ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆಗೆ ಸಕಲ ಸಿದ್ಧತೆ

ಹಾಯಕ ಚುನಾವಣಾಧಿಕಾರಿ ಶಿಂಧೆ ಅವಿನಾಶ್ ಸಂಜೀವನ್‍ ಮಾಹಿತಿ
Published 27 ಏಪ್ರಿಲ್ 2024, 15:32 IST
Last Updated 27 ಏಪ್ರಿಲ್ 2024, 15:32 IST
ಅಕ್ಷರ ಗಾತ್ರ

ಲಿಂಗಸುಗೂರು: ‘ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಪೂರ್ಣ ಪ್ರಮಾಣದ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಸಹಾಯಕ ಚುನಾವಣಾಧಿಕಾರಿ ಶಿಂಧೆ ಅವಿನಾಶ್ ಸಂಜೀವನ್‍ ತಿಳಿಸಿದರು.

ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ‘ಲಿಂಗಸುಗೂರು ಕ್ಷೇತ್ರದಲ್ಲಿ 1,30,715 ಪುರುಷ, 1,33,633 ಮಹಿಳಾ ಮತ್ತು 9 ಜನ ಲೈಂಗಿಕ ಅಲ್ಪಸಂಖ್ಯಾತರೂ ಸೇರಿ ಒಟ್ಟು 2,64,360 ಮತದಾರರು ಇದ್ದಾರೆ. ಈ ಪೈಕಿ 5,952 ಯುವ ಮತದಾರರು, 2,959 ಅಂಗವಿಕಲ ಮತದಾರರು ಇದ್ದಾರೆ. 285 ಮತಗಟ್ಟೆಗಳಿದ್ದು, ಆ ಪೈಕಿ 59 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತ್ತು 226 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ’ ಎಂದರು.

‘ಮೊದಲ ಹಂತವಾಗಿ ವಯೋವೃದ್ಧರು, ಅಂಗವಿಕಲರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುವವರ ಮತದಾನ ನಡೆದಿದ್ದು, ಶೇಕಡಾ ನೂರರಷ್ಟು ಮತದಾನ ನಡೆದಿದೆ. ಯರಜಂತಿ, ಗುಂತಗೋಳ, ಹಟ್ಟಿ, ರಾಮತ್ನಾಳ ಮತಗಟ್ಟೆಗಳನ್ನು ಸೂಕ್ಷ್ಮ ಮತ ಗಟ್ಟೆಯಾಗಿ ಗುರುತಿಸಿದೆ. ಗುರುಗುಂಟಾ-18, ಹಟ್ಟಿ-64, ಛಾವಣಿ-172, ಕಸಬಾಲಿಂಗಸುಗೂರು-198, ಮುದಗಲ್-239 ಮತಗಟ್ಟೆಗಳನ್ನು ಸಖಿ ಮತಗಟ್ಟಗಳಾಗಿ ಗುರುತಿಸಲಾಗಿದೆ’ ಎಂದು ತಿಳಿಸಿದರು.

‘ಛಾವಣಿ-162 ಮತಗಟ್ಟೆಗಳನ್ನು ಅಂಗವಿಕಲರ ಮತಗಟ್ಟೆ, ಮುದಗಲ್‌-255 ವಯಸ್ಕರ ಮತಗಟ್ಟೆ, ಛಾವಣಿ-160 ಥೀಮ್ ಬೇಸ್ಡ್ ಮತಗಟ್ಟೆ ಹಾಗೂ ಗೋನವಾಟ್ಲ ತಾಂಡಾ-48 ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮತಗಟ್ಟೆಗಳೆಂದು ಘೋಷಿಸಿ ಮತಗಟ್ಟೆಗಳು ಆಕರ್ಷಣೀಯವಾಗಿ ಕಾಣುವಂತೆ ಸಿದ್ಧತೆ ಮಾಡಲಾಗುವುದು. ಮತಗಟ್ಟೆ ಅಧಿಕಾರಿಗಳಿಗೆ ಮೇ-1ರಂದು ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ತರಬೇತಿ ನೀಡಲಾಗುತ್ತದೆ’ ಎಂದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಸೆಕ್ಟರಲ್, ಫ್ಲಾಯಿಂಗ್‍ ಸ್ಕ್ವಾಡ್, ಬೆಲ್ಲಿಹಾಳ, ಛತ್ತರ ಮತ್ತು ರೋಡಲಬಂಡ (ಯುಕೆಪಿ) ಗಳಲ್ಲಿ ಚೆಕ್‌ಪೋಸ್ಟ್‌ ಆರಂಭಿಸಿದ್ದು, ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಛತ್ತರ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ₹3.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಸಿಬ್ಬಂದಿ 522 ಲೀಟರ್ ಅಕ್ರಮ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಸಾರಿಗೆ ಘಟಕದ ಅಧಿಕಾರಿಗೆ ನೋಟಿಸ್ ನೀಡಲಾಗಿದೆ’ ಎಂದು ವಿವರಿಸಿದರು.

ಸ್ವೀಪ್ ಕೇರ್ ಸಮಿತಿ ತಾಲ್ಲೂಕು ನೋಡಲ್‍ ಅಧಿಕಾರಿ ಅಮರೇಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT