ಸಿಂಧನೂರು (ರಾಯಚೂರು ಜಿಲ್ಲೆ): ‘ಹಾವನೂರ ಆಯೋಗದ ವರದಿ ಆಧಾರದ ಮೇಲೆ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ ಮಹತ್ಕಾರ್ಯ ಮಾಡಿದರು. ಆದರೆ ಲಿಂಗಾಯತರಿಗೆ ಭೂಮಿಯುಳ್ಳವರು, ಆರ್ಥಿಕವಾಗಿ ಸದೃಢರೆನ್ನುವ ಕಾರಣದಿಂದ ಮೀಸಲಾತಿ ಕೊಡದೆ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿದರು.
ತಾಲ್ಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಭಾನುವಾರ ಸಿಂಧನೂರು ನಗರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಹಾಗೂ ಚನ್ನಮ್ಮ ವೃತ್ತದ ಉದ್ಘಾಟನೆಯ ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಸ್ಲಿಮರು ಹಿಂದುಳಿದ ಪ್ರವರ್ಗ-1, 2ಎ ಮತ್ತು 2ಬಿ ಮೂರರಲ್ಲಿಯೂ ಮೀಸಲಾತಿ ಪಡೆಯುತ್ತಿದ್ದು, ಅವರಿಗೆ ಶೇ 23ರಷ್ಟು ಪಾಲು ಲಭಿಸುತ್ತಿತ್ತು. ಇದೇ ಕಾರಣಕ್ಕೆ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಶೇ 4 ಮೀಸಲಾತಿಯನ್ನು ರದ್ದುಪಡಿಸಿ ಇತರ ವರ್ಗಗಳಿಗೆ ನೀಡಲಾಯಿತು’ ಎಂದು ಸ್ಮರಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಲತಃ ವಕೀಲರಾಗಿರುವುದರಿಂದ ಸೆ.22ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಕರ್ನಾಟಕದ ವಕೀಲರಿಂದ ‘2ಎ’ ಮೀಸಲಾತಿಗೆ ಒತ್ತಾಯಿಸಿ ಮನವಿಪತ್ರ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.