ರಾಯಚೂರು: ‘ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಬೇಕು. ಯಾವ ಕ್ರೀಡೆಗೆ ಹೆಚ್ಚು ಉತ್ಸಾಹ ತೋರಿಸುತ್ತಾರ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸಿ. ಪ್ರತಿ ತಾಲ್ಲೂಕಿನಲ್ಲೂ ಅಸ್ತಿತ್ವದಲ್ಲಿರುವ ಕೌಶಲ ಉದ್ಯೋಗಗಳನ್ನು ಗುರುತಿಸಿ ಅವುಗಳಿಗೆ ಸೌಲಭ್ಯ ಒದಗಿಸಿದರೆ ಅಭಿವೃದ್ಧಿಗೆ ಪೂರಕವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗಡಿಭಾಗದ ಗ್ರಾಮಗಳಲ್ಲಿ ವಿಶೇಷ ಉದ್ಯೋಗಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕೌಶಲ್ಯ ತರಬೇತಿ ಕೊಟ್ಟು ಅವರಿಗೆ ಸಾಲ ನೀಡಿ ಉದ್ಯೋಗ ಅಭಿವೃದ್ಧಿ ಮಾಡಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರಿನಲ್ಲಿ ಈಗಲೂ ಕೃಷಿ, ಕೃಷಿ ಕೂಲಿಯೇ ಪ್ರಧಾನವಾಗಿದೆ. ಇದರ ಹೊರತಾಗಿ ಕೌಶಲ ತರಬೇತಿ ನೀಡುವ ಕಾರ್ಯ ಆಗಬೇಕು. ಇಲ್ಲಿರುವ ವಾತಾವರಣಕ್ಕೆ ಅನುಗುಣವಾಗಿ ಯೋಜನೆ ರೂಪಿಸಬೇಕು ಎಂದರು.
ಜಿಲ್ಲೆಯಲ್ಲಿ 36 ವಸತಿ ಶಾಲೆಗಳಿದ್ದು, ಅಲ್ಲಿ ಕ್ರೀಡೆಗಳಲ್ಲಿ ಗುರುತಿಸಿಕೊಂಡ ಉತ್ತಮ ಸಾಧನೆ ಮಾಡಬಹುದಾದ ಮಕ್ಕಳನ್ನು ಕ್ರೀಡಾ ಹಾಸ್ಟೇಲ್‌ಗೆ ಸ್ಥಳಾಂತರಿಸಿ ಪ್ರೋತ್ಸಾಹಿಸಿ. ಜಿಲ್ಲೆಯಲ್ಲಿ ಕ್ರೀಡೆಗಳಿಗೆ ಮಹತ್ವ ಕೊಡಿ. ಅಗತ್ಯ ಕ್ರೀಡಾಂಗಣ ಹಾಗೂ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆಯಲ್ಲಿ ಹನಿ ನೀರಾವರಿ ಗುರಿ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಸಾಧನೆ ಶೇ 50 ರಷ್ಟು ಮಾತ್ರ ಇದೆ. ಗುರಿ ಸಾಧಿಸಲು ಇನ್ನಷ್ಟು ಪರಿಶ್ರಮ ಹಾಕಬೇಕು. ತೋಟಗಾರಿಕೆ ರೈತರಿಗೆ ಯೋಗ್ಯ ದರ ದೊರಕಿಸಲು ತೋಟಗಾರಿಕೆ ಇಲಾಖೆಯವರು ಸರಿಯಾದ ಮಾರ್ಗದರ್ಶನ ಮಾಡಬೇಕು. ರೈತ ಉತ್ಪನ್ನ ಸಂಘಗಳನ್ನು ಸಕ್ರಿಯಗೊಳಿಸಿ, ಆ ಮೂಲಕ ಹಣ್ಣು ತರಕಾರಿಗೆ ಸರಿಯಾದ ದರ ದೊರಕಿಸಿ ಕೊಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಮಾತನಾಡಿ, ಸ್ತ್ರೀ ಶಕ್ತಿ ಸಂಘಗಳಿಗೆ ತರಬೇತಿ ನೀಡಿ ಸಣ್ಣ ಪ್ರಮಾಣದಲ್ಲಿ ವಸ್ತುಗಳ ತಯಾರಿಕೆಗೆ ಪ್ರೋತ್ಸಾಹಿಸುತ್ತಿದ್ದೇವೆ. ಕ್ರಮೇಣ ದೊಡ್ಡದಾಗಿ ಬೆಳೆಯುತ್ತಿವೆ. ಮಹಿಳಾ ಸಂಘವೊಂದು ಉದಿನಕಡ್ಡಿ ತಯಾರಿಸಿ, ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಬ್ರ್ಯಾಂಡಿಂಗ್ ಮಾಡಲು ನೆರವು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘಗಳು ಉತ್ಪನ್ನ ತಯಾರಿಕೆಯಲ್ಲಿ ಸಾಧನೆ ಮಾಡಲಿವೆ ಎಂದರು.
ಜಲಜೀವನ ಮಿಷನ್ ನಾಲ್ಕು ಹಂತಗಳಲ್ಲಿ ಜಾರಿ ಮಾಡಲಾಗುತ್ತಿದ್ದು, ಈಗಾಗಲೇ ಮೂರನೇ ಹಂತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗುತ್ತಿದೆ. ಲಿಂಗಸುಗೂರಿನಲ್ಲಿ 60 ದೊಡ್ಡಿಗಳಿಗೆ ಹಾಗೂ ದೇವದುರ್ಗದಲ್ಲಿ ಕೆಲವು ಭಾಗಕ್ಕೆ ನೀರಿನ ಸಮಸ್ಯೆ ಆಗಲಿದೆ. ಕೊಳವೆಬಾವಿ ಕೊರೆದು ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರಾಯಚೂರು, ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಎದುರಾದರೆ ನಿರ್ವಹಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡುತ್ತಿರುವ ಹಾಗೂ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಬಹಳಷ್ಟಿದ್ದಾರೆ. ಅಥ್ಲೆಟಿಕ್ಸ್ ಪ್ರೋತ್ಸಾಹಿಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ವಿವಿಧ ಇಲಾಖೆಗಳು ಬಳಕೆ ಮಾಡಿರುವ ಅನುದಾನ ಹಾಗೂ ಇನ್ನೂ ಅನುದಾನ ಬಳಕೆ ಮಾಡದಿರುವುದಕ್ಕೆ ಕಾರಣಗಳನ್ನು ಕೇಳಿದ ಕುಮಾರನಾಯಕ್ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಕಾರ್ಯಾದೇಶಗಳನ್ನು ನೀಡಬೇಕು ಎದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.