ಮಾನ್ವಿ: ‘ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಅನ್ವಯವೇ ವೇತನ ಪಾವತಿ ಮಾಡಬೇಕು' ಎಂದು ಜಿ.ಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಎಲ್ಲ ಗ್ರಾ.ಪಂಗಳು ಪ್ರತಿ ತಿಂಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರಂತರವಾಗಿ ಕೆಲಸ ನೀಡಬೇಕು. ಅಮೃತ ಕೆರೆಗಳ ನಿರ್ವಹಣೆಗಾಗಿ ₹25 ಲಕ್ಷ ವೆಚ್ಚ ಮಾಡಲಾಗುತ್ತಿದ್ದು, ಕೆರೆಯ ನೀರನ್ನು ಕುಡಿಯಲು ಮತ್ತು ಬಳಸಲು ಕ್ರಮ ಕೈಗೊಳ್ಳಬೇಕು. ನಿಯಮಿತವಾಗಿ ಕರವಸೂಲಿ ಮಾಡಬೇಕು’ ಎಂದು ಸೂಚನೆ ನೀಡಿದರು.
‘ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಜಿ.ಪಂ. ವತಿಯಿಂದ ಪ್ರತಿ ಗ್ರಾ.ಪಂಗೆ ₹20ಸಾವಿರ ಅನುದಾನವನ್ನು ನೀಡಲಾಗಿದೆ. ಬಳಕೆ ಮಾಡಿರುವ ವಿವರಗಳ ವರದಿಯನ್ನು ಗ್ರಾ.ಪಂ. ಪಿಡಿಒಗಳು ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಪ.ಪಂಗಡ ಇಲಾಖೆ, ಬಿಸಿಎಂ ಇಲಾಖೆಗಳ ವಸತಿ ನಿಲಯಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು' ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೃಷಿ ಇಲಾಖೆಯಿಂದ ಸಾವಯವ ಕೃಷಿಯನ್ನು ಉತ್ತೇಜಿಸುವುದಕ್ಕಾಗಿ ನರೇಗಾ ಯೋಜನೆಯಲ್ಲಿ ಎರೆಹುಳು ಗೊಬ್ಬರ ಘಟಕಗಳ ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣಕ್ಕೆ ರೈತರಿಗೆ ಉತ್ತೇಜನ ನೀಡಬೇಕು ಎಂದು ಕೃಷಿ ಅಧಿಕಾರಿ ಗುರುನಾಥ ಅವರಿಗೆ ಸೂಚನೆ ನೀಡಿದರು.
‘ಸಾಮಾಜಿಕ ಅರಣ್ಯ ಇಲಾಖೆಯಿಂದ ರಾಜಲಬಂಡಾ ಹಾಗೂ ಗೋರ್ಕಲ್ ಗ್ರಾಮಗಳಲ್ಲಿ ನೆಡುತೋಪುಗಳನ್ನು ನಿರ್ಮಾಣ ಮಾಡಬೇಕು. ಪ್ರತಿ ವರ್ಷ 30 ಸಾವಿರ ಸಸಿಗಳನ್ನು ನೆಡುವುದಕ್ಕೆ ಕ್ರಮಕೈಗೊಳ್ಳಬೇಕು' ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ರಮೇಶ ಅವರಿಗೆ ಸೂಚಿಸಿದರು. ಇತರ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು.
ತಾ.ಪಂ ಇಒ ಖಾಲೀದ್ ಅಹ್ಮದ್ ಮತ್ತು ಎಲ್ಲ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.