ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣ ಕರ್ನಾಟಕದ ವಿವಿಧೆಡೆ ಭಾರಿ ಮಳೆ: ಕೊಚ್ಚಿ ಹೋದ ಹಳ್ಳದ ಸೇತುವೆ

Published 31 ಆಗಸ್ಟ್ 2024, 22:30 IST
Last Updated 31 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಮಳೆಯಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಮಳೆ ಅಬ್ಬರಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರಿನ ಹಳ್ಳ ಉಕ್ಕಿ ಹರಿದು ನೆಲಮಟ್ಟದ ಸೇತುವೆ ಕೊಚ್ಚಿಕೊಂಡು ಹೋಗಿದೆ. ಶಾಲೆ ಸಂಪೂರ್ಣ ಜಲಾವೃತಗೊಂಡಿದೆ. ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ.

ರಾಯಚೂರು ನಗರ, ತಾಲ್ಲೂಕು, ದೇವದುರ್ಗ, ಜಾಲಹಳ್ಳಿ ಹಾಗೂ ಮಾನ್ವಿಯಲ್ಲಿ ಸಾಧಾರಣ ಮಳೆಯಾಗಿದೆ.

ಕಲಬುರಗಿ ನಗರದಲ್ಲಿ ಮಳೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅಬ್ಬರದಿಂದ ಸುರಿಯಿತು. ಚಿತ್ತಾಪುರ, ಆಳಂದ, ಕಾಳಗಿ, ಚಿಂಚೋಳಿ ತಾಲ್ಲೂಕಿನಲ್ಲಿಯೂ ಉತ್ತಮ ಮಳೆಯಾಗಿದೆ.

ಬೀದರ್‌, ಹುಲಸೂರ, ಬಸವಕಲ್ಯಾಣ, ಭಾಲ್ಕಿ, ಔರಾದ್‌, ಹುಮನಾಬಾದ್‌, ಚಿಟಗುಪ್ಪ, ಕಮಲನಗರ ತಾಲ್ಲೂಕುಗಳಲ್ಲಿ ವರ್ಷಧಾರೆಯಾಗಿದೆ. ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಆಲ್ದಾಳ ಗ್ರಾಮದಲ್ಲಿ 12.1 ಸೆಂ.ಮೀ, ಗುರುಮಠಕಲ್‌ ತಾಲ್ಲೂಕಿನ ಚಂಡ್ರಿಕಿಯಲ್ಲಿ 9.7 ಸೆಂ.ಮೀ ಮಳೆಯಾಗಿದೆ. ಆಲ್ದಾಳದಲ್ಲಿ ಎರಡು ಮನೆಗಳು ಭಾಗಶಃ ಕುಸಿದಿವೆ. ಶುಕ್ರವಾರ ಮಧ್ಯರಾತ್ರಿ ಧಾರಾಕಾರ ಮಳೆ ಸುರಿದಿದ್ದರಿಂದ ನದಿ, ಹಳ್ಳ, ಕೆರೆ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಶನಿವಾರ ಬೆಳಿಗ್ಗೆಯಿಂದಲೂ ಜಿಟಿಜಿಟಿ ಮಳೆಯಾಗಿದೆ.

ಮಡಿಕೇರಿಯಲ್ಲಿ ಬಿರುಸಿನ ಮಳೆ

ಮಡಿಕೇರಿ: ನಗರದಲ್ಲಿ ಶನಿವಾರ ಬಿರುಸಿನ ಮಳೆ ಬಿದ್ದಿತು. ಶುಕ್ರವಾರ ರಾತ್ರಿಯಿಂದಲೇ ಆರಂಭವಾದ ಜೋರು ಮಳೆಯು ಶನಿವಾರ ಬೆಳಿಗ್ಗೆ ಹೊತ್ತಿಗೆ ಮತ್ತಷ್ಟು ಬಿರುಸು ಪಡೆದುಕೊಂಡಿತು. ಹವಾಮಾನ ಇಲಾಖೆಯು ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ ಘೋಷಿಸಿದೆ. ಭಾಗಮಂಡಲದಲ್ಲಿ 4 ಸೆಂ.ಮೀ ಹಾಗೂ ಸಂಪಾಜೆಯಲ್ಲಿ 3 ಸೆಂ.ಮೀ. ಮಳೆಯಾಗಿದೆ. ಉಡುಪಿ ಮಂಗಳೂರಲ್ಲಿ ಮಳೆ (ಉಡುಪಿ ವರದಿ): ಉಡುಪಿ ಜಿಲ್ಲೆಯಲ್ಲಿ ಶನಿವಾರ ಬಿಟ್ಟು ಬಿಟ್ಟು ಬಿರುಸಿನ ಮಳೆ ಸುರಿಯಿತು. ಮಡಮಕ್ಕಿ ಭಾಗದಲ್ಲಿ ಉತ್ತಮ ಮಳೆಯಾಯಿತು.  ಮಂಗಳೂರು ನಗರದಲ್ಲಿ ಬೆಳಿಗ್ಗೆ 7 ಗಂಟೆ ಸುಮಾರು ಆರಂಭವಾದ ಮಳೆ ಬೆಳಿಗ್ಗೆ 11ರ ವರೆಗೆ ನಿರಂತರವಾಗಿ ಸುರಿಯಿತು. ಜಿಲ್ಲೆಯ ರಾಯಿ ಸರಪಾಡಿ ಪುತ್ತಿಗೆ ಭಾಗದಲ್ಲಿ ಉತ್ತಮ ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT