ಸಿಂಧನೂರು (ರಾಯಚೂರು ಜಿಲ್ಲೆ): ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ತಾಲ್ಲೂಕಿನ ಪುನರ್ವಸತಿ ಕ್ಯಾಂಪ್‌ನ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತದ ಪೌರತ್ವ ಲಭಿಸಿದೆ.
ಫೆಬ್ರುವರಿಯಲ್ಲಿ ರಾಜ್ಯಪತ್ರ ಹೊರಡಿಸಿ ನಿರಾಶ್ರಿತರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಅಂಚೆ ಇಲಾಖೆಯ ಅಧೀಕ್ಷಕರು ಸೇರಿದಂತೆ ರೈಲ್ವೆ ವ್ಯವಸ್ಥಾಪಕ, ಗುಪ್ತಚರ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ನಿರಾಶ್ರಿತರ ವಾಸಸ್ಥಳ ಹಾಗೂ ಮತ್ತಿತರ ಅಗತ್ಯ ದಾಖಲೆ ಪರಿಶೀಲಿಸಿ ಪೌರತ್ವಕ್ಕೆ ಶಿಫಾರಸು ಮಾಡಿತ್ತು. ಇದರ ಆಧಾರದ ಮೇಲೆ ಐವರಿಗೆ ಪೌರತ್ವ ನೀಡಲಾಗಿದೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಆರ್.ಎಚ್.ಕ್ಯಾಂಪ್ ನಂ.2ರ ರಾಮಕೃಷ್ಣನ್ ಅಧಿಕಾರಿ, ಸುಕುಮಾರ ಮಂಡಲ್, ಬಿಪ್ರದಾಸ್ ಗೋಲ್ದಾರ್, ಅದ್ವೈತ್, ಆರ್.ಎಚ್.ಕ್ಯಾಂಪ್ ನಂ.4ರ ಜಯಂತ್ ಮಂಡಲ್ ಅವರಿಗೆ ಕರ್ನಾಟಕ ಗೃಹ ಸಚಿವಾಲಯದ ಜನಗಣತಿ ಕಾರ್ಯಾಚರಣೆ ಹಾಗೂ ನಾಗರಿಕ ನೋಂದಣಿ ನಿರ್ದೇಶನಾಲಯ ಪೌರತ್ವ ಪ್ರಮಾಣ ಪತ್ರ ನೀಡಿದೆ.
‘ತಾಲ್ಲೂಕಿನಲ್ಲಿ ಐದು ಬಾಂಗ್ಲಾ ಕ್ಯಾಂಪ್‌ಗಳಿದ್ದು, ಇದರಲ್ಲಿ 146 ಜನ ನಿರಾಶ್ರಿತರು ಸಿಎಎ ಅಡಿ ಪೌರತ್ವಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ ಐವರಿಗೆ ಮಾತ್ರ ಪೌರತ್ವ ಲಭಿಸಿದೆ’ ಎಂದು ನಿಖಿಲ್ ಭಾರತ್ ಬಂಗಾಲಿ ಸಮನ್ವಯ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶೇನ್ ರಫ್ತಾನ್ ತಿಳಿಸಿದ್ದಾರೆ.