ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿರತೆ ಸಾವು: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ

Published 8 ಜುಲೈ 2024, 6:20 IST
Last Updated 8 ಜುಲೈ 2024, 6:20 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಮೂರು ತಿಂಗಳಿಂದ ಆತಂಕ ಸೃಷ್ಟಿಸಿದ್ದರೂ ಚಿರತೆಯನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸಾಗಿಸುವ ಹಾಗೂ ಚಿರತೆಯ ಪ್ರಾಣ ಉಳಿಸುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ರಾಯಚೂರಿನ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಸಮ್ಮುಖದಲ್ಲೇ ಸಾರ್ವಜನಿಕರು ಚಿರತೆಯನ್ನು ಹತ್ಯೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಅಧಿಕಾರಿ ವಿರುದ್ಧ ಇಲಾಖೆಯಿಂದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡು ಶೀಘ್ರ ವರದಿ ಸಲ್ಲಿಸಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.

ಚಿರತೆ ದೇವದುರ್ಗ ತಾಲ್ಲೂಕಿನಲ್ಲಿ ಮೂರು ತಿಂಗಳಿಂದ ಓಡಾಡುತ್ತಿತ್ತು. ತಾಲ್ಲೂಕಿನ ಅನೇಕ ಗ್ರಾಮಗಳ ಗ್ರಾಮಸ್ಥರು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರವಳಿಕೆ ನೀಡಿ ಅಥವಾ ಬಲೆ ಹಾಕಿ ಹಿಡಿದು ಬೇರೆ ಕಡೆಗೆ ಸಾಗಿಸುವಂತೆ ಮನವಿಯನ್ನೂ ಮಾಡಿದ್ದರು.

ಭಾನುವಾರ ಚಿರತೆ ದಿನವೀಡಿ ಒಂದೇ ಗ್ರಾಮದಲ್ಲಿ ಇದ್ದರೂ ಅದನ್ನು ಹಿಡಿಯುವ ಪ್ರಯತ್ನ ನಡೆಯಲಿಲ್ಲ. ಚಿರತೆ ಬೆಳಿಗ್ಗೆ ಮೂವರ ಮೇಲೆ ಹಾಗೂ ಮಧ್ಯಾಹ್ನ ಒಬ್ಬರ ಮೇಲೆ ದಾಳಿ ಮಾಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬಂಡೆಗಲ್ಲುಗಳ ಮಧ್ಯೆ ಕುಳಿತಿದ್ದ ಚಿರತೆಯನ್ನು ಭರ್ಚಿಯಿಂದ ಹೊಡೆದು ಕೊಂದು ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT