ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಲ್ಲಿ ಮಾಹಿತಿ ಕೊರತೆ: ಶಾಸಕ ನಾಡಗೌಡ ಬೇಸರ

ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಿ
Last Updated 17 ಜನವರಿ 2022, 12:19 IST
ಅಕ್ಷರ ಗಾತ್ರ

ಸಿಂಧನೂರು: ತ್ರೈಮಾಸಿಕ ಕೆಡಿಪಿ ಸಭೆಗೆ ಮಾಹಿತಿ ಇಲ್ಲದೆ ಬಂದವರ ಮತ್ತು ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ವೆಂಕಟರಾವ್ ನಾಡಗೌಡ ಅವರು,ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಪವನಕುಮಾರ ಅವರಿಗೆ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರತಿಯೊಂದು ಸಭೆಗೂ ಅಧಿಕಾರಿಗಳು ತಾವು ಬರದೆ ಸಿಬ್ಬಂದಿ ಕಳುಹಿಸುವುದು, ಸಮರ್ಪಕವಾಗಿ ಮಾಹಿತಿ ಇಲ್ಲದೆ ಬರುವುದು ಬೇಸರ ತಂದಿದೆ. ಇಂತಹ ಕಾಟಾಚಾರದ ಸಭೆಯನ್ನು ಮಾಡುವುದು ತಮಗೆ ಬೇಕಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜನಿಯರ್ ಮಹಾಂತೇಶ ಬದಲಿಗೆ ಸಭೆಗೆ ಬಂದಿದ್ದ ಎಂಜನಿಯರೊಬ್ಬರು ‘ಎಚ್‍ಕೆಆರ್‌ಡಿಬಿ ಯೋಜನೆಯಡಿ 2018-19ನೇ ಸಾಲಿನಲ್ಲಿ ಕೈಗೊಂಡ ಒಟ್ಟು 40 ಕಾಮಗಾರಿಗಳಲ್ಲಿ 26 ಪೂರ್ಣಗೊಂಡಿದ್ದು, 14 ಪ್ರಗತಿಯಲ್ಲಿವೆ. 3 ಕೆಲಸಗಳು ಬದಲಾವಣೆಯಾಗಿವೆ’ ಎಂದು ಮಾಹಿತಿ ನೀಡಿದರು.

ಆಗ ಶಾಸಕ ನಾಡಗೌಡ ಅವರು, ‘ಯಾವ ಗ್ರಾಮಕ್ಕೆ ಕಾಮಗಾರಿ ಸ್ಥಳಾಂತರಿಸಲಾಗಿದೆ’ ಎಂದು ಪ್ರಶ್ನಿಸಿದರು. ಇದಕ್ಕೆ ನಿರುತ್ತರರಾದ ಎಂಜನಿಯರ್‌ಗೆ ಶಾಸಕರು, ‘ಮಾಹಿತಿ ಇಲ್ಲದಿದ್ದರೆ ಸಭೆಗೆ ಯಾಕೆ ಬಂದಿಯಾ’ ಎಂದು ತರಾಟೆ ತೆಗೆದುಕೊಂಡರು.

ದಿದ್ದಿಗಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ದುರಸ್ತಿ ಮಾಡಲು ಗ್ರಾಮಸ್ಥರಿಂದ ತಕರಾರು ಇರುವುದರಿಂದ ತಡೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದ ಎಂಜನಿಯರ್‌ಗೆ ಪುನಃ ಶಾಸಕರು, ‘ಏನು ತಕರಾರು ಇದೆ’ ಎಂದು ಪ್ರಶ್ನಿಸಿದರು.

ಪುನಃ ಉತ್ತರ ಕೊಡಲಿಲ್ಲ. ಆಗ ಸಿಡಿಪಿಒ ಸುದೀಪ್ ಕುಮಾರ ಅವರನ್ನು ‘ಗ್ರಾಮಸ್ಥರದ್ದು ಏನು ತರಕಾರು ಇದೆ ನಿಮಗಾದರೂ ಗೊತ್ತಾ, ನೀವು ಸ್ಥಳಕ್ಕೆ ಹೋಗಿ ವೀಕ್ಷಣೆ ಮಾಡಿದ್ದೀರಾ’ ಎಂದು ಶಾಸಕರು ಕೇಳಿದರು.

ಅವರು ಸಹ ಪ್ರತಿಕ್ರಿಯೆ ನೀಡದೆ ನಿಂತುಬಿಟ್ಟರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಶಾಸಕರು, ‘ಸ್ಥಳ ವೀಕ್ಷಣೆ ಮಾಡಲ್ಲ, ಮಾಹಿತಿ ನೀಡಲ್ಲ ಅಂದ್ರೆ ನಿಮ್ಮ ಕೆಲಸ ಏನು, ಜವಾಬ್ದಾರಿ ಇಲ್ವಾ’ ಎಂದು ತರಾಟೆಗೆ ತೆಗೆದುಕೊಂಡರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿ ಸಿದ್ದಪ್ಪ ಅಂಗಡಿ ಅವರು, ಇಲಾಖೆಗೆ ಬಂದ ಅನುದಾನ, ಅದರಲ್ಲಿ ಖರ್ಚು ಮತ್ತು ಉಳಿದ ಅನುದಾನದ ಕುರಿತು ಮಾತ್ರ ಮಾಹಿತಿ ನೀಡಿದರು.

ಆಗ ಶಾಸಕ ನಾಡಗೌಡ ಅವರು, ‘ಇಲಾಖೆ ವ್ಯಾಪ್ತಿಯಲ್ಲಿ ಎಷ್ಟು ಹಾಸ್ಟೆಲ್ ಬರುತ್ತವೆ. ಎಷ್ಟು ವಿದ್ಯಾರ್ಥಿಗಳಿದ್ದಾರೆ. ಎಷ್ಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಬೋಧನಾ ಶುಲ್ಕ ಕೊಟ್ಟಿದ್ದೀರಿ. ಅದರ ಬಗ್ಗೆ ಮಾಹಿತಿ ಕೊಡಿ’ ಎಂದಾಗ ಮಾಹಿತಿ ನೀಡಲು ತಡವರಿಸಿದರು. ತಕ್ಷಣ ಮಾಹಿತಿ ತರುವಂತೆ ಸೂಚಿಸಿದರು.

ನಂತರ ಮೀನುಗಾರಿಕೆ ಇಲಾಖೆಯ ಅಧಿಕಾರಿ ಶಿವಪ್ಪ ಅವರು, ಇಲಾಖೆಯ ಪ್ರಗತಿಯ ವರದಿ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡದೆ ಒಂದೇ ಪುಟದ ವರದಿ ನೀಡಿದ್ದರು.

ಇದರಿಂದ ಸಿಟ್ಟಾದ ಶಾಸಕರು, ‘ಸಮಗ್ರ ಮಾಹಿತಿ ಇಲ್ಲದಿದ್ದರೆ ಕತ್ತೆ ಕಾಯೋಕೆ ಸಭೆಗೆ ಬರ್ತೀರಾ, ಕೆಡಿಪಿ ಸಭೆ ಅಂದ್ರೆ ಕಾಟಾಚಾರಕ್ಕೆ ಮಾಡುತ್ತಾರೆ ಅಂತ ತಿಳಿದುಕೊಂಡಿರಾ’ ಎಂದು ಕಿಡಿಕಾರಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಶಿವಮಾನಪ್ಪ ಅವರು, ಎರಡು ಹಾಸ್ಟೆಲ್‍ಗಳಿವೆ. ಗೋನವಾರದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಸ್ವಂತ ಜಾಗದಲ್ಲಿದ್ದು, 75 ವಿದ್ಯಾರ್ಥಿಗಳಿದ್ದಾರೆ, ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಖಾಸಗಿ ಕಟ್ಟಡದಲ್ಲಿದ್ದು, 218 ವಿದ್ಯಾರ್ಥಿನಿಯರಿದ್ದಾರೆ ಎಂದು ಸಭೆಗೆ ವಿವರಿಸಿದರು.

ಆಗ ಶಾಸಕರು ಹಾಸ್ಟೆಲ್ ಸಾಮರ್ಥ್ಯ 100 ವಿದ್ಯಾರ್ಥಿಗಳಿಗಿದೆ. ಆದರೂ 218 ವಿದ್ಯಾರ್ಥಿನಿಯರನ್ನು ಒಂದೆಡೆ ಸೇರಿಸಿದ್ದೀರಿ ಅಂದ್ರೆ, ಮಕ್ಕಳನ್ನು ಕುರಿಗಳು ಅಂದುಕೊಂಡಿದ್ದೀರಾ. ಬೇರೊಂದು ಕಟ್ಟಡ ಬಾಡಿಗೆ ಪಡೆಯಬಹುದಲ್ಲವೇ ಎಂದು ಹೇಳಿದರು.

ಆಗ ಇಲಾಖೆಯ ಜಿಲ್ಲಾ ಅಧಿಕಾರಿಗೆ ಪತ್ರ ಬರೆಯಲಾಗಿದೆ. ಅನುಮತಿ ಕೊಟ್ಟಿಲ್ಲ ಎಂದು ಶಿವಮಾನಪ್ಪ ತಿಳಿಸಿದರು.

ತಕ್ಷಣವೇ ಶಾಸಕರು ಆ ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಅಧಿಕಾರಿ ಚಿದಾನಂದ ಅವರಿಗೆ ಮೊಬೈಲ್ ಕರೆ ಮಾಡಿ ತಾಲ್ಲೂಕು ಅಧಿಕಾರಿ ಪತ್ರ ಬರೆದಿದ್ದಾರಾ ಎಂದು ಕೇಳಿದಾಗ ನನಗೆ ಪತ್ರ ಬರೆದಿಲ್ಲವೆಂದು ಪ್ರತಿಕ್ರಿಯೆ ಬಂತು.

‘ಪತ್ರ ಬರಿದೀನಿ ಅಂತ ಸುಳ್ಳು ಹೇಳುತ್ತೀಯಾ, ನಿನ್ನ ಸಸ್ಪೆಂಡ್ ಮಾಡ್ತೀನಿ’ ಎಂದು ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್ ಅವರು, ಸಿಂಧನೂರು ತಾಲ್ಲೂಕಿನ ದಢೇಸುಗೂರು, ಪಗಡದಿನ್ನಿ, ತಿಡಿಗೋಳ, ಚೆನ್ನಳ್ಳಿ, ರಾಗಲಪರ್ವಿ, ಗುಂಡಾ, ವಳಬಳ್ಳಾರಿ ಪ್ರೌಢಶಾಲೆಗಳನ್ನು ಜ್ಯೂನಿಯರ್ ಕಾಲೇಜು ಮಾಡುವಂತೆ ಸರ್ಕಾರ ಪ್ರಸ್ತಾಪಿಸಿದೆ. ಈಗಾಗಲೇ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಲಾಗಿದ್ದು, 808 ಮಕ್ಕಳು ಲಸಿಕೆಯಿಂದ ವಂಚಿತರಾಗಿದ್ದಾರೆ. ಆರೋಗ್ಯ ಇಲಾಖೆ ಜೊತೆಗೆ ಮನೆ-ಮನೆಗೆ ತೆರಳಿ ಆ ಮಕ್ಕಳಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 21 ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಆ ತರಗತಿ ಮಕ್ಕಳನ್ನು ಹೋಮ್ ಐಸೋಲೇಶನ್ ಮಾಡಿ 10 ದಿನ ಶಾಲೆಗೆ ಬರದಂತೆ ಸೂಚಿಸಲಾಗಿದೆ. ಹಾಸ್ಟೆಲ್‍ಗಳಲ್ಲಿ ಪ್ರತ್ಯೇಕವಾಗಿ ಐಸೋಲೇಶನ್ ವಾರ್ಡ್ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಆಗ ಶಾಸಕರು, ಶಾಲಾ-ಕಾಲೇಜು ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿ ಸಭೆ ನಡೆಸಬೇಕು. ಅಲ್ಲದೆ ಅವಶ್ಯವಿರುವ ಪ್ರೌಢಶಾಲೆಯ ಕಟ್ಟಡಗಳು ಮತ್ತು ಖಾಲಿಯಿರುವ ಮುಖ್ಯಶಿಕ್ಷಕರ ಮಾಹಿತಿ ನೀಡಿದರೆ ಸಂಬಂಧಿಸಿದ ಸಚಿವರು ಮತ್ತು ಕಾರ್ಯದರ್ಶಿಯೊಂದಿಗೆ ಚರ್ಚಿಸುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT