ಬುಧವಾರ, ಅಕ್ಟೋಬರ್ 21, 2020
26 °C

ಬಹುಮತವಿದ್ದರೂ ಪೈಪೋಟಿ

ಪ್ರಕಾಶ ಮಸ್ಕಿ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: 23 ಸದಸ್ಯರ ಬಲದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಮರು ಪರಿಶೀಲಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಧಿಕಾರ ಪಡೆಯಲು ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.

ಹಿಂದೆ ಪ್ರಕಟವಾದ ಮೀಸಲಾತಿ ಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿತ್ತು. 13ನೇ ವಾರ್ಡ್ ಸದಸ್ಯೆ ವಿಜಯಲಕ್ಷ್ಮಿ ಬಿ. ಪಾಟೀಲ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವರು ಎನ್ನಲಾಗಿತ್ತು. ನ್ಯಾಯಾಲಯದ ಸೂಚನೆ ಯಂತೆ ಸರ್ಕಾರ ಮೀಸಲಾತಿ ಮರು ಪರಿಶೀಲನೆ ಮಾಡಿದ ನಂತರ ಮಹಿಳಾ ಮೀಸಲು ಕ್ಷೇತ್ರ ಕೈ ತಪ್ಪಿದ್ದರಿಂದ ಮನೆ ಬಾಗಿಲಿಗೆ ಬಂದಿದ್ದ ಅದೃಷ್ಟ ಕೊನೆ ಗಳಿಗೆಯಲ್ಲಿ ಕೈ ತಪ್ಪಿದಂತಾಗಿತ್ತು.

23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 8, ಬಿಜೆಪಿ 12 ಹಾಗೂ 3 ಜನ ಪಕ್ಷೇತರು ಇದ್ದಾರೆ. ಬಿಜೆಪಿ ಒಬ್ಬ ಸದಸ್ಯರು ನಿಧನರಾಗಿದ್ದು ಪುರಸಭೆಯ ಬಲ 22ಕ್ಕೆ ಇಳಿದಿದೆ.

ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ ಅವರು ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ಗೆ ರಾಜೀ ನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಬಹುತೇಕ ಸದಸ್ಯರು ಹಾಗೂ ಪಕ್ಷೇತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಪುರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಅಧ್ಯಕ್ಷ ಸ್ಥಾನಕ್ಕೆ ಹಿಂದಿನ ಅವಧಿಯಲ್ಲಿ ಪುರಸಭೆ ಉಪಾಧ್ಯಕ್ಷರಾಗಿದ್ದ ರವಿಕುಮಾರ ಪಾಟೀಲ, ಸದಸ್ಯ ದೇವಣ್ಣ ನಾಯಕ ಹಾಗೂ ಮಹಿಳಾ ಮೀಸಲಾತಿಯಿಂದ ವಂಚಿತಗೊಂಡ ವಿಜಯಲಕ್ಷ್ಮೀ ಬಸನಗೌಡ ಪಾಟೀಲ್ ಆಕಾಂಕ್ಷಿಗಳಿದ್ದಾರೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಪುಷ್ಪಾವತಿ ಸೊಪ್ಪಿಮಠ, ಕವಿತಾ ಮಾಟೂರು, ಪದ್ಮಾವತಿ ರಾಜಾನಾಯಕ ಆಕಾಂಕ್ಷೆಗಳಾಗಿದ್ದಾರೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ತೆಗೆದುಕೊಳ್ಳುವ ನಿರ್ಣಯ ಇಲ್ಲಿ ಅಂತಿಮವಾಗಲಿದೆ ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.