ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಮೇಲೆ ಹಲ್ಲೆ: ಶಾಸಕನ ಪುತ್ರನ ವಿರುದ್ಧ ಪ್ರಕರಣ

ಪುನೀತ್ ರಾಜ್‌ಕುಮಾರ್ ಪುತ್ಥಳಿ ಸ್ಥಾಪನೆ ಪ್ರಕರಣ
Last Updated 14 ಮಾರ್ಚ್ 2023, 22:47 IST
ಅಕ್ಷರ ಗಾತ್ರ

ಸಿಂಧನೂರು (ರಾಯಚೂರು ಜಿಲ್ಲೆ): ಇಲ್ಲಿನ ಸಣ್ಣಜಿನ್ ಕಾಂಪ್ಲೆಕ್ಸ್ ಎದುರು ನೂತನವಾಗಿ ನಿರ್ಮಿಸಲಾದ ರಂಗಮಂದಿರದ ಎದುರು ಪುನೀತ್ ರಾಜಕುಮಾರ್ ಪುತ್ಥಳಿ ಸ್ಥಾಪನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಮಂಗಳವಾರ ವಾಗ್ದಾಳಿ, ತಳ್ಳಾಟ ನಡೆಯಿತು.

ಶಾಸಕ ವೆಂಕಟರಾವ್ ನಾಡಗೌಡರ ಪುತ್ರ ಅಭಿಷೇಕ ನಾಡಗೌಡ ನೇತೃತ್ವದಲ್ಲಿ ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳು ಪುನೀತ್‌ ಅವರ ಪುತ್ಥಳಿ ಸಮೇತ ಕೈಗೊಂಡಿದ್ದ ಮೆರವಣಿಗೆಯನ್ನು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಸೇರಿ ಇತರ ಅಧಿಕಾರಿಗಳು ಮತ್ತು ಪೊಲೀಸರು ತಡೆದರು.

‘ಮಾರ್ಚ್ 20 ಅಥವಾ 21ರಂದು ಸರ್ವ ಪಕ್ಷಗಳ, ಎಲ್ಲ ಕಲಾವಿದರ, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ಕರೆದು, ಚರ್ಚಿಸಿ ಪುತ್ಥಳಿ ಸ್ಥಾಪನೆ ಕುರಿತು ನಿರ್ಧರಿಸಲಾಗುವುದು’ ಎಂದು ಅಧಿಕಾರಿಗಳು ತಿಳಿ ಹೇಳಿದರು.

ಆದರೆ, ಇದಕ್ಕೆ ಒಪ್ಪದ ಅಭಿಮಾನಿಗಳು, ‘ನೀವು ಪ್ರಕರಣ ದಾಖಲಿಸಿದರೂ ಅಥವಾ ಜೈಲಿಗೆ ಕರೆದೊಯ್ದರೂ ನಾವು ಪುತ್ಥಳಿ ಸ್ಥಾಪಿಸುತ್ತೇವೆ’ ಎಂದು ಹೇಳಿ ಮತ್ತೆ ಮೆರವಣಿಗೆ ಮುಂದುವರೆಸಿದಾಗ, ನೂಕು ನುಗ್ಗಾಟ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆಗ, ಕೆಲವರು ಪಿಎಸ್‌ಐ ಮಣಿಕಂಠ ಅವರ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆಯಿತು. ದಿಢೀರ್‌ ಪ್ರತಿಭಟನೆ ಕೈಗೊಂಡ ಅಭಿಷೇಕ ನಾಡಗೌಡ ಹಾಗೂ ಅಪ್ಪು ಅಭಿಮಾನಿಗಳು, ‘ಪಿಎಸ್‌ಐ ಮಣಿಕಂಠ ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ಮಣಿಕಂಠ ಮೇಲೆ ಹಲ್ಲೆ ನಡೆದಿದ್ದನ್ನು ವಿರೋಧಿಸಿ ಕುರುಬ ಸಮಾಜದವರು, ‘ಪಿಎಸ್‌ಐ ಮಣಿಕಂಠ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪುನೀತ್ ಅಭಿಮಾನಿಗಳ ಪರವಾಗಿ ಠಾಣೆಯ ಮುಂಭಾಗದಲ್ಲಿ ಜೆಡಿಎಸ್ ಮುಖಂಡರೂ ಧರಣಿ ನಡೆಸಿದರು. ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪಿಎಸ್‌ಐ ಮಣಿಕಂಠ ದೂರು ಆಧರಿಸಿ ಶಹರ ಪೊಲೀಸ್ ಠಾಣೆಯಲ್ಲಿ ಶಾಸಕರ ಪುತ್ರ ಅಭಿಷೇಕ ನಾಡಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್ ದಾಸರಿ ಸೇರಿ 24 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾನೂನು ಗೌರವಿಸುವೆ: ‘ನನ್ನ ಮಗ ತಪ್ಪು ಮಾಡಿದ್ದರೂ ಕಾನೂನಿನ ರೀತಿ ಕ್ರಮ ಜರುಗುತ್ತದೆ. ಪುನೀತ್ ರಾಜಕುಮಾರ್ ಪುತ್ಥಳಿಗೆ ಸಂಬಂಧಿಸಿದಂತೆ ಮಾರ್ಚ್ 21ರವರೆಗೆ ನಗರಸಭೆ ಆಡಳಿತ ಮಂಡಳಿ ಕಾಲಾವಕಾಶ ಕೋರಿದ್ದರಿಂದ ಪುನೀತ್ ಅಭಿಮಾನಿಗಳ ಸಂಘದವರಿಗೆ ಕಾಯಲು ತಿಳಿಸಿದ್ದೆ. ಪುತ್ಥಳಿ ಪ್ರತಿಷ್ಠಾಪನೆಗೆ ಅವಕಾಶ ಕೊಡದಿದ್ದರೂ ಪರವಾಗಿಲ್ಲ. ನಗರಸಭೆ ವಶಕ್ಕೆ ಕೊಡಲು ಅಭಿಮಾನಿಗಳು ಪೊಲೀಸರ ಸಮ್ಮತಿ ಪಡೆದಿದ್ದರು. ಮೆರವಣಿಗೆ ವೇಳೆ ಪಿಎಸ್‌ಐ ಮಣಿಕಂಠ ಕಾರ್ಯಕರ್ತರನ್ನು ಬಡಿಯದಿದ್ದರೆ, ಈ ಘಟನೆ ಸಂಭವಿಸುತ್ತಿರಲಿಲ್ಲ’ ಎಂದು ಶಾಸಕ ವೆಂಕಟರಾವ್ ನಾಡಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT