ಭಾನುವಾರ, ಡಿಸೆಂಬರ್ 6, 2020
22 °C
ವಿಜಯದಶಮಿಯಂದು ನಾಡದೇವಿಯ ವಿಶೇಷ ಆರಾಧನೆ

ರಾಯಚೂರು: ಸಂಭ್ರಮದಿಂದ ನೆರವೇರಿದ ಆಯುಧಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನವರಾತ್ರಿ ಹಬ್ಬದ ನಿಮಿತ್ತ ಜಿಲ್ಲೆಯಾದ್ಯಂತ ಅಯುಧಪೂಜೆಯು ಸಂಭ್ರಮ, ಸಡಗರದೊಂದಿಗೆ ಭಾನುವಾರ ನೆರವೇರಿಸಲಾಯಿತು.

ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ಪರಸ್ಪರ ಅಂತರ ಕಾಯ್ದುಕೊಂಡು ಪೂಜೆ, ಪುನಸ್ಕಾರಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂತು. ಮುಖ್ಯವಾಗಿ ಮಕ್ಕಳು ಹಾಗೂ ಹಿರಿಯ ವಯಸ್ಸಿನವರು ಮಾಸ್ಕ್‌ ಧರಿಸಿಯೇ ದೇವಸ್ಥಾನಗಳಿಗೆ ಭೇಟಿನೀಡಿದರು. ಸಂಕಷ್ಟವನ್ನು ಸಂಹಾರ ಮಾಡುವಂತೆ ದೇವಿಯನ್ನು ಭಕ್ತಿಯಿಂದ ನಮಿಸುವುದು ಸಾಮಾನ್ಯವಾಗಿತ್ತು, ಬೈಕ್‌, ಕಾರು, ಆಟೋ ಸೇರಿದಂತೆ ಜನರು ಪ್ರತಿನಿತ್ಯ ಬಳಕೆ ಮಾಡುವ ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುತ್ತಿದ್ದ ಸಂಪ್ರದಾಯ ಸಾಮಾನ್ಯವಾಗಿತ್ತು. ಹೊಸದಾಗಿ ವಾಹನಗಳನ್ನು ಖರೀದಿಸಿ ದೇವಸ್ಥಾನಗಳ ಎದುರು ವಿಶೇಷ ಪೂಜೆ ಸಲ್ಲಿಸುವುದು ಕಂಡುಬಂತು.

ರಾಯಚೂರು ನಗರದ ವಿವಿಧೆಡೆ ಸಾರ್ವಜನಿಕವಾಗಿ ಅಂಭಾಭವಾನಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಲ್ಲದೆ ಅಂಬಾಭವಾನಿ ದೇವಸ್ಥಾನ, ಮಾರೆಮ್ಮ ದೇವಸ್ಥಾನಗಳು, ಮಹಾಲಕ್ಷ್ಮೀ ದೇವಸ್ಥಾನ ಹಾಗೂ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಗಳಲ್ಲಿ ನವರಾತ್ರಿಯುದ್ದಕ್ಕೂ ವಿಶೇಷ ಪೂಜೆ ನೆರವೇರಿಸಲಾಯಿತು. ಹಬ್ಬದ ಕೊನೆಯ ದಿನ ಸೋಮವಾರ ವಿಜಯದಶಮಿಯಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೆಲವು ಕಡೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರು.

ನಾಡದೇವಿ ಆರಾಧನೆ ಅಂಗವಾಗಿ ಹೋಂ, ಹವನಗಳು ನಡೆದವು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಯುಧ ಪೂಜೆ ನಿಮಿತ್ತ ಶಸ್ತ್ರಾಸ್ತ್ರಗಳು ಮತ್ತು ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಪ್ರತಿವರ್ಷ ರಾಯಚೂರು ನಗರಸಭೆಯಿಂದ ಆಯೋಜಿಸಲಾಗುತ್ತಿದ್ದ ನಾಡದೇವಿಯ ಆರಾಧನೆಯನ್ನು ಈ ವರ್ಷ ರದ್ದುಗೊಳಿಸಲಾಗಿತ್ತು. ಕಚೇರಿಯಲ್ಲಿಯೇ ನಾಡದೇವಿಗೆ ಪೂಜೆ ಸಲ್ಲಿಸುತ್ತಿರುವುದಾಗಿ ಪೌರಾಯುಕ್ತ ಡಾ.ದೇವಾನಂದ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು