ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ | ರಾಯಚೂರು ಜಿಲ್ಲೆಯ ಹಳೆಯ ಯೋಜನೆಗಳಿಗೆ ಪಾಲಿಶ್‌

Published 8 ಜುಲೈ 2023, 6:30 IST
Last Updated 8 ಜುಲೈ 2023, 6:30 IST
ಅಕ್ಷರ ಗಾತ್ರ

ಚಂದ್ರಕಾಂತ ಮಸಾನಿ

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಿದರೂ ಜಿಲ್ಲೆಗೆ ಹೇಳಿಕೊಳ್ಳುವಂಥ ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ. ಹಳೆಯ ಯೋಜನೆಗಳಿಗೆ ಪಾಲಿಶ್‌ ಮಾಡಿ ಪ್ರಕಟಿಸಿದೆ.

ಬಿಜೆಪಿ ಸೇರಿದಂತೆ ಹಿಂದಿನ ಸರ್ಕಾರಗಳ ಘೋಷಿಸಿದ ಯೋಜನೆಗಳು ಅಪೂರ್ಣವಾಗಿರುವ ಕಾರಣ ಅವುಗಳನ್ನು ಪೂರ್ಣಗೊಳಿಸಲು ಬಜೆಟ್‌ನಲ್ಲಿ ಒತ್ತುಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಳೆಯ ಯೋಜನೆಗಳೇ ಐದು ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡರೂ ಜಿಲ್ಲೆಯ ಜನರಿಗೆ ಅಕ್ಷರಶಃ ವರದಾನವೇ ಆಗಲಿದೆ.

ತುಂಗಭದ್ರಾ ಜಲಾಶಯ ನೀರು ಸಂಗ್ರಹಣೆ ಕೊರತೆ ಸರಿದೂಗಿಸಲು ಕಾರಟಗಿ ತಾಲ್ಲೂಕಿನ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ₹1,000 ಕೋಟಿ ಅನುದಾನ ಒದಗಿಸುವ ಪ್ರಸ್ತಾಪ ಮಾಡಲಾಗಿದೆ. ಜಲಾಶಯ ನಿರ್ಮಾಣದಿಂದ ರಾಯಚೂರು ಜಿಲ್ಲೆಯ ಎರಡು ತಾಲ್ಲೂಕುಗಳ ರೈತರಿಗೆ ಅನುಕೂಲವಾಗಲಿದೆ. ವಾಸ್ತವದಲ್ಲಿ ಇದೊಂದು ಹಳೆಯ ಯೋಜನೆ. ಈ ಸರ್ಕಾರದ ಅವಧಿಯಲ್ಲೇ ಯೋಜನೆ ಪೂರ್ಣಗೊಂಡರೆ ರೈತರ ಬಹುದಿನಗಳ ಕನಸು ನನಸಾಗಲಿದೆ.

ಕೇಂದ್ರ ಸರ್ಕಾರದ ಕೃಷ್ಣಾ ಮೇಲ್ದಂಡೆ ಯೋಜನೆಯ ನಂದವಾಡಗಿ, ನಾರಾಯಣಪುರ (9ಎ) ಬಲದಂಡೆ ಕಾಲುವೆ ವಿಸ್ತರಣೆಗೆ ಕ್ರಮ ಕೈಗೊಳ್ಳಲು ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ. ಇದು ಸಹ ಹಳೆಯ ಯೋಜನೆ. ಸರ್ಕಾರ ಯೋಜನೆ ಕೈಗೊತ್ತಿಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ.

ರಾಯಚೂರಿನಲ್ಲಿ ₹186 ಕೋಟಿ ವೆಚ್ಚದಲ್ಲಿ ಗ್ರೀನ್–ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ವಿಷಯ ಪ್ರಸ್ತಾಪ ಮಾಡಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲೇ ಇದಕ್ಕೆ ಹಸಿರು ನಿಶಾನೆ ದೊರಕಿದೆ. ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ವಿಳಂಬವಾಗಿತ್ತು. ಈಗ ಸಮಸ್ಯೆ ಬಗೆ ಹರಿದಿದೆ. ವಿಮಾನ ನಿಲ್ದಾಣ ನಿರ್ಮಾಣವಾದರೆ ಕೈಗಾರಿಕೆಗಳು ಬರಲು ಅನುಕೂಲವಾಗಲಿದೆ. ರಾಯಚೂರ ಅಭಿವೃದ್ಧಿ ವೇಗ ಪಡೆಯಲಿದೆ ಎಂದು ಕೈಗಾರಿಕೋದ್ಯಮಿಗಳು ಆಶಯ ವ್ಯಕ್ತಪಡಿಸಿದ್ದಾರೆ.

ಕಲ್ಮಲಾ–ಸಿಂಧನೂರ 76 ಕಿ.ಮೀ ಉದ್ದದ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ₹1,696 ಕೋಟಿ ಒದಗಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಲಿದೆ. ಸಾರಿಗೆ ಸಂಪರ್ಕ ಇದ್ದರೆ ನಗರ ಹಾಗೂ ಜಿಲ್ಲೆ ಅಭಿವೃದ್ಧಿಗೊಳ್ಳಲು ಹೆಚ್ಚು ಅನುಕೂಲವಾಗಲಿದೆ.

ರಾಯಚೂರಿನಲ್ಲಿ ಕಣ್ಣಿನ ಆಸ್ಪತ್ರೆ ನಿರ್ಮಾಣದ ಪ್ರಸ್ತಾವವನ್ನೂ ಮಾಡಲಾಗಿದೆ. ಹಿಂದುಳಿದ ಜಿಲ್ಲೆಯ ಜನರ ನೇತ್ರ ತಪಾಸಣೆ, ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸೆ ಸುಲಭವಾಗಲಿದೆ.

ಶಿಕ್ಷಣ ಪ್ರೇಮಿಗಳು ನಡುಗಡ್ಡೆ ವಾಸಿಗಳಿಗೆ ನಿರಾಸೆ

ರಾಜ್ಯ ಸರ್ಕಾರ ಚಾಮರಾಜನಗರ ಬೀದರ್ ಹಾವೇರಿ ಹಾಸನ ಕೊಡಗು ಕೊಪ್ಪಳ ಹಾಗೂ ಬಾಗಲಕೋಟೆಯ ವಿಶ್ವವಿದ್ಯಾಲಯಗಳನ್ನು ಮಾದರಿ ವಿಶ್ವವಿದ್ಯಾಲಯಗಳನ್ನಾಗಿ ರೂಪಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ. ಆದರೆ 2019ರಲ್ಲೇ ಘೋಷಣೆಯಾದ ರಾಯಚೂರು ವಿಶ್ವವಿದ್ಯಾಲಯ ಇಂದಿಗೂ ಮೂಲಸೌಕರ್ಯಗಳಿಗಾಗಿ ಗೋಗರೆಯುತ್ತಿದೆ. ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಆಡಳಿತ ಕಚೇರಿ ಇಲ್ಲ ಜಿಮಖಾನಾ ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳು ಇಲ್ಲ. ರಾಯಚೂರು ವಿಶ್ವವಿದ್ಯಾಲಯ ಅಭಿವೃದ್ಧಿಗೆ ಅನುದಾನ ಒದಗಿಸದೇ ಇರುವುದು ವಿದ್ಯಾರ್ಥಿಗಳು ಹಾಗೂ ಶಿಕ್ಷಣಪ್ರೇಮಿಗಳಲ್ಲಿ ನಿರಾಸೆ ಉಂಟು ಮಾಡಿದೆ.

‘ರಾಜ್ಯ ಸರ್ಕಾರ ಹಿಂದುಳಿದ ಜಿಲ್ಲೆಯ ರಾಯಚೂರು ವಿಶ್ವವಿದ್ಯಾಲಯವನ್ನು ಕಡೆಗಣಿಸುವ ಮೂಲಕ ಜಿಲ್ಲೆ ಶೈಕ್ಷಣಿಕವಾಗಿ ಹಿಂದೆ ಉಳಿಯುವಂತೆ ಮಾಡಿದೆ. ಜನಪ್ರತಿನಿಧಿಗಳು ಇದರ ವಿರುದ್ಧ ಪಕ್ಷಭೇದ ಮರೆತು ಧ್ವನಿ ಎತ್ತಬೇಕು’ ಎನ್ನುತ್ತಾರೆ ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷ ಹಯ್ಯಾಳಪ್ಪ.

‘ರಾಯಚೂರು ವಿಶ್ವವಿದ್ಯಾಲಯದಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳೂ ಓದುತ್ತಿದ್ದಾರೆ. ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡಲು ರಾಯಚೂರನ್ನು ಪರಿಗಣಿಸಬೇಕಿತ್ತು’ ಎಂದು ವಿದ್ಯಾರ್ಥಿನಿಯರಾದ ಕವಿತಾ ಹಾಗೂ ಅಮಿತಾ ಹೇಳುತ್ತಾರೆ. ನಡುಗಡ್ಡೆ ಪ್ರದೇಶದ ನಿವಾಸಿಗಳು ಹಾಗೂ ಗ್ರಾಮಗಳ ಜನರಿಗೆ ಈ ವರ್ಷದ ಬಜೆಟ್‌ನಲ್ಲೂ ನ್ಯಾಯ ದೊರಕಲಿಲ್ಲ. ಸಂಕಷ್ಟದಲ್ಲೇ ಬದುಕು ದೂಡಿಕೊಂಡು ಹೋಗುವ ಅನಿವಾರ್ಯತೆ ಮುಂದುವರಿದಿದೆ. ‘ಸರ್ಕಾರ ನಡಗಡ್ಡೆ ಗ್ರಾಮಗಳ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಮೀನಮೀಷ ಮಾಡುತ್ತಿರುವುದು ಬೇಸರ ತಂದಿದೆ’ ಎಂದು ನಡುಗಡ್ಡೆ ಗ್ರಾಮಗಳ ದಳಪತಿ ಭೀಮಶ್ಯಾ ಬಸಪ್ಪ ಹೇಳುತ್ತಾರೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ಹರಿದ ಕೃಷ್ಣಾ ನದಿಯಲ್ಲಿರುವ ಯರಗೋಡಿಯ ನಡುಗಡ್ಡೆ
ಲಿಂಗಸುಗೂರು ತಾಲ್ಲೂಕಿನಲ್ಲಿ ಹರಿದ ಕೃಷ್ಣಾ ನದಿಯಲ್ಲಿರುವ ಯರಗೋಡಿಯ ನಡುಗಡ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT