ಮಂಗಳವಾರ, ಫೆಬ್ರವರಿ 18, 2020
24 °C
ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ

ರಾಯಚೂರು| ಅನ್ನ ನೀಡುವ ಭಾಷೆ ಕನ್ನಡ ಆಗಲಿ: ಭಾರ್ಗವಿ ದೇಸಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಅನ್ನ ನೀಡುವ ಭಾಷೆ ಕನ್ನಡ ಆಗಬೇಕು ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ವಿದ್ಯಾರ್ಥಿನಿ ಭಾರ್ಗವಿ ದೇಸಾಯಿ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರದ ಹುದ್ದೆಗಳನ್ನು ನೀಡಬೇಕು. ಎಲ್ಲೆಡೆ ಕನ್ನಡ ಭಾಷೆಯನ್ನೇ ಮಾತನಾಡಬೇಕು. ಇಂತಹ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವುದರ ಮೂಲಕ ಕನ್ನಡದ ಕಂಪು ಎಲ್ಲೆಡೆ ಹರಡಬೇಕು ಎಂದರು.

ಕನ್ನಡ ಸಾಹಿತ್ಯ ಗಡಿಗಳನ್ನು ಮೀರಿ ಬೆಳೆದಿದೆ ಎಂದು ಹೇಳಿದ ಕುವೆಂಪು ಅವರ ಮಾತು ಸತ್ಯವಾಗಿದೆ. ಹಳೆಗನ್ನಡ, ನುಡುಗನ್ನಡ, ಹೊಸಗನ್ನಡದ ಕವಿಗಳು, 12ನೇ ಶತಮಾನದ ವಚನಕಾರರು, ಶರಣರು ಮತ್ತು ಸಂತರು, ಜಾನಪದ ಕಲಾವಿದರು ಕನ್ನಡ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಕಲ್ಯಾಣ ಕರ್ನಾಟಕ ಸಾಹಿತಿಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ಕುರಿತು ಕವಿತಾಳದ ವಿದ್ಯಾರ್ಥಿನಿ ಜ್ಯೋತಿ ಮಾತನಾಡಿ, ’ಮಕ್ಕಳಿಗೆ ಪರಿಸರದ ಕುರಿತು ಶಿಶು ಪ್ರಾಸಗಳು ಇಷ್ಟವಾಗುತ್ತವೆ. ಈ ಭಾಗದ ಹೆಸರಾಂತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಸೇರಿದಂತೆ ಇನ್ನಿತರರು ಪರಿಸರದ ಜಾಗೃತಿ ಮೂಡಿಸಲು ಮಕ್ಕಳಿಗಾಗಿ ಕಥೆ, ಕವನಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತ್ಯ ವಿಷಯದ ಬಗ್ಗೆ ವಿದ್ಯಾರ್ಥಿನಿ ಬಸಮ್ಮ ವಿಷಯ ಮಂಡಿಸಿ, ’ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಮನಸ್ಸನ್ನು ಅರಳಿಸಬೇಕು. ಶಾಂತರಸರು, ರಾಮಣ್ಣ ಹವಳೆ, ಅಯ್ಯಪ್ಪಯ್ಯ ಹುಡಾ ಸೇರಿದಂತೆ ಇನ್ನಿತರರು ಮಕ್ಕಳ ಸಾಹಿತ್ಯ ರಚಿಸಿ, ಮಾದರಿಯಾಗಿದ್ದಾರೆ’ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ’ವಿದ್ಯಾರ್ಥಿಗಳು ಟಿವಿ, ಮೊಬೈಲ್ ಬಳಕೆಯಿಂದ ದೂರ ಉಳಿದು ಗ್ರಂಥಾಲಯದಲ್ಲಿ ಓದುಗಾರಿಕೆ ಬೆಳೆಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು. ಸಾಹಿತ್ಯ ಪತ್ರಿಕೆಗಳು ಬಹಳ ಪ್ರಬಲ ಮಾಧ್ಯಮವಾಗಿದ್ದು, ಸಮಾಜ ತಿದ್ದುವ ಕಾರ್ಯ ಮಾಡುತ್ತಿದೆ. ಭೂಮಾತೆಗೆ ಗೌರವ, ಪರಿಸರ ಕಾಳಜಿ, ಇಂದಿನ ಮಕ್ಕಳಿಗೆ ಬೆಳೆಸಬೇಕು. ಅದಕ್ಕೆ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಲು ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು’ ಎಂದು ತಿಳಿಸಿದರು.

ಮಕ್ಕಳ ಸಾಹಿತಿ ಡಾ.ಬಸು ಬೇವಿನ ಗಿಡದ ಮಾತನಾಡಿ, ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿದವರು ಕಲ್ಯಾಣ ಕರ್ನಾಟಕದವರು. ನಾಡಿನ ವಿಸ್ಮಯ ಸಂಪತ್ತನ್ನು ಪದ್ಯ–ಗದ್ಯಗಳನ್ನು ರಚಿಸಿಕೊಟ್ಟಂತ ಕೀರ್ತಿ ಮಕ್ಕಳ ಸಾಹಿತಿಗಳಿಗೆ ಸಲ್ಲುತ್ತದೆ ಎಂದರು.

ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ ಧ್ವಜಾರೋಹಣ ನೆರವೇರಿಸಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಂಕರದೇವರು ಹಿರೇಮಠ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು, ರುಸ್ಮಾ ಅದ್ಯಕ್ಷ ರಾಜ ಶ್ರೀನಿವಾಸ,  ಸಮ್ಮೇಳನದ ಸರ್ವಾಧ್ಯಕ್ಷ ಅಯ್ಯಪ್ಪಯ್ಯ ಹುಡಾ, ಸಮ್ಮೇಳನದ ಸಹ ಅಧ್ಯಕ್ಷರಾದ ಬಸಲಿಂಗಪ್ಪ, ಸವಾರಪ್ಪ, ಸೈಯದ್ ಸಿರಾಜ್, ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ, ಮಂಡಲಗಿರಿ ಪ್ರಸನ್ನ, ಗಾಯಕಿ ಮೋನಮ್ಮ, ವೈಷ್ಣವಿ ಸೇರಿದಂತೆ ಇನ್ನಿತರರು ಇದ್ದರು. 

ಮೆರವಣಿಗೆ: ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಅಂಬೇಡ್ಕರ್ ವೃತ್ತದಿಂದ ರಂಗಮಂದಿರದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾಡಲಾಯಿತು.    

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು