ರಾಯಚೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿ 30ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಈ ಸಲ 31ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಗೆ ಶೇಕಡ 63.49ರಷ್ಟು ಫಲಿತಾಂಶ ಬಂದಿದೆ.
2017ರಲ್ಲಿ ಶೇ.69.69ರಷ್ಟು ಫಲಿತಾಂಶ ಪಡೆದಿತ್ತು. ಆದರೆ, ಮರು ವರ್ಷವೇ 2018ರಲ್ಲಿ ಶೇ.68.89ಕ್ಕೆ ಕುಸಿಯಿತು. 2018ರಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 30ನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ2019ರಲ್ಲಿ 29ನೇ ಸ್ಥಾನಕ್ಕೆ ಏರಿತ್ತು. 2022ರಲ್ಲಿ 32ನೇ ಸ್ಥಾನ ಹಾಗೂ 2023ರಲ್ಲಿ ಶೇಕಡ 84.02 ಫಲಿತಾಂಶ ಪಡೆದು 30ನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಪ್ರಸಕ್ತ ವರ್ಷ ಮತ್ತೆ ಒಂದು ಸ್ಥಾನ ಕುಸಿದು ಶೇಕಡ 63.49 ರಷ್ಟು ಫಲಿತಾಂಶ ಪಡೆದು 31ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ ಆಯೋಜಿಸಿಬೇಕು ಹಾಗೂ ವಿಶೇಷ ತರಗತಿಗಳನ್ನು ನಡೆಸಬೇಕು ಎಂದು ಕಳೆದ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಾಲಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಜಿಲ್ಲಾ ಪಂಚಾಯಿತಿಯೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಆಸಕ್ತಿ ತೋರಿಸಲಿಲ್ಲ.
ಒಂದು ವರ್ಷದ ಅವಧಿಯಲ್ಲಿ ಮೂವರು ಉಪ ನಿರ್ದೇಶಕರು ವರ್ಗವಾಗಿ ಹೋಗಿದ್ದಾರೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಇದ್ದ ಉಪ ನಿರ್ದೇಶಕರು ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಒಂದೂ ಕಾರ್ಯಕ್ರಮ, ಯೋಜನೆ ಹಾಕಿಕೊಳ್ಳಲೇ ಇಲ್ಲ. ಮಧ್ಯದಲ್ಲಿ ವರ್ಗವಾಗಿ ಬಂದವರು ಮಧ್ಯದಲ್ಲೇ ಹೋದರು. ಕೊನೆಯಲ್ಲಿ ಬಂದವರಿಗೆ ಕೊನೆಯ ಕ್ಷಣದಲ್ಲಿ ಎಲ್ಲವನ್ನೂ ಸರಿಪಡಿಸಲು ಸಾಧ್ಯವಾಗಲಿಲ್ಲ. ಶಿಕ್ಷಕ ವರ್ಗದವರು ಸಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲೇ ಇಲ್ಲ.
‘ಪ್ರಾಥಮಿಕ ಹಂತದಲ್ಲೇ ಮುಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ತಳಪಾಯ ಗುಣಮಟ್ಟದ್ದಾಗಿದ್ದರೆ ಎಸ್‌ಎಸ್‌ಎಲ್‌ಸಿಯಲ್ಲಿ ಗುಣಮಟ್ಟದ ಫಲಿತಾಂಶ ನಿರೀಕ್ಷಿಸಲು ಸಾಧ್ಯವಾಗುತ್ತದೆ. ಕೊನೆಯ ಹಂತದಲ್ಲಿ ಫೋಕಸ್ ಮಾಡುತ್ತಿರುವ ಕಾರಣ ಉತ್ತಮ ಫಲಿತಾಂಶ ಬರುತ್ತಿಲ್ಲ‘ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಗದ್ದಿ ಅಭಿಪ್ರಾಯಪಟ್ಟರು.
‘ಮುಖ್ಯವಾಗಿ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳು ಪ್ರೌಢಶಾಲೆಗೆ ಬಂದರೂ ಓದಲು ಬರದಂತಹ ಸ್ಥಿತಿ ಇದೆ. ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷೆಗಳು 15 ದಿನಗಳು ಇರುವಾಗ ಶಿಕ್ಷಕರಿಗೆ ತರಬೇತಿ ನೀಡಿದರು. ಈ ಎಲ್ಲ ಕಾರಣಗಳಿಂದಾಗಿ ಗುಣಮಟ್ಟದ ಫಲಿತಾಂಶ ನಿರೀಕ್ಷಿಸಲು ಸಾಧ್ಯವಾಗಿಲ್ಲ‘ ಎಂದು ಶಿಕ್ಷಣ ತಜ್ಞ ಹಫಿಜುಲ್ಲಾ ವಿಶ್ಲೇಷಿಸುತ್ತಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರಿ ಪ್ರೌಢ ಶಾಲೆಗಳಿಗೆ ಮೆರಿಟ್ ಆಧಾರದ ಮೇಲೆ ಪ್ರತಿಭಾವಂತ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ. ಅನುದಾನ ರಹಿತ ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಕರೇ ಮಕ್ಕಳಿಗೆ ಬೋಧನೆ ಮಾಡುತ್ತಾರೆ. ಎರಡು ಪ್ರೌಢ ಶಾಲೆಗಳನ್ನು ಹೋಲಿಕೆ ಮಾಡಿದರೆ ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶ ಉತ್ತಮವಾಗಿರಬೇಕು. ಆದರೆ, ಇಲ್ಲಿ ಕಳಪೆ ಸಾಧನೆ ತೋರಿವೆ‘ ಎಂದು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಪಾಲಕರು ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ14275 ಬಾಲಕರು ಹಾಗೂ 15252 ಬಾಲಕಿಯರು ಒಟ್ಟು 29527 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 7821 ಬಾಲಕರು ಹಾಗೂ 10925 ಬಾಲಕಿಯರು ಸೇರಿ ಒಟ್ಟು 18746 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲೂ ಬಾಲಕಿಯರೇ ಮೇಲಗೈ ಸಾಧಿಸಿದ್ದಾರೆ. ರಾಯಚೂರು ತಾಲ್ಲೂಕು ಮಾತ್ರ ಜಿಲ್ಲೆಯ ತಾಲ್ಲೂಕುಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಶೇಕಡ 51.15ರಷ್ಟು ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ದೇವದುರ್ಗ ಹಾಗೂ ಸಿಂಧನೂರು ತಾಲ್ಲೂಕು ಸ್ಪಲ್ಪಮಟ್ಟಿಗೆ ಉತ್ತಮ ಫಲಿತಾಂಶ ಪಡೆದುಕೊಂಡಿವೆ. ದೇವದುರ್ಗ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 4092 ವಿದ್ಯಾರ್ಥಿಗಳಲ್ಲಿ 1450 ಬಾಲಕರು 1782 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 3007 ವಿದ್ಯಾರ್ಥಿಗಳಲ್ಲಿ 1563 ಬಾಲಕರು ಹಾಗೂ 2037 ಬಾಲಕಿಯರು ಮಾನ್ವಿ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 2854 ವಿದ್ಯಾರ್ಥಿಗಳಲ್ಲಿ1379 ಬಾಲಕರು 1986 ಬಾಲಕಿಯರು ಪಾಸಾಗಿದ್ದಾರೆ. ರಾಯಚೂರು ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 8183 ವಿದ್ಯಾರ್ಥಿಗಳಲ್ಲಿ1607 ಬಾಲಕರು ಹಾಗೂ 2579 ವಿದ್ಯಾರ್ಥಿಗಳು ಸಿಂಧನೂರು ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ5611 ವಿದ್ಯಾರ್ಥಿಗಳಲ್ಲಿ 1822 ಬಾಲಕರು ಹಾಗೂ 2541 ಬಾಲಕಿಯರು ತೇರ್ಗಡೆ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.