ಮಂಜುನಾಥ ಎನ್.ಬಳ್ಳಾರಿ
ಕವಿತಾಳ: ಜನಪದ, ತತ್ಪಪದ, ಸರ್ವಜ್ಞನ ವಚನಗಳು ಮತ್ತು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮತ್ತು ಬುರ್ರಕಥೆ ಹೇಳುವ ಪಟ್ಟಣದ ನಿವಾಸಿ ಅಲೆಮಾರಿ ಕುಟುಂಬದ ಅಯ್ಯಮ್ಮ ಯಡವಲ್ ಎಲೆಮರೆ ಕಾಯಿಯಂತೆ ಉಳಿದಿದ್ದಾರೆ.
64 ವರ್ಷದ ಅಯ್ಯಮ್ಮ ಕೈಯಲ್ಲಿ ತಂಬೂರಿ ಹಿಡಿದು ಹಾಡಲು ಕುಳಿತರೆ ಸಮಯ ಕಳೆದದ್ದು ತಿಳಿಯುವುದಿಲ್ಲ. ಕಥೆ ಹೇಳುವುದನ್ನು ಕೇಳುತ್ತಿದ್ದರೆ ಮತ್ತೆಮತ್ತೆ ಕೇಳಬೇಕು ಎನಿಸುತ್ತದೆ.
ಹತ್ತು ವರ್ಷದ ಬಾಲಕಿಯಾಗಿದ್ದಾಗಲೇ ಹಾಡುವ ಗೀಳು ಹಚ್ಚಿಕೊಂಡ ಅಯ್ಯಮ್ಮ ಇದುವರೆಗೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ವಿಶೇಷವೆಂದರೆ ಆಯಾ ಸಂದರ್ಭ, ವಿಷಯಕ್ಕೆ ತಕ್ಕಂತೆ ಹಾಡುಗಳನ್ನು ರಚಿಸಿ ಇಂಪಾದ ಸ್ವರದಲ್ಲಿ ಹಾಡುವುದು ಅಯ್ಯಮ್ಮ ಅವರ ಹೆಚ್ಚುಗಾರಿಕೆ. ಎದುರಿಗೆ ಕುಳಿತವರ ಹೆಸರು ಹೇಳಿದರೂ ಸಾಕು ಅವರ ಹೆಸರಿನ ಮೇಲೆಯೇ ಒಂದು ಗೀತೆ ರಚಿಸಿ ಹಾಡಿ ಬಿಡುತ್ತಾರೆ.
ಮದುವೆ, ಮುಂಜಿ, ಜವಳ, ಸೀಮಂತ ಮತ್ತಿತರ ಶುಭ ಸಮಾರಂಭಗಳು ಸೇರಿದಂತೆ ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜಾ ಸಂದರ್ಭಗಳಲ್ಲಿ ಅಯ್ಯಮ್ಮ ಅವರಿಂದ ಹಾಡಿಸಲಾಗುತ್ತದೆ.
ಬಾಲ ನಾಗಮ್ಮ, ಕಾಂಭೋಜ ರಾಜ, ಗಂಡುಗಲಿ ಕುಮಾರರಾಮ, ಭೂ ಲಕ್ಷ್ಮೀ, ಸೌರಮ್ಮ, ಚಿತ್ರಶೇಖರ, ನಂದಸೇನ ರಾಜ, ಭೀಮಸೇನ ರಾಜ ಹೀಗೆ ಹತ್ತು ಹಲವು ಬುರ್ರಕಥೆ ಅಯ್ಯಮ್ಮ ಅವರ ಬಾಯಿಯಲ್ಲಿ ಲೀಲಾಜಾಲವಾಗಿ ಬರುತ್ತವೆ. ಕಥೆಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿ ಹೇಳುತ್ತಾರೆ.
ಬೀಸುವ ಕಲ್ಲಿನ ಹಾಡು, ನಾಗರ ಪಂಚಮಿ ಹಾಡು, ಲಾಲಿ ಹಾಡುಗಳನ್ನು ಹಾಡುತ್ತಾರೆ.
ಅತ್ತೆ ಚಂದಮ್ಮ ಅವರಿಂದ ಹಾಡುಗಾರಿಕೆ ಮತ್ತು ಬುರ್ರಕಥೆ ಹೇಳುವುದನ್ನು ಕಲಿತಿರುವುದಾಗಿ ಹೇಳುವ ಅಯ್ಯಮ್ಮ, ‘ನನ್ನ ಕಂಠಸಿರಿ ಚೆನ್ನಾಗಿದೆ ಎಂದು ಅತ್ತೆ ಚಂದಮ್ಮ ಬಾಲ್ಯದಲ್ಲಿಯೇ ಹಾಡುವುದನ್ನು ಕಲಿಸಿದರು’ ಎನ್ನುತ್ತಾರೆ.
‘ಮೂಲತ ತೆಲುಗಿನ ಜನಪದವಾದ ಬುರ್ರಕಥೆಯನ್ನು ಹೇಳುವ ಕಲಾವಿದರು ಆಂಧ್ರದ ಗಡಿ ಜಿಲ್ಲೆಗಳಲ್ಲಿ ಇದ್ದಾರೆ. ಅಲೆಮಾರಿ, ಬುಡಕಟ್ಟು ಕುಟುಂಬಗಳು ಬುರ್ರಕಥೆ ಹೇಳುವುದನ್ನು ಕಾಣಬಹುದು. ಬುರ್ರಾ ಎಂದರೆ ತಂಬೂರಿ ಎಂದು ಅರ್ಥ, ತಂಬೂರಿ ವಾದ್ಯದೊಂದಿಗೆ ಮಹಾಪುರುಷರ ಕಥನಗಳನ್ನು ಜನಪದ ಶೈಲಿಯಲ್ಲಿ ಹಾಡುವುದು ಬುರ್ರಾ. ಕರ್ನಾಟಕದಲ್ಲಿ ಕಂಪಿಲರಾಯನ ಮಗ ಕುಮ್ಮಟ ದುರ್ಗದ ಕುಮಾರರಾಮನ ಕಥೆ ಬುರ್ರಕಥೆಗೆ ಉತ್ತಮ ಉದಾಹರಣೆ’ ಎಂದು ಶಿಕ್ಷಕ ರವಿಚಂದ್ರ ಹೇಳುತ್ತಾರೆ.
ಇಳಿ ವಯಸ್ಸಿನಲ್ಲೂ ಕುಗ್ಗದ ಹಾಡುವ ಉತ್ಸಾಹ ಬದುಕಿಗೆ ಆಸರೆಯಾದ ಕಲೆ ದಣಿವರಿಯದೆ ಗಂಟೆಗಟ್ಟಲೇ ಹಾಡುವ ಹೆಗ್ಗಳಿಕೆ
ಇಳಿ ವಯಸ್ಸಿನಲ್ಲೂ ಹಾಡುವುದನ್ನು ನಿಲ್ಲಿಸಿಲ್ಲ. ದೊಡ್ಡದೊಡ್ಡ ಸಮಾರಂಭಗಳಲ್ಲಿ ಹಾಡಿ ಜನರ ಮೆಚ್ಚುಗೆ ಗಳಿಸಿದ್ದೇನೆ. ಸರ್ಕಾರ ನನ್ನ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎನ್ನುವ ಆಸೆ ಇದೆ.ಅಯ್ಯಮ್ಮ ನಾಗಪ್ಪ ಯಡವಲ್ ಕಲಾವಿದೆ
ಅಯ್ಯಮ್ಮ ಉತ್ತಮ ಜನಪದ ಗಾಯಕಿ. ಅವರ ಧ್ವನಿ ಚೆನ್ನಾಗಿದೆ. ಸಂಘ–ಸಂಸ್ಥೆಗಳು ಮತ್ತು ಸರ್ಕಾರ ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು.ರವಿಚಂದ್ರ ಮಲ್ಕಾಪುರ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.