ಮುದಗಲ್: ‘ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ಈ ಪ್ರಕರಣದಲ್ಲಿ ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಸಮೀಪದ ಸಜ್ಜಲಗುಡ್ಡ ಶರಣಮ್ಮ ಅಮ್ಮನವರ ಮಠಕ್ಕೆ ಮಂಗಳವಾರ ಭೇಟಿ ನೀಡಿ, ಶಿವಶರಣೆ ಶರಣಮ್ಮ ಅಮ್ಮನವರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದರು. ಶ್ರೀಮಠದ ದೊಡ್ಡಬಸವಾರ್ಯ ತಾತನವರ ಪಾದಪೂಜೆ ಮಾಡಿ, ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದ ಸುಭದ್ರ ಸರ್ಕಾರವಾಗಿದೆ. ಬಿಜೆಪಿ ನಾಯಕರಿಗೆ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯಾವುದೇ ದಾರಿ ಇಲ್ಲದಂತಾಗಿದೆ. ಹಾಗಾಗಿ, ಈ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ’ ಎಂದು ದೂರಿದರು.
ಶ್ರೀಮಠದಿಂದ ಸಚಿವರ ಸನ್ಮಾನ ನಡೆಯಿತು. ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಬಸವರಾಜ ಗಣೇಕಲ್ ಉಪಸ್ಥಿತರಿದ್ದರು.