ಶನಿವಾರ, ಏಪ್ರಿಲ್ 1, 2023
32 °C
ಎಐಕೆಕೆಎಂಎಸ್ ನೇತೃತ್ವದಲ್ಲಿ ಪ್ರತಿಭಟನೆ: ರೈತ ಮುಖಂಡರ ಬಂಧನ, ಬಿಡುಗಡೆ

ಹತ್ತಿ ಬೆಲೆ ಕುಸಿತ; ರಸ್ತೆ ತಡೆ ನಡೆಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಎಪಿಎಂಸಿ ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಕುಸಿತವಾಗಿದ್ದನ್ನು ಖಂಡಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್) ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ನಗರದ ಹೊರವಲಯದ ಸಾತ್ ಮೈಲ್ ಕ್ರಾಸ್ ಬಳಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಈಚೆಗೆ ಜಿಲ್ಲಾಧಿಕಾರಿ ಡಾ.ಚಂದ್ರಶೇಖರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹತ್ತಿಯ ಬೆಲೆ ಕ್ವಿಂಟಲ್‌ಗೆ ₹ 9,500 ನಿಗದಿ ಮಾಡಲಾಗಿತ್ತು. ಆದರೆ ಈಗ ಗರಿಷ್ಠ ₹ 8,000 ಗೆ ಖರೀದಿ ಮಾಡಲಾಗುತ್ತಿದೆ ಎಂದು ಆರೋಪಿಸಿ ರಸ್ತೆಯಲ್ಲಿ ಹತ್ತಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 2 ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ ಮಾನ್ವಿ, ದೇವದುರ್ಗ, ಲಿಂಗಸುಗೂರು ತಾಲ್ಲೂಕಿನಿಂದ ಬರುವ ಬಸ್ ಸಂಚಾರ ಸ್ಥಗಿತವಾಯಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಸಂಚಾರ ದಟ್ಟಣೆಯಿಂದ ಪೊಲೀಸರು ಪ್ರತಿಭಟನೆ ನಿಲ್ಲಿಸಲು ಮನವಿ ಮಾಡಿದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಆನಂತರ ಬಿಡುಗಡೆ ಮಾಡಿದರು. ಪರಿಸ್ಥಿತಿ ಅರಿತು ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ಹತ್ತಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹತ್ತಿ ಖರೀದಿದಾರರಿಗೆ ಸೂಚನೆ ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತರ, ವರ್ತಕರ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ₹ 9,500 ದರ ನಿಗದಿ ಮಾಡಲಾಗಿತ್ತು. ಆದರೆ 16 ದಿನ ಕಳೆದರೂ ಹತ್ತಿ ಬೆಲೆ ಮಾತ್ರ ಏರಿಕೆಯಾಗಿಲ್ಲ. ಹತ್ತಿ ಬೆಲೆ ಏರಿಕೆ ಕುರಿತು ನಡೆಸಿದ ಸಭೆಯಿಂದ ಯಾವುದೇ ಉಪಯೋಗವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವ್ಯಾಪಾರಸ್ಥರು ಗುಣಮಟ್ಟದ ಪ್ರತಿ ಕ್ವಿಂಟಲ್ ಹತ್ತಿಗೆ ₹ 9,500ಗೆ ರೈತರಿಂದ ಖರೀದಿಸಬೇಕು ಹಾಗೂ ಅನಗತ್ಯ ಸೂಟ್ ತೆಗೆಯಬಾರದು. ಎಪಿಎಂಸಿಯಲ್ಲಿ ಬೆಲೆ ನಿಗದಿ ಆದ ಮೇಲೆ ಮಿಲ್‍ಗಳಲ್ಲಿ ಹತ್ತಿ ಬೆಲೆ ದರ ಕಡಿಮೆ ಮಾಡಬಾರದು. ಈ ವರ್ಷ ಹತ್ತಿಯ ಇಳುವರಿ ಕಡಿಮೆ ಆಗಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಬಿ.ರಾಜಶೇಖರ ಹಾಗೂ ಎಪಿಎಂಸಿ ಕಾರ್ಯದರ್ಶಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ‘ಬೆಲೆ ಏರಿಕೆ ಮಾಡುವುದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ ಮೊದಲ ಸಾರಿ ಬೆಲೆ ನಿಗದಿಪಡಿಸಿದ ಮೇಲೆ ಮಿಲ್‌ಗಳಲ್ಲಿ ₹ 300 ರಿಂದ ₹ 400 ಕಡಿತ ಮಾಡುವುದನ್ನು ತಡೆಯುತ್ತೇವೆ. ಹತ್ತಿ ಬೆಂಬಲ ಬೆಲೆಯನ್ನು ಹೆಚ್ಚಿ ಸಲು  ನಮ್ಮ ಇಲಾಖೆಯಿಂದ ಪತ್ರ ಬರೆಯ ಲಾಗುವುದು’ ಎಂದು ತಿಳಿಸಿದರು.

ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷೆ ವಿ.ನಾಗಮ್ಮಾಳ್, ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ, ಎನ್.ಎಸ್.ವೀರೇಶ, ಮಹೇಶ ಸಿ, ಕಾರ್ತಿಕ್ ಸಿಂಧೆ, ತಾಯಪ್ಪ ಹೊಸೂರು, ಶೇಖರಪ್ಪ ಹೊಸೂರು, ಮನೋಹರೆಡ್ಡಿ ದಿನ್ನಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು