ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ, ರಸಗೊಬ್ಬರ ಖರೀದಿಗೆ ಬಿಲ್‌ ಕೊಡದಿದ್ದರೆ ದೂರು ನೀಡಿ

‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಆರ್. ಸಲಹೆ
Last Updated 22 ಮೇ 2022, 2:42 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಶನಿವಾರ ನಡೆದ ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಆರ್‌ ಅವರು ರೈತರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು. ಬೀಜ, ಗೊಬ್ಬರ ಖರೀದಿ ಸೇರಿ ಕೃಷಿ ಉಪಕರಣಗಳಿಗೆ ಸಂಬಂಧಿಸಿದಂತೆ ರೈತರು ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲದೆ, ಕೃಷಿ ಯೋಜನೆಗಳ ಬಗ್ಗೆಯೂ ಮಾಹಿತಿ ಪಡೆದರು.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನೂ ಬೀಜ ಕೊಡುತ್ತಿಲ್ಲ. ಸರ್ಕಾರದಿಂದ ಹತ್ತಿಬೀಜ ವಿತರಣೆಗೆ ಕ್ರಮ ಕೈಗೊಳ್ಳಿ. ಬೀಜ, ಗೊಬ್ಬರ ಮಾರುವ ಡೀಲರ್‌ಗಳು ಬಿಲ್‌ ಕೊಡುತ್ತಿಲ್ಲ’ ಎಂಬ ದೂರು ಬಹುತೇಕ ರೈತರಿಂದ ವ್ಯಕ್ತವಾಯಿತು. ಎಲ್ಲರ ಪ್ರಶ್ನೆಗಳಿಗೂ ಉತ್ತರಿಸಿದ ಅವರು ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸುವುದಾಗಿ ತಿಳಿಸಿದರು.

-ಸೂರ್ಯಕಾಂತಿ ಬೀಜಗಳನ್ನು ದುಬಾರಿ ಬೆಲೆಗೆ ಮಾರಲಾಗುತ್ತಿದೆ?

ಖಾಸಗಿ ಕಂಪನಿಗಳು ತಮ್ಮದೇ ಆದ ದರ ನಿಗದಿ ಪಡಿಸಿಕೊಂಡು ಮಾರುತ್ತಿದ್ದಾರೆ. ನಿಮಗೆ ಸೂಕ್ತ ಎನಿಸಿದ್ದನ್ನು ಖರೀದಿಸಬಹುದು. ಆದರೆ, ರೈತ ಸಂಪರ್ಕ ಕೇಂದ್ರದಲ್ಲೂ ಸೂರ್ಯಕಾಂತಿ ಬೀಜಗಳನ್ನು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಹಾಯಧನದಲ್ಲಿ ವಿತರಿಸಲಾಗುವುದು.

-ಬೀಜ ಗೊಬ್ಬರ ಮಾರಾಟಗಾರರು ಬಿಲ್‌ ಕೊಡುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳಿಗೆ ಲಂಚ ಕೊಡಬೇಕು ಎನ್ನುತ್ತಿದ್ದಾರೆ. ಇದು ಸತ್ಯವೇ?

ಬಿಲ್‌ ಕೊಡದೆ ಇದ್ದರೆ, ದೂರು ಕೊಡಿ. ಲಂಚ ಕೊಡುತ್ತಿದ್ದೇವೆ ಎನ್ನುವ ಅಂಗಡಿಗಳ ವಿರುದ್ಧ ಸಂಬಂಧಿಸಿದ ಕೃಷಿ ಅಧಿಕಾರಿಗೆ ದೂರು ನೀಡಿದರೆ ಮಾತ್ರ ನ್ಯಾಯ ಸಿಗುತ್ತದೆ.

-ಕೃಷಿ ಇಲಾಖೆ ಅಧಿಕಾರಿಗಳು ಬೀಜ, ಗೊಬ್ಬರ ಮಾರಾಟ ಅಂಗಡಿಗಳಿಗೆ ಏಕೆ ಭೇಟಿ ಕೊಡುತ್ತಿಲ್ಲ? ಎಷ್ಟು ಗ್ರಾಮಗಳಿಗೆ ನೀವು ಭೇಟಿ ನೀಡಿದ್ದೀರಿ?

ನಿರ್ದಿಷ್ಟ ಅಂಗಡಿಗಳ ಬಗ್ಗೆ ಮಾಹಿತಿ ನೀಡಿದರೆ, ಅಂಥ ಅಂಗಡಿಗಳ ವಿರುದ್ಧ ಖಂಡಿತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಜಂಟಿ ನಿರ್ದೇಶಕರೊಬ್ಬರೆ ಜಿಲ್ಲೆಯ ಎಲ್ಲ ಅಂಗಡಿಗಳಿಗೂ ಭೇಟಿ ನೀಡುವುದಕ್ಕೆ ಆಗುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ತಾಲ್ಲೂಕು, ಹೋಬಳಿಮಟ್ಟದಲ್ಲಿ ಕೃಷಿ ಅಧಿಕಾರಿಗಳಿದ್ದಾರೆ. ಮುದಗಲ್‌ ಅಂಗಡಿಗಳನ್ನು ಪರಿಶೀಲಿಸುವಂತೆ ಕೂಡಲೇ ಸೂಚನೆ ನೀಡಲಾಗುವುದು.

-ಮುಂಗಾರು ಬಿತ್ತನೆಗೆ ಯಾವ ಬೀಜಗಳು ಲಭ್ಯವಿದೆ? ಹತ್ತಿಬೀಜ ಏಕೆ ಕೊಡುತ್ತಿಲ್ಲ?

ಸೂರ್ಯಕಾಂತಿ, ತೊಗರಿ, ಸಜ್ಜೆ, ಮುಸುಕಿನಜೋಳ, ಭತ್ತದ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ಸಣ್ಣ, ಅತಿಸಣ್ಣ ರೈತರಿಗೆ ಸಹಾಯಧನದಲ್ಲಿ ಕೊಡಲಾಗುವುದು. ಹತ್ತಿಬೀಜ ಕೊಡುವುದಕ್ಕೆ ಸರ್ಕಾರದ ಮಟ್ಟದಿಂದಲೇ ಅವಕಾಶ ನೀಡಿಲ್ಲ. ನಿಮ್ಮ ಮನವಿಯನ್ನು ಜನಪ್ರತಿನಿಧಿಗಳ ಮೂಲಕವೇ ಸರ್ಕಾರಕ್ಕೆ ತಲುಪಿಸುವುದಕ್ಕೆ ಅವಕಾಶವಿದೆ. ಬಿ.ಟಿ.ಕಾಟನ್‌ ಬೀಜವನ್ನು ಖಾಸಗಿಯವರೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಳೆಹಾನಿಯಾಗಿದ್ದರೆ ಕೃಷಿ ಅಧಿಕಾರಿಗೆ ವಿವರ ಕೊಟ್ಟರೆ, ಪರಿಶೀಲಿಸುತ್ತಾರೆ.

-ಡೀಲರ್‌ಗಳು ಹಳೆಯ ಬೀಜ ಕೊಡುತ್ತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?

ಮುದಗಲ್‌ ವೆಂಕಟೇಶ್ವರ ಫರ್ಟಿಲೈಜರ್‌ ಮಳಿಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು.

-ಗಲಗ ಹೋಬಳಿಯಲ್ಲಿ 10 ಸಾವಿರ ಜನಸಂಖ್ಯೆ ಇದ್ದರೂ ರೈತ ಸಂಪರ್ಕ ಕೇಂದ್ರವಿಲ್ಲ.

ರೈತ ಸಂಪರ್ಕ ಕೇಂದ್ರ ತೆರೆಯುವುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟಿರುವ ವಿಚಾರ. ಜನಸಂಖ್ಯೆ ಆಧಾರದ ಮೇಳೆ ಆರ್‌ಎಸ್‌ಕೆ ತೆರೆಯುವುದಿಲ್ಲ. ಹೆಚ್ಚು ಕೇಂದ್ರಗಳನ್ನು ಸ್ಥಾಪಿಸುವ ವಿಚಾರ ಸಂಪೂರ್ಣ ಸರ್ಕಾರಕ್ಕೆ ಬಿಟ್ಟಿರುವ ವಿಚಾರ.

-ಈಗ ಮಳೆ ಬಿದ್ದಿದ್ದು, ಈಗ ಹೆಸರು ಬಿತ್ತನೆ ಮಾಡಬಹುದೆ?‌

ಈ ವರ್ಷ ಮುಂಗಾರು ಆರಂಭಕ್ಕೂ 12 ದಿನಗಳ ಮುನ್ನವೇ ಮಳೆ ಬಿದ್ದಿರುವುದು ಒಳ್ಳೆಯ ವಿಚಾರ. ಹೆಸರು ಬೆಳೆಯುವುದಕ್ಕೆ ಅವಕಾಶವಿದೆ. ಆದರೆ, ನಿಮ್ಮ ಮಣ್ಣು ಅದಕ್ಕೆ ಪೂರಕವಾಗಿದೆಯೇ ಎಂಬುದನ್ನು ತಿಳಿಯುವುದಕ್ಕೆ ಆರ್‌ಎಸ್‌ಕೆ ಮೂಲಕ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಿ. ಹೆಸರು ಕಾಳು ಬೀಜವು ಆರ್‌ಎಸ್‌ಕೆಯಲ್ಲಿ ನೀಡಲಾಗುವುದು. ಜೂನ್‌ 15 ರವರೆಗೂ ಹೆಸರು ಬಿತ್ತನೆ ಮಾಡುವುದಕ್ಕೆ ಅವಕಾಶವಿದೆ.

-ಬೀಜ, ಗೊಬ್ಬರ ಕೊಡಲು ಲಂಚ ಕೇಳುತ್ತಿದ್ದಾರೆ?

ಅಧಿಕಾರಿಗಳಿಗೆ ಲಂಚ ಕೊಡುತ್ತಿದ್ದೇವೆ ಎಂದು ಹೇಳುವವರು ಯಾರು ಎಂದು ಸ್ಪಷ್ಟವಾಗಿ ತಿಳಿಸಬೇಕು. ಅಲ್ಲದೆ, ಎಲ್ಲಿಯಾದರೂ ಲಂಚದ ವಿಚಾರಗಳು ಬಂದಾಗ, ಇದಕ್ಕಾಗಿಯೇ ತನಿಖೆ ನಡೆಸಿ ಕ್ರಮ ವಹಿಸುವುದಕ್ಕೆ ಸರ್ಕಾರದ ಬೇರೆ ಇಲಾಖೆಗಳಿದ್ದು, ಅಲ್ಲಿ ತಿಳಿಸಿದರೆ ನ್ಯಾಯ ಸಿಗುತ್ತದೆ. ಸ್ಪಷ್ಟತೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ಬೀಜ ಗೊಬ್ಬರ ಸಣ್ಣ, ಅತಿಸಣ್ಣ ರೈತರಿಗೆ ಸಹಾಯಧನದಲ್ಲಿ ಕೊಡಲಾಗುತ್ತಿದೆ.

-ಬೀಜಗಳು ಮತ್ತು ತಾಡಪತ್ರಿ ಸಿಗುತ್ತಿಲ್ಲ?

ರೈತ ಸಂಪರ್ಕ ಕೇಂದ್ರಗಳಲ್ಲಿ ಬರುವ ಸೋಮವಾರದಿಂದ ಬೀಜಗಳನ್ನು ವಿತರಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರವನ್ನು ಡೀಲರ್‌ಗಳಿಂದ ತೆಗೆದುಕೊಳ್ಳಬೇಕು. ಆರ್‌ಎಸ್‌ಕೆಯಿಂದ ಕೊಡಲಾಗುವುದಿಲ್ಲ. ಪರಿಶಿಷ್ಟ ರೈತರ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಸಲಕರಣೆಗಳನ್ನು ಕೊಡುವುದಕ್ಕೆ ಅವಕಾಶ ಮಾಡುವುದಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಬರೆಯಲಾಗಿದೆ.

-ಭೂಮಿ ಜವಳು ಹಿಡಿದಿದ್ದು, ಇಲಾಖೆಯಿಂದ ಏನು ಸಹಾಯವಿದೆ?

ಒಬ್ಬ ರೈತರದ್ದು ಜವಳು ಹಿಡಿದಿದ್ದರೆ ಈ ಬಗ್ಗೆ ಕ್ರಮ ವಹಿಸುವುದಕ್ಕೆ ಕೃಷಿ ಇಲಾಖೆಯಲ್ಲಿ ಯಾವುದೇ ಯೋಜನೆಗಳಿಲ್ಲ. ಆದರೆ, ಒಂದು ಬ್ಲಾಕ್‌ನಲ್ಲಿ ಇಂಥ ಸಮಸ್ಯೆ ವ್ಯಾಪಕವಾಗಿದ್ದರೆ, ಆಯಾ ಕಾಡಾ ಅಧಿಕಾರಿಗಳ ಗಮನಕ್ಕೆ ತರಬೇಕು. ಅವರಲ್ಲಿರುವ ಯೋಜನೆ ಜಾರಿಗೊಳಿಸುತ್ತಾರೆ.

-ಈ ಭಾಗದಲ್ಲಿ 150 ರೈತರು ಹತ್ತಿಬೀಜ ಉತ್ಪಾದನೆ ಮಾಡುತ್ತಿದ್ದು, ಇಲಾಖೆಯಿಂದ ನೆರವು ಇದೆಯೇ?

ಯಾವ ಕಂಪನಿಗೆ ಬೀಜ ಉತ್ಪಾದನೆ ಮಾಡುತ್ತಿದ್ದೀರಿ, ಆ ಕಂಪೆನಿಯು ಅನುಮತಿ ಪಡೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುವುದು. ಖಂಡಿತ ಸಗಮಕುಂಟಾ ಭಾಗಕ್ಕೆ ಬಂದು ಬೀಜ ಉತ್ಪಾದನೆ ಪರಿಶೀಲಿಸಲಾಗುವುದು. ಇಲಾಖೆಯಿಂದ ನೆರವು ಒದಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು.

-ಸೂರ್ಯಕಾಂತಿ ಬೀಜಗಳನ್ನು ಕೊಡುತ್ತಿಲ್ಲ.

ಬರುವ ಸೋಮವಾರದಿಂದ ಬೀಜಗಳು ದೊರೆಯುತ್ತವೆ. ಬೀಜಗಳನ್ನು ಖರೀದಿಸುವ ಅಂಗಡಿಯಿಂದ ಕಡ್ಡಾಯವಾಗಿ ಬಿಲ್‌ ಪಡೆದುಕೊಳ್ಳಿ. ಒಂದು ವೇಳೆ ಬಿಲ್‌ ಕೊಡದೆ ಇದ್ದರೆ ಆಯಾ ತಾಲ್ಲೂಕು ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಗಳಿದ್ದು, ದೂರು ಕೊಡಿ.

-ಸಹಾಯಧನದಲ್ಲಿ ಟ್ರ್ಯಾಕ್ಟರ್‌ ಕೊಡುತ್ತಿಲ್ಲವೆ?

ಒಂದು ಕೇಂದ್ರದಿಂದ ಒಂದು ಟ್ರ್ಯಾಕ್ಟರ್‌ ಮಾತ್ರ ಸಹಾಯಧನದಲ್ಲಿ ನೀಡಲಾಗುತ್ತಿದ್ದು, ಫಲಾನುಭವಿಯನ್ನು ಶಾಸಕರ ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಗುವುದು.

-ರೈತರು ಮತ್ತು ಕೃಷಿ ಇಲಾಖೆ ಮಧ್ಯೆ ಸಂಪರ್ಕದ ಕೊರತೆ ಬಹಳಷ್ಟಿದೆ.

ಕೃಷಿ ಇಲಾಖೆಯಲ್ಲಿ ಶೇ 50 ರಷ್ಟು ಸಿಬ್ಬಂದಿ ಕೊರತೆ ಇದೆ. ಆದರೂ ಕಷ್ಟಪಟ್ಟು ರೈತರನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ. ಕೃಷಿ ಅಭಿಯಾನದ ಮೂಲಕ ಮಾಹಿತಿ ಹೊತ್ತ ರಥವನ್ನು ಗ್ರಾಮಗಳಿಗೆ ಬಿಡಲಾಗುವುದು. ಕೃಷಿ ಇಲಾಖೆ–ರೈತರ ಮಧ್ಯೆ ಸಂಪರ್ಕ ಕೊರತೆ ಇರಬಾರದು ಎನ್ನುವುದು ನಮ್ಮ ನಿಲುವು. ಆದಷ್ಟು ಪ್ರಯತ್ನ ಪಟ್ಟು ಯೋಜನೆಗಳನ್ನು ತಲುಪಿಸಲಾಗುತ್ತಿದೆ.

-ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಯಾವ ರೀತಿ ಪ್ರಯೋಜನವಿದೆ.

ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಯೋಜನೆಯಡಿ ರಾಯಚೂರು ಜಿಲ್ಲೆಗೆ ಮೆಣಸಿನಕಾಯಿ ಕೊಡಲಾಗಿದೆ. ಆದರೆ, ಯಾವುದೇ ಉತ್ಪನ್ನಗಳಿಗೂ ಒಡಿಒಪಿ ಅನುಕೂಲ ಕೊಡಬಹುದು ಎನ್ನುವ ಸೂಚನೆ ಇದೆ.

ಇದರಲ್ಲಿ ತುಂಬಾ ಅನುಕೂಲಗಳಿದ್ದು, ನೇರವಾಗಿ ಕೃಷಿ ಇಲಾಖೆಯನ್ನು ಸಂಪರ್ಕಿಸಿದರೆ ಇದರ ಬಗ್ಗೆ ತಿಳಿಸಿಕೊಡುತ್ತಾರೆ. ಯೋಜನೆ ಜಾರಿಗೆ ಆಸಕ್ತಿ ಇದ್ದರೆ, ನಾವೇ ಡಿಪಿಆರ್‌ ಮಾಡಿಸಿಕೊಡುತ್ತೇವೆ. ಜಿಲ್ಲಾ ಕೇಂದ್ರಕ್ಕೆ ಖುದ್ದಾಗಿ ನನ್ನನ್ನು ಭೇಟಿ ಮಾಡಿದರೆ, ಯೋಜನೆ ಸವಿವರ ಕೊಡಲಾಗುವುದು.

ಶೇಂಗಾ ಬೀಜ ಕೊಡುತ್ತಿಲ್ಲ!
ರಾಯಚೂರು ಜಿಲ್ಲೆಯಲ್ಲಿ ಬಹಳಷ್ಟು ರೈತರು ಕದ್ರಿ ಲೇಪಾಕ್ಷಿ ಶೇಂಗಾ ಬೀಜ ಕೇಳುತ್ತಿದ್ದಾರೆ. ಇದು ಹೆಚ್ಚು ಇಳುವರಿ ಕೊಡುವ ಬೀಜ ಎನ್ನುವುದು ಗೊತ್ತಾಗಿದೆ. ಈ ಬಗ್ಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಹಕಾರದೊಂದಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬೀಜ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದೇವಿಕಾ ಆರ್‌. ತಿಳಿಸಿದರು.

ಪರಿಶಿಷ್ಟ ರೈತರ ಸಂಖ್ಯೆ ಹೆಚ್ಚು
ರಾಯಚೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರ ಸಂಖ್ಯೆ ಅತಿಹೆಚ್ಚಾಗಿದೆ. ಈಗಿರುವ ಕೋಟಾದಡಿ ಎಲ್ಲರಿಗೂ ಸೌಲಭ್ಯ ನೀಡುವುದಕ್ಕೆ ಸಾಕಾಗುತ್ತಿಲ್ಲ. ಹೀಗಾಗಿ ಪರಿಶಿಷ್ಟರ ಸಂಖ್ಯೆ ಹೆಚ್ಚಾಗಿದ್ದು, ಕೋಟಾ ಹೆಚ್ಚಿಸುವುದಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಪ್ರಶ್ನೆ ಕೇಳಿದವರು
ಆದನಗೌಡ ವಟಗಲ್, ಸುರೇಖಾ ಆಸಿಹಾಳ, ಹಸನಸಾಬ್‌ ಜವಳಗೇರಾ, ನಾಗರಾಜ ಪುಲದಿನ್ನಿ, ನೇಮಿಚಂದ, ಮುದಗಲ್‌, ಗಂಗಪ್ಪ ಕವಿತಾಳ, ಭೀಮಸೇನ್‌ ಪಲಕನಮರಡಿ, ಹುಸೇನಸಾಬ್‌ ಆಮದಿಹಾಳ, ನಿಂಗಯ್ಯ ಗಲಗ, ಲಿಂಗಾರೆಡ್ಡಿ ಪಾಟೀಲ ಮಾನ್ವಿ, ಶಿವಕುಮಾರ್‌ ವಟಗಲ್‌, ವೆಂಕಟೇಶ ಮುದಗಲ್‌, ಶಿವರಾಜ ಜಾಲಹಳ್ಳಿ, ಮೌನೇಶ ಜಾಲಹಳ್ಳಿ, ಸುರೇಂದ್ರ ಶಕ್ತಿನಗರ, ಭೀಮಣ್ಣ ಸಿಂಧನೂರು, ಶಿವಮೂರ್ತಿ ಮಲದಕಲ್‌, ಸುಭಾಷಗೌಡ ಗಂಜಳ್ಳಿ, ವೆಂಕಟರೆಡ್ಡಿ ಪಾಟೀಲ ಕೊಪ್ಪರ, ಬಸನಗೌಡ ಹಂಪನಾಳ, ಶಿವಕುಮಾರ್‌ ಕವಿತಾಳ, ಶಂಕರಲಿಂಗ ಬಪ್ಪೂರ, ಸುಭಾಶ್ಚಂದ್ರ ಕವಿತಾಳ, ಶ್ರೀನಿವಾಸ ಸಗಮಕುಂಟಾ, ವೀರಪನಗೌಡ ಮುದಗಲ್‌, ಭೀಮರಾಯ ಕೋಳೂರ ಮತ್ತು ಶರಣಬಸವ ಜವಳಗೇರಾ.

***

ನಿರ್ವಹಣೆ: ನಾಗರಾಜ ಚಿನಗುಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT