ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 3ನೇ ಅಲೆ ವ್ಯಾಪಿಸದಂತೆ ಕ್ರಮಕ್ಕೆ ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅಧ್ಯಕ್ಷತೆಯಲ್ಲಿ ಸಭೆ
Last Updated 11 ಜನವರಿ 2022, 12:49 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ವ್ಯಾಪಿಸದಂತೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ರಿಮ್ಸ್‌ ಡೀನ್‌ ಅವರು ಒಟ್ಟಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರ ಹಾಗೂ ಪಟ್ಟಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಬೇಕು. ಕೂಡಲೇ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕು. ಕೋವಿಡ್ ಪಾಸಿಟಿವ್ ಇದ್ದವರನ್ನು ಒಂದು ವಾರ ಅದರಲ್ಲಿ ಇಡಬೇಕು. ಕೋವಿಡ್ ನಿಯಂತ್ರಣದಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಜನದಟ್ಟಣೆ ಆಗದಂತೆ ನಿಗಾ ವಹಿಸಬೇಕು. ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಳೆದ ವರ್ಷದ ವೇತನ ಇನ್ನೂ ಜಮಾಗೊಳಿಸದ ಆರೋಗ್ಯಾಧಿಕಾರಿಯ ನಡವಳಿಕೆ ಸರಿಯಲ್ಲ. ಅನುದಾನ ಬಿಡುಗಡೆಯಾಗಿ 20 ದಿನಗಳಾದರೂ ವೇತನ ಮಾಡದಿರುವುದು ದೊಡ್ಡ ತಪ್ಪು. ಇನ್ನು ಮೂರು ದಿನಗಳಲ್ಲಿ ವೇತನ ಪಾವತಿಸದಿದ್ದರೆ, ಜಿಲ್ಲಾಧಿಕಾರಿಯು ನೇರವಾಗಿ ಡಿಎಚ್ಓ ವಿರುದ್ಧ ಸರ್ಕಾರಕ್ಕೆ ವರದಿ ಕಳಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿಯು ಕಡತಗಳನ್ನು ಅನಗತ್ಯ ವಿಳಂಬ ಮಾಡಬಾರದು. ಬೇಗನೆ ‌ವಿಲೇವಾರಿ ಮಾಡಬೇಕು. ಒಂದು ವೇಳೆ ಕಡತಗಳು ನನೆಗುದಿದೆ‌ ಬಿದ್ದರೆ ಜಿಲ್ಲಾಡಳಿತದ ಬಗ್ಗೆಯೇ ಪರಿಶೀಲಿಸಿ ಕ್ರಮ ವಹಿಸಬೇಕಾಗುತ್ತದೆ. ವಿವಿಧ ಇಲಾಖೆಯ ಅಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಅಬಕಾರಿ ಇಲಾಖೆ ಬಗ್ಗೆ ದೂರುಗಳು ಬಹಳಷ್ಟಿವೆ. ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಮದ್ಯ ಸಾಗಣೆ ಆಗುತ್ತಿದೆ ಎನ್ನುತ್ತಿದ್ದಾರೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿದೆ. ಸಿರವಾರದಲ್ಲಿ ಮತ್ತೊಂದು ಎಂಎಸ್‌ಐಎಲ್‌ ಬೇಕೆಂದು ಶಾಸಕರು ಬೇಡಿಕೆ ಸಲ್ಲಿಸಿದ್ದು, ಅದಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.

ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ರಕ್ತ ಪರೀಕ್ಷೆಗಾಗಿ ಹೊಸ ಯಂತ್ರ ತಂದಿಟ್ಟು ವರ್ಷವಾಗಿದೆ. ಇದುವರೆಗೂ ಅದನ್ನು ಬಳಕೆ ಮಾಡಿಲ್ಲ. ಖಾಸಗಿಯವರನ್ನು ನೇಮಿಸಿ ಪರೀಕ್ಷೆ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.

ಕಳೆದ ವರ್ಷ ಆಸ್ಪತ್ರೆಗೆ ದಾಖಲಾಗುವಾಗ ಕೋವಿಡ್ ಪಾಸಿಟಿವ್ ಇದ್ದ ವ್ಯಕ್ತಿ, ಮೃತಪಟ್ಟ ನಂತರ ನೆಗೆಟಿವ್ ವರದಿ ಬಂದಿದೆ. ಕೆಲವು ಪ್ರಕರಣಗಳಲ್ಲಿ ಗಂಟಲು ದ್ರುವ ಪರೀಕ್ಷಿಸಿಲ್ಲ, ಆದರೂ ವ್ಯಕ್ತಿ ಮೃತಪಟ್ಟ ನಂತರ ಕೋವಿಡ್ ಪಾಸಿಟಿವ್ ಬಂದಿದೆ. ಇಂಥ ಪ್ರಕರಣಗಳಿಗೆ ಗಂಟಲುದ್ರವ ಸಂಗ್ರಹದ ಸಂಖ್ಯೆ ಇರುವುದಿಲ್ಲ. ಇಂಥವರಿಗೆ ಹೇಗೆ ಪರಿಹಾರ ಕೊಡಬೇಕು ಎಂಬುದನ್ನು ಎಡಿಸಿ ಅವರು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಕೋರಿದರು.

ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ಮಾತನಾಡಿ, ರಕ್ತ ಪರೀಕ್ಷೆ ಯಂತ್ರಗಳು ಯಾವ ಯಾವ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಡಿಎಚ್‌ಓ ಅವರು ವರದಿ ಸಲ್ಲಿಸಬೇಕು. ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್‌.ದುರುಗೇಶ ಮಾತನಾಡಿ, ಈಗಾಗಲೇ ಕೋವಿಡ್ ಸಾವುಗಳಿಗೆ ಪರಿಹಾರ ವಿತರಣೆ ಆರಂಭಿಸಲಾಗಿದೆ. ಏಳು ಮಾತ್ರ ಬಾಕಿ‌ ಇವೆ. ಕೆಲವು ಪ್ರಕರಣಗಳಲ್ಲಿ ತಾಂತ್ರಿಕ ತೊಂದರೆ ಇರುವುದನ್ನು ಗುರುತಿಸಿದ್ದು, ಕೂಡಲೇ ಎಡಿಸಿ ಅಧ್ಯಕ್ಷತೆಯ ಸಮಿತಿಗೆ ಬಂದ ತಕ್ಷಣ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜರಾನಾ ಖಾನುಂ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಅಂಬ್ಯುಲೆನ್ಸ್ ಚಾಲಕರ ಹುದ್ದೆ ಖಾಲಿ ಇರುವ ಬಗ್ಗೆ ಡಿಎಚ್ ಓ ಕಚೇರಿಯಿಂದ ವರದಿ ಕೊಟ್ಟಿದ್ದಾರೆ. ತುರ್ತಾಗಿ ಚಾಲಕರ ಅಗತ್ಯ ಇರುವುದರಿಂದ ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಳ್ಳಲು ಕೂಡಲೇ ಮಂಜೂರಾತಿ ನೀಡಲಾಗುವುದು. ಮಾನ್ವಿ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಸುವ ಕಾರ್ಯ ಮಂಗಳವಾರದಿಂದಲೇ ಆರಂಭಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಇಲಾಖೆ ಅಧಿಕಾರಿ ಡಾ.ರಾಮಕೃಷ್ಣ ಅವರು ಕೋವಿಡ್‌ನಿಂದ ಜಿಲ್ಲೆಯಲ್ಲಿ ಆಗಿರುವ ಸಾವು, ಪರಿಹಾರ ವಿತರಣೆ ಹಾಗೂ ಮೂರನೇ ಅಲೆ ತಡೆಗಾಗಿ ಮಾಡಿರುವ ವ್ಯವಸ್ಥೆಗಳ ಕುರಿತು ವಿವರಿಸಿದರು.

ಸಂಸದರಾದ ರಾಜಾ ಅಮರೇಶ್ವರ ನಾಯಕ, ಕರಡಿ ಸಂಗಣ್ಣ, ಶಾಸಕರಾದ ಡಿ.ಎಸ್‌.ಹುಲಗೇರಿ, ಶಿವನಗೌಡ ನಾಯಕ, ರಾಜಾ ವೆಂಕಟಪ್ಪ ನಾಯಕ, ವೆಂಕಟರಾವ್‌ ನಾಡಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT