ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನಾಯಕರಿಗೆ ಅಖಂಡ ಭಾರತ ಇಷ್ಟವಿಲ್ಲ: ಕೆ.ಎಸ್. ಈಶ್ವರಪ್ಪ

Published 2 ಫೆಬ್ರುವರಿ 2024, 4:42 IST
Last Updated 2 ಫೆಬ್ರುವರಿ 2024, 4:42 IST
ಅಕ್ಷರ ಗಾತ್ರ

ರಾಯಚೂರು: ಕಾಂಗ್ರೆಸ್‍ ನಾಯಕರಿಗೆ ಭಾರತ ದೇಶ ಅಖಂಡವಾಗಿರುವುದು ಇಷ್ಟವಿಲ್ಲ. ಹಿಂದೆ ಭಾರತ– ಪಾಕಿಸ್ತಾನ ವಿಭಜಿಸಿದ ನಾಯಕರು, ಈಗ ದಕ್ಷಿಣ ಭಾರತ ಪ್ರತ್ಯೇಕದ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

ಕೇಂದ್ರ ಬಜೆಟ್ ವಿಚಾರದಲ್ಲೂ ಕಾಂಗ್ರೆಸ್ ನಾಯಕರು ಉತ್ತರ ಭಾರತ, ದಕ್ಷಿಣ ಭಾರತ ಎಂದು ಇಬ್ಭಾಗ ಮಾಡುತ್ತಿದ್ದಾರೆ. ಸಂಸದ ಡಿ.ಕೆ.ಸುರೇಶ ಇದು ಕೇಂದ್ರದ ಬಜೆಟ್, ರಾಜ್ಯದ ಬಜೆಟ್ ಅಲ್ಲ ಎಂಬುದನ್ನು ತಿಳಿದು ಪ್ರತಿಕ್ರಿಯಿಸಲಿ. ಯಾವ ಯೋಜನೆಯಲ್ಲಿ ರಾಜ್ಯಗಳಿಗೆ ಎಷ್ಟು ಪಾಲಿದೆ ಎಂದು ಹೇಳಿಲ್ಲ. ರಾಜ್ಯಕ್ಕೆ ಎಷ್ಟು ಬರಬೇಕು ಎಂಬುದನ್ನು ಪಟ್ಟಿ ಮಾಡಿ ಕೊಡಲಿ. ನಾವು ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಗುರುವಾರ ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು.

ಡಿ.ಕೆ.ಸುರೇಶ ಅವರು ಪ್ರತ್ಯೇಕ ರಾಷ್ಟ್ರವಾಗಲಿ ಎಂದ ತಕ್ಷಣ ದೇಶ ಒಡೆಯೋಕೆ ಆಗಲ್ಲ. ನಮ್ಮನ್ನು ಬಿಟ್ಟು (ಬಿಜೆಪಿ ಹೊರತುಪಡಿಸಿ) ಈ ದೇಶದಲ್ಲಿ ಬೇರೆ ಯಾರೂ ಅಧಿಕಾರಕ್ಕೆ ಬರಲ್ಲ. ಈ ದೇಶ ಒಡೆಯುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ ಎಂದರು.

ಪ್ರಧಾನಿ ಮೋದಿಯವರ ವಿಶೇಷ ಬಜೆಟ್ ಇದಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ. ಬಡವ, ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಯುವಕ, ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಈ ಬಜೆಟ್‍ನಲ್ಲಿದೆ. ₹ 7 ಲಕ್ಷದವರೆಗೆ ತೆರಿಗೆ ವಿನಾಯತಿ, ಮೀನುಗಾರಿಕೆಗೆ ವಿಶೇಷ ಸಚಿವಾಲಯ, ಗರ್ಭಕೋಶ ಕ್ಯಾನ್ಸರ್‌ಗೆ ಉಚಿತ ಚಿಕಿತ್ಸೆ ಸೌಲಭ್ಯ ನೀಡಿರುವುದು ಉತ್ತಮ ನಿರ್ಧಾರ. ಇದು ಜನಪರ ಬಜೆಟ್ ಎಂದು ಬಣ್ಣಿಸಿದರು.

‘ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ಅವರು ಕೇಂದ್ರ ಸರ್ಕಾರ ದಕ್ಷಿಣ ಭಾರತ ರಾಜ್ಯದ ತೆರಿಗೆ ಹಣ ನೀಡದೇ ತಾರತಮ್ಯ ಮಾಡುತ್ತಿದೆ, ಇದೇ ಧೋರಣೆ ಮುಂದುವರಿದರೆ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುತ್ತೇವೆ’ ಎಂದು ಗುರುವಾರ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT