಭತ್ತದ ಸಸಿಗಳೆಲ್ಲವೂ ಕೃಷ್ಣಾರ್ಪಣವಾಗಿದ್ದು, ಮತ್ತೆ ಸಸಿ ನೆಡಬೇಕೋ ಬೇಡವೋ ಎನ್ನುವ ಸಂಕಷ್ಟದಲ್ಲಿ ನದಿತೀರದ ರೈತರು ಮುಳುಗಿದ್ದಾರೆ.

2009 ರಲ್ಲಿ ಬಿಡದೆ ಸುರಿದ ಮಳೆಯಿಂದಾದ ಪ್ರವಾಹ ಸಂಕಷ್ಟ, ಬೆಳೆಹಾನಿ ಅನುಭವ ಬಹುತೇಕ ಮನಸ್ಸಿನಿಂದ ಮರೆಯಾಗಿತ್ತು.  10 ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ನುಗ್ಗಿರುವ ಕೃಷ್ಣಾನದಿ ನೀರಿನಿಂದ ನದಿತೀರದ ಬಹುತೇಕ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಭತ್ತದ ಸಸಿ ಖರೀದಿಸಲು, ಗೊಬ್ಬರಕ್ಕಾಗಿ, ಭೂಮಿ ಹದಮಾಡಿಸಲು ಯಂತ್ರಗಳ ಬಳಕೆಗೆ ಹಾಗೂ ಕೂಲಿಕಾರ್ಮಿಕರಿಗಾಗಿ ಕೊಟ್ಟಿದ್ದ ಹಣವೆಲ್ಲವೂ ರಾತ್ರೋರಾತ್ರಿ ನೀರಿನಲ್ಲಿ ಕೊಚ್ಚಿ ಹೋಗಿದೆ.

ಪ್ರವಾಹ ನುಗ್ಗಿರುವ ಗುರ್ಜಾಪುರ, ಆತ್ಕೂರು, ಡಿ. ರಾಂಪೂರ್‌ ಸೇರಿದಂತೆ ಅನೇಕ ನದಿತೀರದ ಗ್ರಾಮಗಳಲ್ಲಿ, ಮುಖ್ಯಧಾರೆಯಿಂದ ನದಿಯು ಒಂದು ಕಿಲೋ ಮೀಟರ್‌ ದೂರದವರೆಗೂ ಪಸರಿಸಿಕೊಂಡಿದೆ. ಗ್ರಾಮದ ಸುತ್ತಮುತ್ತ ಹರಿಯುವ ಹಳ್ಳಗಳ ಮೂಲಕವೂ ಪ್ರವಾಹದ ನೀರು ಬೆಳೆಗಳಿಗೆ ಆವರಿಸಿದೆ. ಪ್ರವಾಹ ಬರಬಹುದು ಎನ್ನುವ ನಿರೀಕ್ಷೆಯಿಲ್ಲದೆ ರೈತರು ಬೆಳೆದಿದ್ದ ಬೆಳೆಗಳು ನೀರು ಪಾಲಾಗಿವೆ. ಆಗಸ್ಟ್‌ 1 ರಿಂದ ಕೃಷ್ಣಾನದಿಗೆ ಪ್ರವಾಹ ಆರಂಭವಾಗಿದ್ದರೂ, ಅಪಾಯದ ನಿರೀಕ್ಷೆಯಿಲ್ಲದೆ ಇದೇ ತಿಂಗಳಲ್ಲಿ ಅನೇಕರು ಸಸಿಗಳನ್ನು ನೆಟ್ಟಿದ್ದರು. ಇದ್ದಕ್ಕಿದ್ದಂತೆ ಅಪ್ಪಳಿಸಿದ ಅಪಾಯದಿಂದ ರೈತರು ನಿರಾಸೆಗೀಡಾಗಿದ್ದಾರೆ.

ದೇವದುರ್ಗ ತಾಲ್ಲೂಕಿನ ನದಿತೀರಗಳ ಬಹಳಷ್ಟು ರೈತರಿಗೆ ಬೆಳೆಹಾನಿ ಆಗಿದ್ದಲ್ಲದೆ ಮನೆಯೂ ಮುಳುಗಡೆಯಾಗಿದೆ. ಎಲ್ಲವನ್ನು ಕಳೆದುಕೊಂಡು ನಿರ್ಭಾವುಕರಾಗಿರುವ ಈ ರೈತರು, ದುಃಖ ನುಂಗಿಕೊಂಡು ಪರಿಹಾರ ಕೇಂದ್ರಗಳಲ್ಲಿ ಕುಟುಂಬ ಸಮೇತ ಬೀಡು ಬಿಟ್ಟಿದ್ದಾರೆ. ’ನದಿಯಲ್ಲಿ ನೀರು ಹೆಚ್ಚಾದರೆ ಯಾರೂ ಏನು ಮಾಡುವುದಕ್ಕೆ ಸಾಧ್ಯ. ಬೆಳೆಹಾನಿಗೆ ಸರ್ಕಾರದಿಂದ ಪರಿಹಾರ ಕೊಡಬಹುದು. ಆದರೆ, ಮಾಡಿದ ಖರ್ಚಿನಷ್ಟು ಪರಿಹಾರ ಸಿಗುವುದಿಲ್ಲ. ಇದಕ್ಕಾಗಿ ಮತ್ತೆ ಅಲೆದಾಡಬೇಕು. ಇದೆಲ್ಲವನ್ನು ನೆನೆಸಿಕೊಂಡರೆ, ಪ್ರವಾಹದಲ್ಲಿಯೇ ಕೊಚ್ಚಿಕೊಂಡು ಹೋಗಿದ್ದರೆ ಸಾಕಾಗಿತ್ತು ಎಂದು ಅನಿಸುತ್ತಿದೆ. ಕಷ್ಟ ಹೇಳಿಕೊಂಡರೂ ಪ್ರಯೋಜನವಿಲ್ಲ’ ಎಂದು ಹಿರೇರಾಯನಕುಂಪಿಯ ರೈತ ಆನಂದ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ಜಿಲ್ಲೆಯ ನದಿತೀರದ ಜಮೀನುಗಳಲ್ಲಿ ರೈತರು ಬೆಳೆದಿದ್ದ ಭತ್ತ, ತೊಗರಿ, ಹತ್ತಿ, ಸಜ್ಜೆ, ಕಬ್ಬು, ಸೂರ್ಯಕಾಂತಿ ಹಾಗೂ ಎಳ್ಳು ಬೆಳೆಗಳು ಹಾನಿ ಆಗಿರುವುದನ್ನು ಕೃಷಿ ಇಲಾಖೆಯ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಒಟ್ಟು 84 ಗ್ರಾಮಗಳಲ್ಲಿ ಬೆಳೆಹಾನಿ ಉಂಟಾಗಿದೆ. 

Post Comments (+)