ಮಂಗಳವಾರ, ಜನವರಿ 21, 2020
28 °C
27ನೇ ಅಖಿಲ ಕರ್ನಾಟಕ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ

ವಿಜ್ಞಾನ ಸಂಶೋಧನೆಯನ್ನು ಎಲ್ಲರೂ ಪ್ರೋತ್ಸಾಹಿಸಿ: ವೆಂಕಟೇಶ್ ಬೇವಿನಬೆಂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಎಲ್ಲರೂ ವಿಜ್ಞಾನ ಯುಗದಲ್ಲಿದ್ದರೂ ವಿಜ್ಞಾನದ ಬಗೆಗೆ ಕ್ರಮೇಣ ಆಸಕ್ತಿ ಕಡಿಮೆಯಾಗುತ್ತಿದೆ. ವೈಜ್ಞಾನಿಕ ಚಿಂತನೆಗಳು ಮತ್ತು ಸಂಶೋಧನೆಗಳನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ ಬೇವಿನಬೆಂಚಿ ಹೇಳಿದರು.

ನಗರದ ಹಮ್‌ದರ್ದ್‌ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಕರ್ನಾಟಕ ರಾಜ್ಯವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಚೆಗೆ ಆಯೋಜಿಸಿದ್ದ 27ನೇ ಅಖಿಲ ಕರ್ನಾಟಕ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ‘ವಿಜ್ಞಾನ ಯೋಜನೆ ಮಂಡನೆ-ಪ್ರಶಸ್ತಿ ಪ್ರದಾನ’ ಸಮಾರಂಭದ ಉದ್ಘಾಟನೆಯಲ್ಲಿ ಮಾತನಾಡಿದರು.

ವಿಜ್ಞಾನವು ಸಕಲ ಜೀವಿಗಳ ಶ್ರೇಯಾಭಿವೃದ್ದಿಗಾಗಿ ಇದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ. ಜನರಲ್ಲಿ ಕ್ರಮೇಣ ಮೂಡನಂಭಿಕೆಗಳು, ಅಂಧಶ್ರದ್ಧೆಗಳು ಹೆಚ್ಚುತ್ತಿವೆ. ಕುರುಡಾಗಿ ಎಲ್ಲವನ್ನು ನಂಬಿ ಆಚರಿಸುವವರು ಹೆಚ್ಚಾಗುತ್ತಿದ್ದಾರೆ. ಮೂಢನಂಬಿಕೆಗಳನ್ನು ಪ್ರಶ್ನಿಸುವವರು ಈ ದೇಶದಲ್ಲಿ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ದೇಶದಲ್ಲಿ ವೈಚಾರಿಕತೆ ಬೆಳಯಲು ತುಂಬಾ ಕಷ್ಟದ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯದರ್ಶಿ ಬಸ್ಸಪ್ಪ ಗದ್ದಿ ಮಾತನಾಡಿ, ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕಡಿಮೆಯಾಗುವುದಕ್ಕೆ ಮುಖ್ಯ ಕಾರಣ; ಶಿಕ್ಷಕರಾಗಿದ್ದಾರೆ. ಶಿಕ್ಷಕರು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಕಾರ್ಯ ಮಾಡುತ್ತಿಲ್ಲ ಎಂದು ವಿಷಾದಿಸಿದರು.

ಪರಿಸರ, ಜೀವ ಸಂಕುಲಗಳ ಬಗ್ಗೆ ಯೋಜನೆ ಮಾಡಿ ಪ್ರಾತಿಕ್ಷಿಕೆಗಳನ್ನು ತಯಾರಿಸಿ ಸ್ಪರ್ಧಿಸಿ ಬಹುಮಾನ ಗೆಲ್ಲುವ ಪ್ರಯತ್ನಶೀಲತೆಯನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ. ವಿಜ್ಞಾನ ಸಮಾವೇಶಗಳು ಮಕ್ಕಳಲ್ಲಿರುವ ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಹಿಸುತ್ತವೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.

ಎಲ್ಲರೂ ಒತ್ತಡದ ಬದುಕಿನಲ್ಲಿದ್ದಾರೆ. ಶಿಕ್ಷಕರಿಗೆ ಮತ್ತು ಪಾಲಕರಿಗೆ ಮಕ್ಕಳಿಗೆ ಮಾರ್ಗದರ್ಶನ ಮಾಡಲು ಸಮಯವಿಲ್ಲ. ಆದರೂ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಉತ್ತಮ ಗೈಡ್‌ಗಳಾಗಬೇಕಾಗಿದೆ. ಆಗ ಮಾತ್ರ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ನಿರ್ಣಾಯಕರಾಗಿ ವೀರೇಂದ್ರ ಪಾಟೀಲ, ಛಾಯಾ ಅವರು ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಕ ಶಿಕ್ಷಕರೊಂದಿಗೆ ಆಗಮಿಸಿ ತಾವು ತಯಾರಿಸಿದ ವಿಜ್ಞಾನದ ಯೋಜನೆ ಮಾದರಿಗಳನ್ನು ಪ್ರಸ್ತುತಪಡಿಸಿದರು.

ಈ ವಿಜ್ಞಾನ ಸಮಾವೇಶ ಯೋಜನೆ ಮಂಡನೆ ಕಾರ್ಯಕ್ರಮದಲ್ಲಿ  ಜಿಲ್ಲೆಯ ಆಯ್ದ ಶಾಲೆಗಳ ವಿಜ್ಞಾನ ಶಿಕ್ಷಕರು ಮತ್ತು ಹಮ್‌ದರ್ದ್‌ ಶಾಲೆಯ ಮಕ್ಕಳು ಭಾಗವಹಿಸಿದ್ದರು.

ಅಖಿಲ ಕರ್ನಾಟಕ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ  ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಕುರಿ ನಿರೂಪಿಸಿದರು

ಹಮ್ದರ್ದ ಶಾಲೆಯ ಸಂಜನಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಲಕ್ಷೀ  ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು