ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದ ಬದಲು ವಿಶ್ವವಿದ್ಯಾಲಯಕ್ಕೆ ಬನ್ನಿ

ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಆಹ್ವಾನ
Last Updated 18 ಫೆಬ್ರುವರಿ 2020, 14:15 IST
ಅಕ್ಷರ ಗಾತ್ರ

ರಾಯಚೂರು: ‘ಬೇರೆ ಬೇರೆ ಗ್ರಾಮಗಳಿಂದ ರಾಯಚೂರಿಗೆ ಭೇಟಿ ನೀಡುವ ರೈತರು ದೇವಸ್ಥಾನಗಳಿಗೆ ಹೋಗುವ ಬದಲಾಗಿ ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಬೇಕು’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಆಹ್ವಾನಿಸಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ಷೇಕ್ಷಾಗೃಹದಲ್ಲಿ ಕೃಷಿ ಎಂಜಿನಿಯರಿಂಗ್‌ ಮಹಾವಿದ್ಯಾಲಯದಿಂದ ಸಮನ್ವಿತ ಸಂಶೋಧನಾ ಯೋಜನೆಯಡಿ ಮಂಗಳವಾರ ಏರ್ಪಡಿಸಿದ್ದ ‘ಕೃಷಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮೇಳ’ ಉದ್ಘಾಟಿಸಿ ಮಾತನಾಡಿದರು.

‘ಹೊಲದಲ್ಲಿ ಬೆಳೆದ ಬೆಳೆಗೆ ರೋಗ ಬಂದಿದ್ದರೆ, ಅದರ ಸ್ಯಾಂಪಲ್‌ ಒಂದು ಗಿಡ ತೆಗೆದುಕೊಂಡು ಬರಬೇಕು. ಹೊಲದಲ್ಲಿ ಏನಾದರೂ ಹೊಸದನ್ನು ಮಾಡುವ ಯೋಚನೆ ಇದ್ದರೆ, ಕೃಷಿ ವಿಜ್ಞಾನಿಗಳಿಗೆ ತಿಳಿಸಿ ಸಲಹೆ ಪಡೆಯಬೇಕು. ವಿಶ್ವವಿದ್ಯಾಲಯವು ರೈತರ ಜ್ಞಾನ ಹೆಚ್ಚಿಸುವ ಕೆಲಸಕ್ಕೆ ಬದ್ಧವಾಗಿದೆ’ ಎಂದರು.

‘ಜನಸಂಖ್ಯೆ ಹೆಚ್ಚಾದಂತೆ ಕೃಷಿ ಉತ್ಪನ್ನವೂ ಹೆಚ್ಚಳ ಮಾಡಬೇಕಿದ್ದು, ಅದಕ್ಕೆ ಅಗತ್ಯ ಸಂಶೋಧನೆಗಳು ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ಇದರ ಮಾಹಿತಿಯನ್ನು ರೈತರಿಗೆ ತಲುಪಿಸಬೇಕಿದೆ. ಸಾಮಾನ್ಯ ಕೋರ್ಸ್‌ ನಡೆಸುವ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರಿಗೆ ಸರಿಸಮಾನ ವೇತನವನ್ನೆ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಪಡೆಯುತ್ತಿದ್ದಾರೆ. ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಸಂಶೋಧಕರು ದಿನವಿಡೀ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.

ಕೃಷಿ ಕ್ಷೇತ್ರವು ಈಗ ಉನ್ನತ ಶಿಕ್ಷಣ ಪಡೆದವರನ್ನು ಆಕರ್ಷಿಸುತ್ತಿದೆ. ಸುಧಾರಿತ ಸಮಗ್ರ ಕೃಷಿ ಹಾಗೂ ಯಂತ್ರೋಕರಣಗಳನ್ನು ಬಳಸಿಕೊಂಡು ಕೃಷಿ ಮಾಡಿದರೆ ಮಾತ್ರ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುತ್ತದೆ. ರೈತರು ಕೃಷಿಯೊಂದನ್ನೇ ಯೋಚಿಸುತ್ತಿದ್ದರೆ, ಆದಾಯ ನಾಲ್ಕು ಪಟ್ಟು ಹೆಚ್ಚಳ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

ನೀರನ್ನು ಮಿತಪ್ರಮಾಣದಲ್ಲಿ ಬಳಸಬೇಕು. ನೀರು ಇದ್ದರೆ ಮಾತ್ರ ಮನುಷ್ಯ ಬದುಕಬಹುದು ಹಾಗೂ ಕೃಷಿ ಮಾಡಬಹುದು. ರೈತರು ಬರೀ ಭತ್ತ ಬೆಳೆಯುವುದನ್ನು ನಿಲ್ಲಿಸಬೇಕು. ಕೃಷಿಯೊಂದಿಗೆ ಕುರಿ, ಕೋಳಿ, ಮೊಲ ಸಾಕಾಣಿಕೆ ಮಾಡಬೇಕು. ತೋಟಗಾರಿಕೆ ಆರಂಭಿಸಬೇಕು ಎಂದು ತಿಳಿಸಿದರು.

ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ವಿಜ್ಞಾನಿ ಡಾ.ಕೆ.ವಿ. ಪ್ರಕಾಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಡೀನ್‌ ಡಾ.ಎಂ.ವೀರನಗೌಡ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಅಬಿದ್‌ ಎಸ್‌.ಎಸ್‌. ಮುಖ್ಯ ಅತಿಥಿಯಾಗಿದ್ದರು. ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ, ವೀರನಗೌಡ ಪರಸರೆಡ್ಡಿ ಹಾಗೂ ತ್ರಿವಿಕ್ರಮ ಜೋಷಿ, ಶಿಕ್ಷಣ ನಿರ್ದೇಶಕ ಡಾ.ಎಸ್‌.ಕೆ. ಮೇಟಿ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಬಿ.ಎಂ. ಚಿತ್ತಾಪುರ, ಸಂಶೋಧನಾ ಸಹಾಯಕ ನಿರ್ದೇಶಕ ಡಾ.ಸತ್ಯನಾರಾಯಣ ರಾವ್‌, ಕೆವಿಕೆ ಯೋಜನಾ ಸಂಯೋಜಕ ಡಾ.ಜಿ.ಎಸ್‌.ಯಡಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT