ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು ‌| ರಾಷ್ಟ್ರೀಯ ಹೆದ್ದಾರಿಗೆ ಮುಳ್ಳು ಬೇಲಿ ರಕ್ಷಣೆ

ಪ್ರಾಧಿಕಾರದ ನಿರ್ಲಕ್ಷ್ಯದಲ್ಲಿ ಜೇವರ್ಗಿ–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ
ಬಿ.ಎ. ನಂದಿಕೋಲಮಠ
Published 5 ಸೆಪ್ಟೆಂಬರ್ 2024, 6:07 IST
Last Updated 5 ಸೆಪ್ಟೆಂಬರ್ 2024, 6:07 IST
ಅಕ್ಷರ ಗಾತ್ರ

ಲಿಂಗಸುಗೂರು: ರಾಷ್ಟ್ರೀಯ ಹೆದ್ದಾರಿಗಳು ಅಂದಾಕ್ಷಣ ವಿಶಾಲ ರಸ್ತೆ, ನಿಯಮಾನುಸಾರ ಡಾಂಬರೀಕರಣ, ಬಿಳಿಪಟ್ಟಿ, ಕ್ಯಾಟ್‍ ಐಯ್ಸ್‌ ಅಳವಡಿಕೆ ಸಾಮಾನ್ಯ. ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸೇತುವೆಯಲ್ಲಿ ಗುಂಡಿ ಕಾಣಿಸಿಕೊಂಡಿದ್ದು, ಮುಳ್ಳು ಬೇಲಿ ಹಾಕುವ ಅನಿವಾರ್ಯತೆ ಎದುರಾಗಿದೆ.

ಜೇವರ್ಗಿ–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಕೆಲ ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದರೂ ಸ್ಪಂದನೆ ದೊರೆತಿಲ್ಲ ಎಂಬುದಕ್ಕೆ ಹೊನ್ನಳ್ಳಿಯಿಂದ ತಿಂಥಣಿ ಬ್ರಿಜ್‌ವರೆಗಿನ ರಸ್ತೆಯ ಸ್ಥಿತಿಗತಿ ನಿದರ್ಶನವಾಗಿದೆ. ಮಳೆ ರಭಸಕ್ಕೆ ರಸ್ತೆ ಇಕ್ಕೆಲುಗಳ ಶೋಲ್ಡರ್ ಭಾಗಶಃ ಕೊಚ್ಚಿ ಹೋಗಿ 2 ರಿಂದ 3 ಅಡಿ ಗುಂಡಿಗಳು ಕಾಣಿಸಿಕೊಂಡು ಅಪಘಾತದ ತಾಣಗಳಾಗಿ ಪರಿವರ್ತನೆಗೊಂಡಿರುವುದು ವಿಪರ್ಯಾಸ.

ರಸ್ತೆಯ ಎರಡೂ ಮಗ್ಗಲು ಮುಳ್ಳು–ಕಂಟಿ ಬೆಳೆದು ರಸ್ತೆಗೆ ಚಾಚಿಕೊಂಡಿವೆ. ವಾಹನ ಸ್ವಲ್ಪ ನಿಯಂತ್ರಣ ತಪ್ಪಿದರೆ ಗುಂಡಿಗೆ ಬಿದ್ದು ಅಪಘಾತ ಸಂಭವಿಸುವುದು ಖಚಿತ. ಕೆಲ ಸೇತುವೆಗಳಲ್ಲಿ ಭಾರಿ ಪ್ರಮಾಣದ ಭೋಂಗಾ ಕಾಣಿಸಿಕೊಂಡಿದ್ದು, ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೊನ್ನಳ್ಳಿ ಬಳಿಯ ಮೊರೆಪ್ಪನ ತೆಗ್ಗಿಗೆ ನಿರ್ಮಿಸಿದ ಸೇತುವೆ ಶಿಥಿಲಗೊಂಡಿದೆ.

ಮೊರೆಪ್ಪನ ತೆಗ್ಗಿನ ಸೇತುವೆ ಮೇಲ್ಭಾಗದಲ್ಲಿ ಡಾಂಬರು ರಸ್ತೆಗೆ ಹೊಂದಿಕೊಂಡು ರಸ್ತೆ ಕುಸಿದು ಬೃಹತ್‍ ಗುಂಡಿ ಕಾಣಿಸಿಕೊಂಡಿದೆ. ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಯುವಕರೇ ಗುಂಡಿ ಸುತ್ತ ಮುಳ್ಳು ಬೇಲಿ ಹಾಕಿ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ. ಭಾರಿ ವಾಹನಗಳು ಡಾಂಬರು ರಸ್ತೆಗೆ ಇಳಿದರೆ ಆಳವಾದ ತೆಗ್ಗಿಗೆ ಇಳಿಯುವುದು ನಿಶ್ಚಿತ ಎಂದು ಸಮಾಜ ಸೇವಕ ಚಂದ್ರೇಗೌಡ ದೂರಿದ್ದಾರೆ.

ತಾಲ್ಲೂಕಿನ ಹೊನ್ನಳ್ಳಿಯಿಂದ ತಿಂಥಣಿ ಬ್ರಿಜ್ ತಲುಪಲು ವಾಹನ ಚಾಲಕರು ಜೀವ ಭಯದಲ್ಲಿ ವಾಹನ ನಡೆಸುವಷ್ಟು ರಸ್ತೆ ಅಕ್ಕ ಪಕ್ಕ ತಗ್ಗು–ಗುಂಡಿಗಳು ಕಾಣಿಸಿಕೊಂಡಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಬೈಕ್‍, ಜೀಪು, ಕಾರು, ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಇಳಿದು ಅಪಘಾತ ಆಗುತ್ತಿದ್ದರೂ ಗಮನ ಹರಿಸುತ್ತಿಲ್ಲ ಎಂಬುದು ಸಾಮೂಹಿಕ ಆರೋಪ.

‘ಹೊನ್ನಳ್ಳಿಯಿಂದ ತಿಂಥಣಿ ಬ್ರಿಜ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯ ದುರಸ್ತಿ, ಶೋಲ್ಡರ್ ಸಮತಟ್ಟು, ರಸ್ತೆ ಪಕ್ಕದಲ್ಲಿನ ಗಿಡಗಂಟಿ, ಮುಳ್ಳುಕಂಟಿ ಸ್ವಚ್ಛತೆ ಸೇರಿದಂತೆ ಅಗತ್ಯ ದುರಸ್ತಿ ಕಾರ್ಯಕ್ಕೆ ಟೆಂಡರ್ ಕರೆಯಲಾಗಿದೆ. ಒಂದು ವಾರದಲ್ಲಿ ಟೆಂಡರ್ ಪೂರ್ಣಗೊಳಿಸಿ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT