ಚಂದ್ರಕಾಂತ ಮಸಾನಿ
ರಾಯಚೂರು: ರಾಜ್ಯ ಸರ್ಕಾರವು ಮೊಟ್ಟೆಯ ತಾಜಾತನ ಹಾಗೂ ಬಾಳಿಕೆ ಅವಧಿಗೆ ಮಹತ್ವ ನೀಡದಿರುವುದರಿಂದ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳು ಸತ್ವರಹಿತ ಮೊಟ್ಟೆಗಳನ್ನು ಸೇವಿಸುವಂತಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಸಾಗಣೆ ವೆಚ್ಚ ಉಳಿಸಲು ಗುತ್ತಿಗೆದಾರರು 15 ದಿನಗಳಿಗೆ ಒಮ್ಮೆ ಅಂಗನವಾಡಿಗಳಿಗೆ ಮೊಟ್ಟೆ ಪೂರೈಸುತ್ತಿದ್ದಾರೆ. ಇದರಿಂದ ಮೊಟ್ಟೆ ತಾಜಾತನ ಕಳೆದುಕೊಂಡು ಪೌಷ್ಟಿಕತೆ ಪ್ರಮಾಣವೂ ಕ್ಷೀಣಿಸುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರುತ್ತಾರೆ.
28 ಡಿಗ್ರಿ ಸೆಲ್ಸಿಯಸ್ ತಾಪಮಾನದವರೆಗೂ ಮೊಟ್ಟೆಗಳು ಉತ್ತಮ ಸ್ಥಿತಿಯಲ್ಲಿ ಇರುತ್ತವೆ. ಕಲ್ಯಾಣ ಕರ್ನಾಟಕದಲ್ಲಿ ಸರಾಸರಿ 32 ಡಿಗ್ರಿ ಗರಿಷ್ಠ ಉಷ್ಣಾಂಶ ಇರುತ್ತದೆ. ಪೂರೈಕೆಯಾದ ಮೊಟ್ಟೆಗಳನ್ನು 15 ದಿನಗಳ ಕಾಲ ಟ್ರೇನಲ್ಲೇ ಇಟ್ಟುಕೊಳ್ಳಬೇಕಾಗಿದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮಕ್ಕಳು ಹಾಗೂ ಮಹಿಳೆಯರಲ್ಲಿ ಅಪೌಷ್ಟಿಕತೆಯ ಪ್ರಮಾಣವೂ ಹೆಚ್ಚಿದೆ. ರಾಯಚೂರು ಜಿಲ್ಲೆಯಲ್ಲಿ 40 ಸಾವಿರ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ತಿಂಗಳಿಗೆ 25 ಹಾಗೂ ಅಪೌಷ್ಟಿಕತೆ ಇರುವ 30 ಸಾವಿರ ಮಕ್ಕಳಿಗೆ ವಾರಕ್ಕೆ 6 ಮೊಟ್ಟೆ ನೀಡಲಾಗುತ್ತಿದೆ. ಅಂಗನವಾಡಿಯ 1.7 ಲಕ್ಷ ಮಕ್ಕಳಿಗೆ ವಾರಕ್ಕೆ 6 ಮೊಟ್ಟೆ ಕೊಡಲಾಗುತ್ತಿದೆ. 15 ದಿನಗಳಿಗೊಮ್ಮೆ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಅಪೌಷ್ಟಿಕತೆ ಇರುವ ಮಹಿಳೆಯರು ಹಾಗೂ ಮಕ್ಕಳು 15 ದಿನಗಳ ಹಿಂದಿನ ಮೊಟ್ಟೆಗಳನ್ನೇ ಸೇವಿಸುತ್ತಿರುವ ಕಾರಣ ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗುತ್ತಿಲ್ಲ ಎಂದು ಪೌಷ್ಟಿಕತಜ್ಞರು ಬೇಸರ ವ್ಯಕ್ತಪಡಿಸುತ್ತಾರೆ.
‘ಉತ್ತಮ ಕೋಳಿ ಮೊಟ್ಟೆ 60ರಿಂದ 70 ಗ್ರಾಂ ಇರುತ್ತದೆ. ಸಾಮಾನ್ಯ ವಾತಾವರಣದಲ್ಲಿ ಕೋಳಿಯು ಮೊಟ್ಟೆ ಇಟ್ಟ ದಿನದಿಂದ 7 ದಿನಗಳವರೆಗೆ ಅದು ತಾಜಾ ಇರುತ್ತದೆ. ನಂತರ ಅದು ಪೋಷಕಾಂಶ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಶುರುವಾಗುತ್ತದೆ. ಬಿಸಿಲು ಹೆಚ್ಚಾದಂತೆ ಅದರ ಜೀವಿತಾವಧಿಯೂ ಕಡಿಮೆಯಾಗುತ್ತ ಹೋಗುತ್ತದೆ’ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಪ್ರಕಾಶ ರಾಠೋಡ ಹೇಳುತ್ತಾರೆ.
‘ಕೋಳಿ ಮೊಟ್ಟೆ ಇಟ್ಟ ದಿನವೇ ರೆಫ್ರಿಜಿರೇಟರ್‌ನಲ್ಲಿ ಇಟ್ಟರೆ ಮೂರರಿಂದ ನಾಲ್ಕು ವಾರಗಳವರೆಗೂ ಬಾಳಿಕೆ ಬರುತ್ತದೆ. ಇಲ್ಲದಿದ್ದರೆ ವಾರದಲ್ಲೇ ಹಾಳಾಗುತ್ತದೆ. ಹೀಗಾಗಿ ಮೊಟ್ಟೆಯನ್ನು ತಂಪಾದ ಸ್ಥಳದಲ್ಲೇ ಇಡುವುದು ಒಳ್ಳೆಯದು’ ಎಂದು ಪಶು ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
‘ಬಿಸಿಲಿನ ಕಾರಣಕ್ಕೆ ಹೊಸಪೇಟೆಯಲ್ಲಿ ಮಾತ್ರ ರೆಫ್ರಿಜಿರೇಟರ್ ಕೊಡಲಾಗಿದೆ. ರಾಯಚೂರು ಜಿಲ್ಲೆಗೆ 15 ದಿನಗಳಿಗೆ ಒಮ್ಮೆ ಮೊಟ್ಟೆಗಳನ್ನು ಪೂರೈಸಲಾಗುತ್ತಿದೆ. ಅಂಗನವಾಡಿಗಳಲ್ಲಿ ಕಾರ್ಯಕರ್ತರು ಟ್ರೇಗಳಲ್ಲಿ 15 ದಿನಗಳವರೆಗೆ ಇಟ್ಟುಕೊಳ್ಳುತ್ತಾರೆ. ಮೊಟ್ಟೆಗಳ ತಾಜಾತನ ಉಳಿಯಲು ಜಿಲ್ಲೆಯ ಅಂಗನವಾಡಿಗಳಿಗೂ ರೆಫ್ರಿಜಿರೇಟರ್ ಕೊಡಬೇಕು’ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್. ಪದ್ಮ ಮನವಿ ಮಾಡುತ್ತಾರೆ.
ಮೊಟ್ಟೆ ಪರೀಕ್ಷಿಸುವ ವಿಧಾನ
ಮೊಟ್ಟೆಯನ್ನು ಒಂದು ಗಾಜಿನ ಲೋಟದ ನೀರಿನಲ್ಲಿ ಅದ್ದಿದಾಗ ಅದು ಸಂಪೂರ್ಣವಾಗಿ ಮುಳುಗಿದರೆ ತಾಜಾ ಮೊಟ್ಟೆಯಾಗಿದೆ ಎಂದರ್ಥ. ಸ್ವಲ್ಪ ಹಳೆಯ ಮೊಟ್ಟೆ ಇದ್ದರೆ ಮೇಲಕ್ಕೆ ಏರುತ್ತದೆ. ಕೆಟ್ಟ ಅಥವಾ ಅವಧಿ ಮೀರಿದ ಮೊಟ್ಟೆಯು ನೀರಿನ ಮೇಲೆ ತೇಲುತ್ತದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಮೊಟ್ಟೆ ಕುದಿಸಿ ಉದ್ದವಾಗಿ ಕತ್ತರಿಸಿ ನೋಡಬೇಕು. ಮಧ್ಯದಲ್ಲಿ ಹಳದಿ ಲೋಳೆ ಸಡಿಲವಾಗಿದ್ದರೆ ಅಪಾಯ ಎಂದೇ ಭಾವಿಸಬೇಕು. ಅವಧಿ ಮೀರಿದ ಮೊಟ್ಟೆಗಳು ಸೇವಿಸಿದರೆ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮೊಟ್ಟೆಯನ್ನು ಕೋಣೆಯ ಉಷ್ಣಾಂಶದಲ್ಲಿ (28+/-2 ° C) ಇಟ್ಟರೆ ಅದು 10ರಿಂದ 12 ದಿನಗಳವರೆಗೆ ತಾಜಾ ಇರಬಹುದು. ಕೊಠಡಿಯ ಉಷ್ಣತೆ ಹೆಚ್ಚಾದರೂ ಗುಣಮಟ್ಟ ಕುಸಿಯಲು ಪ್ರಾರಂಭವಾಗುತ್ತದೆ. ನಂತರ ಅಪಾಯಕಾರಿ ಸಾಲ್ಮೊನೆಲ್ಲಾ ಬ್ಯಾಕ್ಟಿರಿಯಾ ಕಾಣಿಸಿಕೊಳ್ಳುತ್ತದೆ. ಕೆಟ್ಟ ಮೊಟ್ಟೆ ಸೇವಿಸುವುದರಿಂದ ಭೇದಿ ಹೊಟ್ಟೆ ನೋವು ಜ್ವರ ವಾಂತಿ ವಾಕರಿಕೆ ಶೀತ ತಲೆನೋವು ಶುರುವಾಗುತ್ತದೆ. ಹೀಗಾಗಿ ತಾಜಾ ಮೊಟ್ಟೆಯನ್ನೇ ಸೇವಿಸಬೇಕು ಎಂದು ಪಶು ವೈದ್ಯರು ಸಲಹೆ ನೀಡಿದ್ದಾರೆ.
- ಮೊಟ್ಟೆ ಗಾತ್ರವೂ ಕಡಿಮೆ
ಹೊಸಪೇಟೆ ಮೂಲದ ಕೆಸಿಸಿಎಫ್ ಕಂಪನಿ ರಾಯಚೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಡಿಮೆ ಗಾತ್ರದ ಮೊಟ್ಟೆ ಪೂರೈಕೆ ಮಾಡುತ್ತಿದೆ. ಪಾಲಕರು ಹಾಗೂ ಗರ್ಭಿಣಿಯರು ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇಲಾಖೆಯು ಕೆಸಿಸಿಎಫ್ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದ ಪ್ರಕಾರ ಕನಿಷ್ಠ 50ರಿಂದ 60 ಗ್ರಾಂ ತೂಕ ಇರಬೇಕು. ಆದರೆ ರಾಯಚೂರು ಜಿಲ್ಲೆಗೆ ಪೂರೈಸುತ್ತಿರುವ ಕೆಲ ಮೊಟ್ಟೆಗಳು 35ರಿಂದ 40 ಗ್ರಾಂ ತೂಕ ಇವೆ. ‘ಜಿಲ್ಲೆಯ ಕೆಲ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ರ್‍ಯಾಂಡಮ್ ಆಗಿ ಮೊಟ್ಟೆಗಳನ್ನು ಪರಿಶೀಲಿಸಿದಾಗ ಸಣ್ಣ ಗಾತ್ರದ ಮೊಟ್ಟೆ ಕೊಟ್ಟಿರುವುದು ಗಮನಕ್ಕೆ ಬಂದಿದೆ. ದೊಡ್ಡ ಗಾತ್ರದ ಮೊಟ್ಟೆ ಪೂರೈಕೆ ಮಾಡುವಂತೆ ಗುತ್ತಿಗೆ ಪಡೆದ ಕಂಪನಿಗೆ ತಾಕೀತು ಮಾಡಿದ್ದೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನಕುಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.