ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕೇಂದ್ರ ಬಜೆಟ್‌ನಲ್ಲಿ ಐಐಐಟಿಗೆ ಸಿಗುವುದೇ ಅನುದಾನ

ಮಹತ್ವಾಕಾಂಕ್ಷಿ ಜಿಲ್ಲೆಗೆ ಕೇಂದ್ರದಿಂದ ದೊರೆಯದ ವಿಶೇಷ ಪ್ಯಾಕೇಜ್‌ 
Last Updated 31 ಜನವರಿ 2022, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಲ್ಲಿ ಫೆಬ್ರುವರಿ 1 ರಂದು ಮಂಡಿಸುತ್ತಿರುವ 2022–23ನೇ ಸಾಲಿನ ಬಜೆಟ್‌ನಲ್ಲಿಅನುದಾನ ಘೋಷಿಸಬಹುದು ಎನ್ನುವ ನಿರೀಕ್ಷೆ ವ್ಯಾಪಕವಾಗಿದೆ.

ರಾಯಚೂರಿನಲ್ಲಿ 'ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ–ಐಐಐಟಿ' ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರವು 2018 ಜನವರಿಯಲ್ಲಿ ಅನುಮೋದನೆ ನೀಡಿದ್ದು, ನಾಲ್ಕು ವರ್ಷಗಳಾದರೂ ಯಾವುದೇ ಅನುದಾನ ನೀಡಿಲ್ಲ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕಟ್ಟಡದಲ್ಲೇ ತಾತ್ಕಾಲಿಕವಾಗಿ ಐಐಐಟಿ ತರಗತಿಗಳುನಡೆಯುತ್ತಿವೆ. 60 ಎಕರೆ ಜಾಗ ಮೀಸಲಾಗಿಟ್ಟಿದ್ದರೂ, ಯಾವುದೇ ಕಟ್ಟಡ ಕಾಮಗಾರಿಗಳು ಆರಂಭವಾಗಿಲ್ಲ. ಈಗ ಮಂಡಿಸುತ್ತಿರುವ ಬಜೆಟ್‌ನಲ್ಲಿಯಾದರೂ ಅನುದಾನ ಘೋಷಿಸಬಹುದು ಎನ್ನುವ ನಿರೀಕ್ಷೆ ಇದೆ.

ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಜಾಗ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಅನುದಾನ ಕೂಡಾ ತೆಗೆದಿರಿಸಲಾಗಿದೆ. ಆದರೆ ಕೇಂದ್ರ ಸರ್ಕಾರವು ಇದಕ್ಕೆ ಪೂರಕವಾಗಿ ಯಾವುದೇ ಘೋಷಣೆಗಳನ್ನು ಮಾಡುತ್ತಿಲ್ಲ. ಹೀಗಾಗಿ ಹಲವು ದಶಕಗಳಿಂದಲೂ ವಿಮಾನ ನಿಲ್ದಾಣ ನನಸಾಗದೆ ಉಳಿದಿದೆ. ಕೇಂದ್ರದ ಬಜೆಟ್‌ನಲ್ಲಿ ಘೋಷಿಸುವ ಹೊಸ ವಿಮಾನ ನಿಲ್ದಾಣಗಳ ಸಾಲಿನಲ್ಲಿ ರಾಯಚೂರಿನ ಹೆಸರು ಕೂಡಾ ಸೇರ್ಪಡೆಯಾಗಬಹುದು ಎನ್ನುವ ಆಕಾಂಕ್ಷೆ ಇದೆ.

ದೇಶದಲ್ಲಿ ಅತೀ ಹಿಂದುಳಿದ 112 ಜಿಲ್ಲೆಗಳನ್ನು ಕೇಂದ್ರದ ನೀತಿ ಆಯೋಗವು ಗುರುತಿಸಿದ್ದು, ಅವುಗಳನ್ನು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು 2019 ರಲ್ಲಿಯೇ ಘೋಷಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದಿಂದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಸೇರ್ಪಡೆಯಾಗಿವೆ. ಆದರೆ, ಇದುವರೆಗೂ ಯಾವುದೇ ವಿಶೇಷ ಅನುದಾನದ ಪ್ಯಾಕೇಜ್‌ ಕೇಂದ್ರವು ನೀಡಿರುವುದಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಹಿಂದುಳಿದ ಜಿಲ್ಲೆಗಳಿಗೆ ಪ್ಯಾಕೇಜ್‌ ನೀಡಬಹುದು ಎನ್ನುವ ಆಶಾಭಾವ ಜನರಲ್ಲಿದೆ.

ದೇಶದ ರೈಲ್ವೆ ಸಂಪರ್ಕ ಜಾಲವನ್ನು ಬಲಪಡಿಸುವುದರ ಭಾಗವಾಗಿ ರಾಯಚೂರು ರೈಲ್ವೆ ನಿಲ್ದಾಣವನ್ನು ವಿಶೇಷವಾಗಿ ಅಭಿವೃದ್ಧಿ ಮಾಡುವುದಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಏನಾದರೂ ಘೋಷಿಸಬಹುದು. ಇದಕ್ಕೆ ಸಂಬಂಧಿಸಿದಂತೆ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಹಲವು ಮನವಿಗಳನ್ನು ಕೇಂದ್ರದ ಸಚಿವರಿಗೆ ಸಲ್ಲಿಸುತ್ತಾ ಬಂದಿರುವುದನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಚರ್ಚಿಸಲಾಗುತ್ತಿದೆ.

ಮುಖ್ಯವಾಗಿ, ದೇಶದಲ್ಲಿ ಅತಿಹೆಚ್ಚು ಹತ್ತಿ ಬೆಳೆಯುತ್ತಿರುವ ರಾಯಚೂರು ಜಿಲ್ಲೆಯಲ್ಲಿ ’ಜವಳಿ ಪಾರ್ಕ್‌‘ ಸ್ಥಾಪಿಸಲು ಈ ವರ್ಷ ಕೇಂದ್ರ ಸರ್ಕಾರವು ಗಮನಹರಿಸುವ ನಿರೀಕ್ಷೆ ದೊಡ್ಡದಾಗಿದೆ. ಪ್ರತಿವರ್ಷ ₹10 ಸಾವಿರ ಕೋಟಿಗಿಂತಲೂ ಹೆಚ್ಚು ಹತ್ತಿ ವಹಿವಾಟು ನಡೆಯುವ ರಾಯಚೂರಿನಲ್ಲಿ ಜವಳಿ ಪಾರ್ಕ್‌ ಸ್ಥಾಪನೆಯಾದರೆ, ಉತ್ಪಾದನೆ ವೆಚ್ಚವು ಕಡಿಮೆಯಾಗುತ್ತದೆ. ರಾಯಚೂರು ಹತ್ತಿ ಕಾರ್ಖಾನೆಗಳ ಮಾಲೀಕರ ಸಂಘ ಹಾಗೂ ಈ ಭಾಗದ ಜನಪ್ರತಿನಿಧಿಗಳು ಈ ಸಂಬಂಧ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT