ರಾಯಚೂರು: ತಾಲ್ಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಹಳೆ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಮಾರಕಾಸ್ತ್ರಗಳಿಂದ ಹೊಡೆದಾಡಿದರಿಂದ ಗಂಭೀರವಾಗಿ ಗಾಯಗೊಂಡ ಭೀಮೇಶ ನಾಯಕ (38) ಮೃತಪಟ್ಟಿದ್ದು, ರಾಮಲಮ್ಮ, ಅಲಾರಿ ನಾಯಕ, ದೂಳಯ್ಯ ಅವರಿಗೆ ಗಂಭೀರ ಗಾಯಗಳಾಗಿವೆ. ಕಟ್ಟಿಗೆ, ಕುಡುಗೋಲು, ಭರ್ಜಿಗಳಿಂದ ಹಲ್ಲೆ ಮಾಡಲಾಗಿದೆ.
ಇನ್ನೊಂದು ಗುಂಪಿನ ಯರ್ರಣ್ಣ, ದೊಳ್ಳಯ್ಯ, ದೇವಪ್ಪ, ಮಾದಗಾನು, ಗೊರಿಯಾನು, ವೀರೇಶ, ತಾಯಪ್ಪ, ಕೃಷ್ಣಗಾರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಎರಡು ಕುಟಂಬಗಳ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಭಾನುವಾರ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಘಟನೆಯಿಂದ ಗ್ರಾಮದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಮಾರಾಮಾರಿಯಲ್ಲಿ ಗಾಯಗೊಂಡವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಡಪನೂರು ಠಾಣೆಯ ಪೊಲೀಸರು 22 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.