ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಉಪಚುನಾವಣೆ ರದ್ದುಗೊಳಿಸಲು ಜೆಡಿಎಸ್‌ ಒತ್ತಾಯ

Last Updated 16 ಏಪ್ರಿಲ್ 2021, 13:19 IST
ಅಕ್ಷರ ಗಾತ್ರ

ರಾಯಚೂರು: ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಮತದಾರರನ್ನು ಸೆಳೆಯಲು ಭಾರಿ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡುವ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿವೆ. ಸಂವಿಧಾನದ ಅನುಚ್ಚೇದ 324 ಪ್ರಕಾರ ಈ ಚುನಾವಣೆ ರದ್ದುಗೊಳಿಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವಿರೂಪಾಕ್ಷಿ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ತಾವು ಅಧಿಕಾರ ಪಡೆಯಲು ಪ್ರತಾಪಗೌಡ ಪಾಟೀಲ ಕಾರಣ, ಹೀಗಾಗಿ ಅವರನ್ನು ಗೆಲ್ಲಿಸಿ ಋಣ ತೀರಿಸಬೇಕು ಎಂದು ಘೋಷಿಸಿದ್ದರು. ಮುಖ್ಯಮಂತ್ರಿ, ಪುತ್ರ ವಿಜಯೇಂದ್ರ ಸೇರಿದಂತೆ ಬಿಜೆಪಿಯ ನಾಯಕರು ಹಾಗೂ ಸಚಿವರು ಮಸ್ಕಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲದೇ ಮತದಾರರ ಮನವೊಲಿಸಲು ಭಾರಿ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಿ ಆಮಿಷ ತೋರಿಸುತ್ತಿದ್ದಾರೆ.

ಹಾಸನ ಸೇರಿ ಇತರೆ ಜಿಲ್ಲೆಗಳಿಂದ ಬಿಜೆಪಿ ಕಾರ್ಯಕರ್ತರು ಮಸ್ಕಿಗೆ ಆಗಮಿಸಿ ಹಣ ಹಂಚಿಕೆ ಮಾಡುತ್ತಿದ್ದು ಈಗಾಗಲೇ ಕೆಲವರು ಸಿಕ್ಕಿ ಬಿದ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ದೂರಿನ ಮೇರೆಗೆ ಕೆಲವರ ಮೇಲೆ ಐಪಿಸಿ ಸೆಕ್ಷನ್ 171 ಕಲಂ ನಡಿ ಕೆಲವರ ಮೇಲೆ ಪ್ರಕರಣ ದಾಖಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದರೂ ಚುನಾವಣಾ ಇಲಾಖೆ ಆಡಳಿತ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ ಎಂದು ದೂರಿದರು.

ನೂರಾರು ಕೋಟಿ ಖರ್ಚು ಮಾಡಿ ಚುನಾವಣೆ ಗೆಲ್ಲಬಹುದು ಎಂಬ ಸಂದೇಶ ನೀಡುತ್ತಿರುವ ಈ ಚುನಾವಣೆಯು ಮುಂದೆ ಜನಸಾಮಾನ್ಯರು ಸ್ಪರ್ಧಿಸದಂತಹ ವಾತಾವರಣ ನಿರ್ಮಿಸಲಿದೆ. ತಮಿಳುನಾಡಿನ ಮುಖ್ಯಮಂತ್ರಿ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ 2017ರಲ್ಲಿ ನಡೆದ ಆರ್.ಕೆ ನಗರ ಉಪ ಚುನಾವಣೆಯಲ್ಲಿ ಹಣ ಹಂಚಿರುವ ಅಂಶ ಬೆಳಕಿಗೆ ಬಂದಾಗ ಚುನಾವಣೆ ರದ್ದುಪಡಿಸಲಾಗಿತ್ತು. ಈಗಲೂ ಅದೇ ಪರಿಸ್ಥಿತಿಯಿದ್ದು ಮಸ್ಕಿ ಉಪ ಚುನಾವಣೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಜಿಲ್ಲಾ ಚುನಾವಣೆ ಅಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ಪದಾಧಿಕಾರಿಗಳಾದ ಎನ್‌.ಶಿವಶಂಕರ್‌, ಯೂಸುಫ್‌ಖಾನ್‌, ಬಿ.ತಿಮ್ಮಾರೆಡ್ಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT