ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ: ಸರಳ ಕೃಷಿ ಪರಿಕರ, ಭಾರಿ ಕೆಲಸ

Last Updated 15 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ರಾಯಚೂರು: ಕೃಷಿ ಮೇಳದಲ್ಲಿ ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರದ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಕೆಲವು ಪರಿಕರಗಳು ನೋಡಲು ಸರಳವಾಗಿದ್ದರೂ ರೈತರಿಗೆ ಭಾರಿ ಪ್ರಮಾಣದಲ್ಲಿ ಸಹಾಯಕ ಆಗುವಂತಿವೆ.

ಈ ಪರಿಕರಗಳನ್ನು ರೈತರೇ ಸಂಶೋಧನೆ ಮಾಡಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ಬಳಕೆ ಮಾಡುವುದಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನೆರವಾಗಿದ್ದಾರೆ. ತುಂಬಾ ಕಡಿಮೆ ಹಣದಲ್ಲಿ ಈ ಪರಿಕರಗಳನ್ನು ಖರೀದಿಸಬಹುದಾಗಿದೆ. ಆಸಕ್ತಿಯಿದ್ದರೆ ರೈತರೆ ಇವುಗಳನ್ನು ಸಿದ್ಧಪಡಿಸಿಕೊಳ್ಳಲೂ ಸಾಧ್ಯವಿದೆ.

ಕುಡಿ ಕತ್ತರಿಸುವುದು:ತೊಗರಿ ಬೆಳೆಯು ಒಂದು ಹಂತಕ್ಕೆ ಬಂದಾಗ, ಅದರ ಕುಡಿ ಚಿವುಟಿದರೆ ಇಳುವರಿ ಅಧಿಕವಾಗುತ್ತದೆ. ಇದಕ್ಕಾಗಿ ರೈತರು ಕೈಯಿಂದಲೇ ಕುಡಿ ಚಿವುಟುವುದು ಅಥವಾ ಕಾರ್ಮಿಕರಿಂದ ಮಾಡಿಸಲು ಹಣ ಕೊಡಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಕಲಬುರ್ಗಿಯ ರೈತ ಶರಣಬಸಪ್ಪ ಪಾಟೀಲ ಅವರು ಸ್ಪ್ರೇಯರ್‌ ಯಂತ್ರಕ್ಕೆ ನಾಲ್ಕು ಬ್ಲೇಡ್‌ಗಳನ್ನು ಅಳವಡಿಸಿ ಕುಡಿ ಕತ್ತರಿಸುವ ಯಂತ್ರವೊಂದನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಸಣ್ಣ ಯಂತ್ರ ಚಲಾಯಿಸಲು ಸೌರಶಕ್ತಿ ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯೂ ಇದರಲ್ಲಿದೆ. ತಲೆಮೇಲೆ ಸೋಲಾರ್‌ಪ್ಲೇಟ್‌ನ ಕ್ಯಾಪ್‌ ಹಾಕಿಕೊಂಡು ಈ ಯಂತ್ರ ಬಳಕೆ ಮಾಡಬಹುದಾಗಿದೆ. ಇದನ್ನು ಗರಿಷ್ಠ ₹2000 ಹಣದಲ್ಲಿ ತಯಾರಿ ಮಾಡಿಕೊಳ್ಳಬಹುದಾಗಿದೆ.

ಮಂಗಗಳ ಹಾವಳಿ:ಜಮೀನುಗಳಲ್ಲಿ ಮಂಗಗಳ ಹಾವಳಿ ತಪ್ಪಿಸುವುದಕ್ಕೆ ಪರಿಹಾರವಾಗಿ ಶರಣಬಸಪ್ಪ ಪಾಟೀಲ ಅವರು ಒಂದು ಪರಿಕರ ಮಾಡಿದ್ದಾರೆ. ಇದಕ್ಕಾಗಿ ಪ್ಲಾಸ್ಟಿಕ್‌ ಪೈಪ್‌, ಸ್ಟೋವ್‌ ಲೈಟರ್‌, ಡಿಯೋ ಬಳಕೆ ಮಾಡಿಕೊಳ್ಳಲಾಗಿದೆ. ಒಂದಿಷ್ಟು ರದ್ದಿ ಪೇಪರ್‌ಗಳನ್ನು ಪ್ಲಾಸ್ಟಿಕ್‌ ಪೈಪ್‌ನಲ್ಲಿ ತುಂಬಿಕೊಂಡು ಮಂಗಗಳನ್ನು ಓಡಿಸಬಹುದು. ಈ ಪರಿಕರದಿಂದ ಭಾರಿ ಸದ್ದು ಹೊಮ್ಮುತ್ತದೆ. ಈ ಸದ್ದಿಗೆ ಮಂಗಗಳು ಓಡಿ ಹೋಗುತ್ತವೆ.

ನಿಂಬೆಹಣ್ಣು ಬೇರ್ಪಡಿಸುವುದು: ನಿಂಬೆಹಣ್ಣು ಹಾಗೂ ಈರುಳ್ಳಿಯನ್ನು ಸಣ್ಣ ಹಾಗೂ ದೊಡ್ಡ ಗಾತ್ರದಲ್ಲಿ ಬೇರ್ಪಡಿಸುವ ಕೆಲಸವನ್ನು ಹಗುರ ಮಾಡಿಕೊಳ್ಳುವುದಕ್ಕಾಗಿ ಕಲಬುರ್ಗಿಯ ರೈತ ಸುಲಭೋಪಾಯವನ್ನು ಮಾಡಿದ್ದಾರೆ. ಇದನ್ನು ಕೇವಲ ₹300 ಗಳಲ್ಲಿ ಸಿದ್ಧಪಡಿಸಿಕೊಳ್ಳಬಹುದಾಗಿದೆ. ಪ್ಲಾಸ್ಟಿಕ್‌ ಪೈಪ್‌ಗಳನ್ನು ಓರಣವಾಗಿ ಜೋಡಿಸಿಟ್ಟು, ಅವುಗಳ ಮೇಲೆ ನಿಂಬೆ, ಈರುಳ್ಳಿ ಹಾಕಿದರೆ, ಗಾತ್ರದ ಪ್ರಕಾರ ಪ್ರತ್ಯೇಕವಾಗುತ್ತವೆ.

ಆಸಕ್ತಿ ಇರುವ ರೈತರಿಗೆ ಈ ಪರಿಕರಗಳನ್ನು ಒದಗಿಸಲಾಗುತ್ತದೆ. ಮೊಬೈಲ್‌ 99004 38541 ಸಂಖ್ಯೆಗೆ ಸಂಪರ್ಕಿಸಬಹುದು. ಅಜೋಲ್‌ ಹಾಗೂ ರಸಮೇವನ್ನು ಸುಲಭವಾಗಿ ತಯಾರಿಸುವ ಬಗ್ಗೆಯೂ ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪ್ರತ್ಯೇಕ್ಷಿಕೆ ಮಾಡಿದ್ದಾರೆ. ಪ್ಲಾಸ್ಟಿಕ್‌ ಡಬ್ಬಿಗಳನ್ನು ಬಳಸಿಕೊಂಡು ಈ ಮೇವುಗಳನ್ನು ಸಂಗ್ರಹಿಸುವುದಕ್ಕೆ ಸಾಧ್ಯ ಎಂಬುದನ್ನು ವಿಜ್ಞಾನಿಗಳು ವಿವರಿಸುತ್ತಾರೆ.

‘ರೈತರು ತಯಾರಿಸಿದ ಕೆಲವು ಪರಿಕರಗಳನ್ನು ಪರಿಣಾಮಕಾರಿ ಮಾಡುವ ಕೆಲಸವನ್ನು ಕೃಷಿ ವಿಜ್ಞಾನ ಕೇಂದ್ರದಿಂದ ಮಾಡಲಾಗಿದೆ. ಇಂಥ ಕೆಲವನ್ನು ರಾಯಚೂರಿನ ಕೃಷಿ ಮೇಳಕ್ಕೆ ತೆಗೆದುಕೊಂಡು ಬಂದಿದ್ದೇವೆ. ರೈತರಿಗೆ ಇವುಗಳಿಂದ ಭಾರಿ ಸಹಾಯಕವಾಗುತ್ತದೆ’ ಎಂದು ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಾಜು ತೆಗ್ಗಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT