ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಉಲ್ಲಂಘಿಸಿದರೆ ಕಾನೂನು ಕ್ರಮ

ಜಿಲ್ಲಾ ಪೊಲೀಸರೊಂದಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಸಭೆ
Last Updated 31 ಮಾರ್ಚ್ 2020, 16:10 IST
ಅಕ್ಷರ ಗಾತ್ರ

ರಾಯಚೂರು: ಮಹಾಮಾರಿ ಕೊರೊನಾ ಸೋಂಕು ಹರಡದಂತೆ ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಪೊಲೀಸರಿಗೆ ಸೂಚಿಸಿದರು.

ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಕೊರೊನಾ ಸೋಂಕು ಹರಡದಂತೆ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಂಗಳವಾರ ಆಯೋಜಿಸಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಕಠಿಣ ರೀತಿಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಜನರು ಮನೆಯಿಂದ ಹೊರ ಬರದಂತೆ ತಡೆಯಬೇಕು. ಈಗಾಗಲೇ ರಾಜ್ಯ ಸರ್ಕಾರ ಲಾಕ್‌ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಿದೆ. ಈ ದಿಸೆಯಲ್ಲಿ ಅತಿ ಅಗತ್ಯವನ್ನು ಹೊರತು ಪಡಿಸಿ ಸಾರ್ವಜನಿಕರು ರಸ್ತೆ ಮೇಲೆ ಒಡಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಿದರು.

ಅಗತ್ಯ ವಸ್ತುಗಳಾದ ಕಿರಾಣಿ ಅಂಗಡಿ, ಔಷಧಿ, ತರಕಾರಿ, ಕ್ಲಿನಿಕ್, ಹಾಲು, ಟೆಲಿಕಾಂ ಅಂಗಡಿಗಳಲ್ಲಿ ಜನದಟ್ಟಣೆಯಾಗದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾಲೀಕರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣ ದುರಸ್ತಿಗೊಳಿಸುವ ಅಂಗಡಿಗಳಿಗೆ ವಿನಾಯ್ತಿ ನೀಡಬೇಕು. ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳಲ್ಲಿ ಈಗಾಗಲೇ ಭತ್ತ ಕಟಾವಿನಲ್ಲಿ ರೈತರು ನಿರತರಾಗಿದ್ದು, ಆದ್ದರಿಂದ ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಅನಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ಕೆಲ ಯುವಕರು ದ್ವಿಚಕ್ರ ವಾಹನಗಳ ಮೇಲೆ ಓಡಾಡುತ್ತಿದ್ದಾರೆ. ಅಂಥವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಬೈಕ್‌ಗಳನ್ನು ವಶ ಪಡಿಸಿಕೊಳ್ಳಬೇಕು. ಹದಿಹರಿಯದ ಯುವಕರು ಅನವಶ್ಯಕವಾಗಿ ರಸ್ತೆಗಳ ಮೇಲೆ ತಿರುಗಾಡುತ್ತಿದ್ದಾರೆ. ಅವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ಅದೃಷ್ಟವಶಾತ್ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸೋಂಕು ಪತ್ತೆಯಾಗಿಲ್ಲ. ಆದರೇ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಜನರು ಕಿವಿಗೋಡಬಾರದು. ಅಂಥವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಿಂದ ಕೆಲಸಕ್ಕಾಗಿ ಗುಳೆ ಹೋದ ಕಾರ್ಮಿಕರು ಈಗಾಗಲೇ ಜಿಲ್ಲೆಗೆ ಆಗಮಿಸಿರುವುದರಿಂದ ಅವರ ಚಲನವಲನಗಳ ಮೇಲೆ ನಿಗಾವಹಿಸಿ ಅವರು ಮನೆಯಿಂದ ಹೊರಬರದಂತೆ ನೋಡಿಕೊಳ್ಳಬೇಕು ಮತ್ತು 14 ದಿನಗಳ ಕಾಲ ಹೋಂ ಕ್ವಾರೇಂಟನಲ್ಲಿ ಇರಬೇಕು. ಈಗಾಗಲೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆರಂಭಗೊಂಡಿದೆ. ಸರಕು ಸಾಗಾಣಿಕೆ ಮಾಡುವ ವಾಹನಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆಯದಂತೆ ರಾಜ್ಯ ಸರ್ಕಾರವು ಆದೇಶಿಸಿರುವುದರಿಂದ ಪೊಲೀಸರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಪೊಲೀಸ್ ವಾಹನಗಳಿಗೆ ಜಿಪಿಎಸ್ ಅಳವಡಿಸುವಂತೆ ಸೂಚಿಸಿದರು.

ಪೊಲೀಸರಿಗೆ ನಿರ್ದೇಶನ ನೀಡಿದರು. ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿಗೂ ಸಹ ಸಂಸ್ಥೆಯವರು ಪಾಸ್ ನೀಡಿರುತ್ತಾರೆ. ಅಂತವರನ್ನು ಸಹ ಅವರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕೆಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಮಾತನಾಡಿ, ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಪೊಲೀಸರು ಪ್ರತಿದಿನ ಎರಡು ಪಾಳೆಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಬೆಳಿಗ್ಗೆ 7 ರಿಂದ 12 ಗಂಟೆವರೆಗೆ, ಸಂಜೆ 4 ರಿಂದ 8 ಗಂಟೆವರೆಗೆ ಕಡ್ಡಾಯವಾಗಿ ತಮ್ಮ ತಮ್ಮ ವೃತ್ತಗಳಲ್ಲಿ ಹಾಜರಾಗಿ ಕಾರ್ಯನಿರ್ವಹಿಸಬೇಕು. ಜನರು ಹೊರಬಾರದಂತೆ ಮನವೊಲಿಸುವ ಪ್ರಯತ್ನ ಪೊಲೀಸರು ಮಾಡಬೇಕೆಂದು ತಿಳಿಸಿದರು.

ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಡಿವೈಎಸ್‌ಪಿ ಶಿವನಗೌಡ ಪಾಟೀಲ್, ತಹಶೀಲ್ದಾರ್ ಡಾ.ಹಂಪಣ್ಣ, ಪೌರಾಯುಕ್ತ ದೇವಾನಂದ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT