ಶನಿವಾರ, ಜೂನ್ 6, 2020
27 °C
ಅಧಿಕಾರಿಗಳ ಸಭೆಯಲ್ಲಿ ಉಪಮುಖ್ಯಮಂತ್ರಿ ಸೂಚನೆ

ಜೀವನ ಉಳಿಸುವ ಸವಾಲು: ಡಿಸಿಎಂ ಲಕ್ಷ್ಮಣ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ನಮ್ಮ ಹೋರಾಟ ಕೊರೊನಾ‌ ವಿರುದ್ಧವೆ ಹೊರತು ಕೊರೊನಾ ರೋಗಿಗಳ‌ ವಿರುದ್ಧವಲ್ಲ. ಜೀವ ಉಳಿಸಿಕೊಳ್ಳುವುದು ಮತ್ತು ಜೀವನ ನಡೆಸುವ ಎರಡೂ ಸವಾಲುಗಳಿವೆ. ನಿಯಮ ಪಾಲನೆ ಅಲಕ್ಷ್ಯ ಮಾಡಬಾರದು’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕೋವಿಡ್‌–19 ಕುರಿತಾದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ’ಯಲ್ಲಿ ಮಾತನಾಡಿದರು.

‘ಕೊರೊನಾ ಸೋಂಕು ಮುಂಬೈ, ಪುಣೆ, ಗುಜರಾತ್‌ನಿಂದ ಬಂದವರಲ್ಲಿ ಮಾತ್ರ ಬಂದಿದೆ ಎನ್ನುವ ನಿಷ್ಕಾಳಜಿ ತೋರಿಸಬಾರದು. ನಡವಳಿಕೆಯಿಂದ ಮಾತ್ರ ಕೊರೊನಾ ಹತೋಟಿಗೆ ತರಬಹುದು ಎನ್ನುವುದಕ್ಕೆ ಮೈಸೂರು ಜಿಲ್ಲೆ ಸಾಕ್ಷಿ’ ಎಂದರು.

‘ಮೈಸೂರಿನಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಮತ್ತು ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದ್ದರಿಂದ ಮತ್ತೆ ಅದು ಹಸಿರು ವಲಯಕ್ಕೆ ಬಂದಿದೆ. ರಾಜ್ಯದಲ್ಲಿ ಶೇ 45 ರಷ್ಟು ಕೊರೊನಾ ರೋಗಿಗಳು ಗುಣಮುಖವಾಗಿ ಆಸ್ಪತ್ರೆಯಿಂದ ಮರಳಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣ ಕಡಿಮೆ ಆಗಿದೆ. ದಿನನಿತ್ಯ ಜೀವನಕ್ಕೆ ತೊಂದರೆ ಆಗಬಾರದು ಎಂದು ಕೆಲವು ಸಡಿಲಿಕೆಗಳನ್ನು ಮಾಡಲಾಗಿದ್ದು, ಜನರು ಜಾಗೃತಿಯಿಂದ ನಿಯಮಗಳನ್ನು ಪಾಲಿಸಬೇಕು’ ಎಂದು ಹೇಳಿದರು. 

‘ಈ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕಿದೆ. ಅಂತರ ಕಾಯ್ದುಕೊಂಡು ಸಂಚರಿಸುವುದಕ್ಕೆ ಸೂಚಿಸಲಾಗಿದೆ. ಸರ್ಕಾರಿ ಬಸ್ ಸಂಚಾರದಲ್ಲಿ ನಿಯಮ ಕಡ್ಡಾಯ ಪಾಲನೆ ಆಗುತ್ತಿರುವುದು ಒಳ್ಳೆಯ ಸಂಗತಿ. ಬೈಕ್ ಗಳ‌ ಮೇಲೆ ಒಬ್ಬರಗಿಂತ ಹೆಚ್ಚು ಜನರು ಸಂಚರಿಸಲು ಅವಕಾಶ ನೀಡಬಾರದು. ಕೊರೊನಾ ವಿರುದ್ಧದ ಹೋರಾಟ ಇನ್ನು 8 ದಿನಗಳಲ್ಲಿ ಮುಗಿಯುತ್ತದೆ ಎನ್ನುವ ಭ್ರಮೆ ಬೇಡ’ ಎಂದು ತಿಳಿಸಿದರು.

ಕ್ವಾರಂಟೈನ್ ಇರಿಸಬೇಕಾದವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಕಟ್ಟಡಗಳು ದೊರೆಯುವ ಸಮಸ್ಯೆ ಉಂಟಾಗಬಹುದು. ಹೀಗಾಗಿ ಸ್ಯಾಂಪಲ್ ಕಳುಹಿಸುವ ಸಂಖ್ಯೆ ಹೆಚ್ಚಿಸಬೇಕು.‌ ನೆಗೆಟಿವ್ ಇದ್ದವರನ್ನು 14 ದಿನಗಳಾಗದಿದ್ದರೂ ಬಿಡುಗಡೆ ಮಾಡಬೇಕು’ ಎಂದು ಸೂಚಿಸಿದರು.

‘ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಕೆಲಸ ಮಾಡಬೇಕಿದೆ. ಆರಂಭದಲ್ಲಿ ಕೊರೊನಾ ಸೋಂಕು ಬರದಂತೆ ತಡೆಯೊಡ್ಡಿದ್ದು ಪ್ರಸಂಶನೀಯ. ಇನ್ನು ಮೇಲೆ‌ ಜವಾಬ್ದಾರಿ ಹೆಚ್ಚಾಗಿದೆ. ವಲಸಿಗರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಆತುರ ಸಹಜವಾಗಿ ಇದ್ದೇ ಇರುತ್ತದೆ. ಅವರನ್ನು ಕರೆದುಕೊಳ್ಳುವುದು ಅನಿವಾರ್ಯ. ವಿಶೇಷವಾಗಿ ಮುಂಬೈ, ಪುಣೆ, ಕರಾಡ, ಸತಾರಾಗಳಿಂದ ಬರುವವರಲ್ಲಿ ಸೋಂಕು ಕಂಡು ಬರುತ್ತಿದೆ. ಇಡೀ ಮಹಾರಾಷ್ಟ್ರ ಕೊರೊನಾ ಸೋಂಕಿತವಾಗಿಲ್ಲ’ ಎಂದರು.

‘ಮಹಾರಾಷ್ಟ್ರದಿಂದ ಅನೇಕ ಜನರು ಪರವಾನಿಗೆ ಇಲ್ಲದೆಯೂ‌‌ ಬಂದಿದ್ದಾರೆ. ಮಹಾರಾಷ್ಟ್ರದ ಮುಂಬೈ, ಪುಣೆಗಳಿಂದ‌ ಬರುವವರನ್ನು ತಡೆಯಲು ಸರ್ಕಾರದಿಂದ ಕ್ರಮ ಯೋಜಿಸುತ್ತಿದೆ. ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದು ತಿಳಿಸಿದರು.

‘ಕೊರೊನಾ ರೋಗ ತಡೆಗೆ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರೂ ಮಾಡೋಣ. ಬರಗಾಲದ ಸನ್ನಿವೇಶದಲ್ಲಿ ದುಡಿಯುವ ಕೈಗಳಿಗೆಲ್ಲ ಕೆಲಸ ಕೊಡಬೇಕು. ಕುಡಿಯುವ ನೀರಿನ ಸಮಸ್ಯೆಗಳನ್ನು ಶಾಸಕರು ಜಿಲ್ಲಾಡಳಿತದ ಗಮನಕ್ಕೆ ತರಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಮಾತನಾಡಿ, ಎರಡು ತಿಂಗಳು ಜಿಲ್ಲೆ ಹಸಿರು ವಲಯದಲ್ಲಿತ್ತು.‌ ಆದರೆ ಕಳೆದ 15 ದಿನಗಳಲ್ಲಿ ಬದಲಾಗಿದ್ದು, 10 ಸಾವಿರ ಜನರು ಹೊರರಾಜ್ಯಗಳಿಂದ ಬಂದಿದ್ದಾರೆ. ಬಹುತೇಕ ಜನರನ್ನು ಸರ್ಕಾರಿ ಹಾಸ್ಟೇಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕೆಲವರು ಖಾಸಗಿ ಲಾಡ್ಜ್ ಗಳಲ್ಲಿ ಉಳಿದುಕೊಂಡಿದ್ದು, ಅಲ್ಲಿಯೇ ಕ್ವಾರಂಟೈನ್‌ ಮಾಡಲಾಗಿದೆ ಇವರೆಗೂ 16 ಪಾಜಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಎಲ್ಲರನ್ನು ಓಪೆಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದುವರೆಗೂ ಯಾರಲ್ಲೂ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಆದರೆ, ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.

‘ಮಹಾರಾಷ್ಟ್ರದವರನ್ನು ಪ್ರತ್ಯೇಕ ಇರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಶೀಘ್ರದಲ್ಲೆ ಕೊರೊನಾ ಪರೀಕ್ಷೆ ಪ್ರಯೋಗಾಲಯ ಆರಂಭವಾಗಲಿದೆ.‌ ಮಹಾರಾಷ್ಟ್ರದಿಂದ ಬರುವುದಕ್ಕೆ ಈಗ ಅನುಮತಿ ನೀಡುತ್ತಿಲ್ಲ. ಪ್ರತಿಯೊಂದು ಕ್ವಾರಂಟೈನ್ ಕೇಂದ್ರಗಳಲ್ಲಿ ಪ್ರತಿ ಮೂರು ದಿನಗಳಿಗೊಮ್ಮೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಇದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ 12 ತಜ್ಞ ವೈದ್ಯರ ತಂಡ ಮಾಡಲಾಗಿದೆ. ಇವರು ಜಿಲ್ಲೆಯ ರೋಗಿಗಳ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ. ಇದುವರೆಗೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ರಿಮ್ಸ್‌ ನಿರ್ದೇಶಕ ಡಾ. ಬಸವರಾಜ ಪೀರಾಪುರ ಮಾತನಾಡಿ, ಚಿಕಿತ್ಸಾ ವ್ಯವಸ್ಥೆಗೆ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ಮಾರ್ಗದರ್ಶಿ ಸೂಚನೆಗಳು ಬಂದಿವೆ. ಪ್ರಯೋಗಾಲಯ ಸ್ಥಾಪಿಸಲು ಜಿಲ್ಲಾಡಳಿತದಿಂದ ₹50 ಲಕ್ಷ ಹಣ ಬಂದಿದೆ. ಸದ್ಯಕ್ಕೆ ಆರ್‌ಟಿಪಿಸಿಆರ್‌ ಎರಡು ಯಂತ್ರಗಳು ಇದ್ದು, ದಿನಕ್ಕೆ 20 ಪರೀಕ್ಷೆಗಳನ್ನು ಮಾಡಬಹುದು. ಈಗಿರುವ ಯಂತ್ರದಿಂದ ನೆಗೆಟಿವ್ ಮಾತ್ರ ಹೇಳಬಹುದು. ಪಾಜಿಟಿವ್ ಇದ್ದರೆ, ಮತ್ತೆ ಅದನ್ನು ಬಳ್ಳಾರಿ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎನ್.ಎಸ್.ಬೋಸರಾಜು ಮಾತನಾಡಿ, ಪ್ರಯೋಗಾಲಯ ಸ್ಥಾಪನೆಗೆ ಏಕೆ ವಿಳಂಬವಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿ 60 ದಿನಗಳಾಗಿದೆ’ ಎಂದು ಪ್ರಶ್ನಿಸಿದರು.

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಸದ್ಯಕ್ಕೆ ಹೊರರಾಜ್ಯದಿಂದ ಬಂದವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ಹೊರ ಜಿಲ್ಲೆಯಿಂದ ಬಂದವರನ್ನು ಕೂಡಾ ಕ್ವಾರಂಟೈನ್ ಮಾಡಬೇಕು. ಸದ್ಯಕ್ಕೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಇದ್ದವರಲ್ಲಿ ಮಾತ್ರ ಸೋಂಕು ಕಂಡು ಬರುತ್ತಿದೆ. ಅದು ಹೊರಗಡೆ ಜನರಿಗೆ ಹರಡುವುದು ಬೇಡ. ಇದಕ್ಕಾಗಿ ಪರಿಸ್ಥಿತಿ ನಿಭಾಯಿಸಲು ಇನ್ನಷ್ಟು ಕಠಿಣ ಕ್ರಮಗಳನ್ನು ಅನುಸರಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕು ಎಂದು ಸಲಹೆ ನೀಡಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಬೇರೆ ರಾಜ್ಯಗಳಿಂದ ಬಂದವರನ್ನೆಲ್ಲ ಒಂದೇ ಕ್ವಾರಂಟೈನ್ ಕೇಂದ್ರದಲ್ಲಿ ಇಡಬಾರದು. ಮಹಾರಾಷ್ಟ್ರ, ಗುಜರಾತ್ ಗಳಿಂದ ಬಂದವರನ್ನು ಪ್ರತ್ಯೇಕ ಇಡಬೇಕು ಎಂದರು.

 ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಮಾತನಾಡಿ, ಆಟೊ ಚಾಲಕರಿಗೆ, ಸಾರ್ವಜನಿಕರಿಗೆ ಮಾಸ್ಕ್ ಧರಿಸಲು ಸೂಚನೆ ನೀಡಲಾಗುತ್ತಿದೆ. ಎಲ್ಲರೂ ನಿಯಮ ಪಾಲನೆ ಮಾಡುತ್ತಿದ್ದಾರೆ. ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸುವ ಕ್ರಮ ಜಾರಿಯಲ್ಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಜನರು ಹೊರಗಡೆ ಸಂಚರಿಸುವುದು ಹೆಚ್ಚಾಗಿದೆ. ಹೀಗಾಗಿ ಸೋಂಕು ತಡೆ ಮುನ್ನಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್‌ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು