ಸೋಮವಾರ, ಜೂನ್ 14, 2021
27 °C

ರಾಯಚೂರು ವಿಮಾನ ನಿಲ್ದಾಣಕ್ಕಾಗಿ ₹50 ಕೋಟಿ: ಡಿಸಿಎಂ ಲಕ್ಷ್ಮಣ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಯಚೂರು ವಿಮಾನ ನಿಲ್ದಾಣ ಸ್ಥಾಪಿಸುವ ಕನಸು ಈಗ ನನಸು ಮಾಡಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಡಿ ₹40 ಕೋಟಿ ಮತ್ತು ಡಿಎಂಎಫ್ ಯೋಜನೆಯಲ್ಲಿ ₹10 ಕೋಟಿ ಸೇರಿ ಒಟ್ಟು 50 ಕೋಟಿ ಮೀಸಲಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವಿಮಾನ ನಿಲ್ದಾಣಕ್ಕಾಗಿ ಯರಮರಸ್ ಹೊರವಲಯದಲ್ಲಿ 404 ಎಕರೆ ಭೂಮಿ ಕಾದಿರಿಸಲಾಗಿದೆ. ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ ಎಂದರು.

ಮಳೆಯಿಂದ ಮನೆಹಾನಿ ಆದ ಕಡೆಗಳಲ್ಲಿ ಪರಿಹಾರ ನೀಡಲು ರಾಜೀವ್‍ಗಾಂಧಿ ವಸತಿನಿಗಮಕ್ಕೆ ₹10.65 ಕೋಟಿ ಬಿಡುಗಡೆ ಮಾಡಲಾಗಿದೆ. ನೆರೆಸಂತ್ರಸ್ತರ ಬ್ಯಾಂಕ್‍ಖಾತೆಗೆ ಹಣವನ್ನು ಜಮಾಮಾಡಲಾಗಿದೆ. ಮಳೆಯಿಂದ ಹಾನಿಯಾದ ಮೂಲ ಸೌಕರ್ಯಗಳ ದುರಸ್ತಿಗಾಗಿ ₹18.54 ಕೋಟಿ ಜಿಲ್ಲೆಗೆ ಬಿಡುಗಡೆಯಾಗಿದೆ ಎಂದು ಹೇಳಿದರು.

2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 1,613 ಹೆಕ್ಟೇರ್ ಪ್ರದೇಶದಲ್ಲಿ ಬದುಗಳ ನಿರ್ಮಾಣ, 277 ಕೃಷಿಹೊಂಡಗಳನ್ನು ನಿರ್ಮಿಸಲಾಗಿದೆ. ಪ್ರಧಾನಮಂತ್ರಿ ಕೃಷಿಸಮ್ಮಾನ್‍ನಿಧಿ ಯೋಜನೆಯಡಿ ಮೂರು ಕಂತುಗಳಲ್ಲಿ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು, ಕೇಂದ್ರದಿಂದ ಜಿಲ್ಲೆಗೆ ₹196 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ₹75 ಕೋಟಿ ಈಗಾಗಲೇ ನೇರವಾಗಿ ಈ ಜಿಲ್ಲೆಯ ರೈತರ ಬ್ಯಾಂಕ್‍ಖಾತೆಗೆ ಜಮೆಯಾಗಿವೆ ಎಂದು ತಿಳಿಸಿದರು.

2020-21ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 58,509 ಹಾಗೂ ಹಿಂಗಾರು ಹಂಗಾಮಿನಲ್ಲಿ 8,134 ರೈತರು ಬೆಳೆವಿಮೆಗೆ ರೈತರು ನೊಂದಾಯಿಸಿಕೊಂಡಿದ್ದಾರೆ. ಕೃಷಿಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಮಣ್ಣು ಆರೋಗ್ಯ ಅಭಿಯಾನ, ಕೃಷಿ ಯಾಂತ್ರೀಕರಣ, ಕೃಷಿಯಂತ್ರಧಾರೆಯ ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ದೇಶಕ್ಕೆ ನಮ್ಮದೇ ಆದ ಸಂವಿಧಾನ ಜಾರಿಯಾಗಿ 72 ವರ್ಷಗಳು ಸಂದಿವೆ. ಇದೊಂದು ಸ್ಮರಣೀಯ ವಿಚಾರ. ನಾವೆಲ್ಲರೂ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯು ನೀಡಿರುವ ಕಾಣಿಕೆಯನ್ನು ಮರೆಯುವಂತಿಲ್ಲ. ಎಲ್ಲದಕ್ಕೂ ಸಂವಿಧಾನವೇ ತಳಹದಿಯಾಗಿದೆ. ಈ ಸಂವಿಧಾನವನ್ನು ರಚಿಸಿರುವ ಇತಿಹಾಸ ಕೂಡ ವಿಶೇಷತೆಗಳಿಂದ ಕೂಡಿದೆ. ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಅನುಭವದ ನೆರವಿನಿಂದಾಗಿ ಡಾ. ಅಂಬೇಡ್ಕರ್ ಅವರು ನಮ್ಮ ದೇಶದ ಸಂವಿಧಾನಕ್ಕೆ ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು.

ಶಾಸಕರಾದ ಡಾ.ಶಿವರಾಜ್ ಪಾಟೀಲ್, ದದ್ದಲ್ ಬಸನಗೌಡ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ರಾಯಚೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಆರ್.ಡಿ.ಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖ್ ತನ್ವೀರ್ ಅಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ್‌ ಡಾ.ಹಂಪಣ್ಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು