ಗುರುವಾರ , ನವೆಂಬರ್ 26, 2020
20 °C
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಂದ ಭರವಸೆ

ನಾಲ್ಕು ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ: ಲಕ್ಷ್ಮಣ ಸವದಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷ್ಣಾನದಿ ಪ್ರವಾಹ ಹೆಚ್ಚಳದಿಂದ ಸಮಸ್ಯೆ ಎದುರಿಸುತ್ತಿರುವ ರಾಯಚೂರು ತಾಲ್ಲೂಕಿನ ಗುರ್ಜಾಪುರ, ಅರಷಿಣಗಿ, ಬುರ್ದಿಪಾಡ ಹಾಗೂ ಡಿ.ರಾಂಪುರ ಗ್ರಾಮಗಳ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕೃಷ್ಣಾ–ಭೀಮಾ ನದಿಗಳ ಸಂಗಮದಿಂದ ಪ್ರವಾಹಕ್ಕೀಡಾಗುವ ಗುರ್ಜಾಪುರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಗುರ್ಜಾಪುರ ಗ್ರಾಮಕ್ಕಾಗಿ ಗುರುತಿಸಿರುವ ಜಾಗದ ಬಗ್ಗೆ ಭಿನ್ನಾಭಿಪ್ರಾಯಗಳು ಕೇಳಿಬಂದಿವೆ. ಒಮ್ಮತ ಅಭಿಪ್ರಾಯ ಪಡೆದು, ಗ್ರಾಮ ಪಂಚಾಯಿತಿಯಲ್ಲಿ ನಿರ್ಧಾರ ಕೈಗೊಳ್ಳಲು ತಿಳಿಸಲಾಗಿದೆ. ಗ್ರಾಮಸ್ಥರ ಬೇಡಿಕೆ ಪ್ರಕಾರ 60*40 ನಿವೇಶನ ಒದಗಿಸಲು ಪರಿಶೀಲಿಸಲಾಗುತ್ತದೆ. ಹೊಸ ಗ್ರಾಮ ನಿರ್ಮಾಣದ ಬಳಿಕ ಹಳೇ ಗ್ರಾಮವನ್ನು ಸಂಪೂರ್ಣ ತೆರವು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಎಲ್ಲ ಕಡೆಯಲ್ಲೂ ಗ್ರಾಮಸಭೆಗಳನ್ನು ನಡೆಸಿ, ಅಭಿಪ್ರಾಯ ಸಂಗ್ರಹಿಸಬೇಕು. ಆನಂತರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. 2009ರ ಪ್ರವಾಹ ಸಂದರ್ಭದಲ್ಲಿ ಗುರ್ಜಾಪುರ ಗ್ರಾಮದಲ್ಲಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಿದ ಮನೆಗಳು ಕಳಪೆಗುಣಮಟ್ಟದಿಂದ ಕೂಡಿವೆ. ಅಲ್ಲದೇ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ ಎನ್ನುವ ವರದಿ ಸಲ್ಲಿಕೆಯಾಗಿದೆ. ದಾನಿಗಳು ನಿರ್ಮಿಸಿಕೊಟ್ಟ ಮನೆಗಳು ವಿಸ್ತೀರ್ಣ ಕಡಿಮೆ ಇದೆ. ಸದ್ಯ ಶಿಥಿಲಾವಸ್ಥೆಗೆ ತಲುಪಿವೆ ಎಂದು ಹೇಳಿದರು.

ಕೃಷ್ಣಾನದಿಗೆ 7 ಲಕ್ಷಕ್ಕಿಂತ ಅಧಿಕ ಕ್ಯುಸೆಕ್ ನೀರು ಬಂದಾಗ ಗುರ್ಜಾಪುರ ಜಲಾವೃತಗೊಳ್ಳುತ್ತಿದೆ. ಈ ಗ್ರಾಮವನ್ನು ಸ್ಥಳಾಂತರಿಸುವುದು ಅವಶ್ಯಕವಾಗಿದೆ. ಈಗಾಗಲೇ ಕೆಲವರು ಸ್ಥಳಾಂತರಗೊಂಡಿದ್ದಾರೆ. ಅವರಿಗೆ ಪರಿಹಾರ ಕಲ್ಪಿಸಲಾಗುವುದು. ಇದರೊಂದಿಗೆ ಕೃಷ್ಣಾನದಿ ತೀರದಲ್ಲಿರುವ ಕಾಡ್ಲೂರು, ದೇವಸುಗೂರು, ಆತ್ಕೂರು, ಗಂಜಳ್ಳಿ, ಕೊರ್ತಕುಂದಾ, ಕುರ್ವಾಕುಂದಾ, ಅಗ್ರಹಾರ, ಕರೆಕಲ್, ಕೊರ್ವಿಹಾಳ ಗ್ರಾಮಗಳು ಭಾಗಶಃ ಪ್ರವಾಹಕ್ಕೀಡಾಗುತ್ತವೆ ಎಂದು ವಿವರಿಸಿದರು.

ಬೆಳೆಹಾನಿ ಸಮೀಕ್ಷೆಗೆ ಸೂಚನೆ: ರಾಯಚೂರು ತಾಲ್ಲೂಕಿನ ಕರೇಕಲ್‌ ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಭತ್ತದ ಗದ್ದೆಗೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿದರು.

ಕೃಷ್ಣಾನದಿಯ ಪ್ರವಾಹ ಮತ್ತು ಮಳೆಯಿಂದ ಬೆಳೆಗಳ ನಷ್ಟವಾಗಿರುವ ಬಗ್ಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವರದಿ ಬಂದ ನಂತರ ಪರಿಹಾರದ ವ್ಯವಸ್ಥೆ ಮಾಡಲಾಗುವುದು. 2019ರಲ್ಲಿನ ಬೆಳೆ ಪರಿಹಾರವನ್ನು ₹64 ಕೋಟಿ ನೀಡಲಾಗಿದೆ. ಇನ್ನೂ ಸ್ವಲ್ಪ ಬಾಕಿ ಉಳಿದಿದೆ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿ ಪ್ರಕಾಶ್‌ ನಿಕ್ಕಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು