ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಖನನ ನಿರೀಕ್ಷೆಯಲ್ಲಿ ಹಾಳುಮಣ್ಣಿನ ದಿಬ್ಬ

ಅನಾಥ ಸ್ಥಿತಿಯಲ್ಲಿರುವ ಶಿಲಾಶಾಸನ, ಕುರುಹುಗಳ ರಕ್ಷಣೆಗೆ ಒತ್ತಾಯ
ಬಿ.ಎ.ನಂದಿಕೋಲಮಠ
Published 27 ಮಾರ್ಚ್ 2024, 5:31 IST
Last Updated 27 ಮಾರ್ಚ್ 2024, 5:31 IST
ಅಕ್ಷರ ಗಾತ್ರ

ಲಿಂಗಸುಗೂರು: ಕಲ್ಯಾಣ ಚಾಲುಕ್ಯರು, ದೇವಗಿರಿಯ ಯಾದವರ(ಸೇವಣ) ಸಾಮಂತ ಕದಂಬ ಅರಸರು ಆಳ್ವಿಕೆಗೆ ಒಳಪಟ್ಟಿರುವ ಐತಿಹ್ಯ ಹೊಂದಿದ ಕರಡಕಲ್ಲ ಹಾಳುಮಣ್ಣಿನ ದಿಬ್ಬದ ದೇಗುಲವೊಂದು ಸಂಶೋಧಕರು, ಇತಿಹಾಸಕಾರ ಅಧ್ಯಯನಕ್ಕೆ ನಿಲುಕದೇ ಉತ್ಖನನದ ನಿರೀಕ್ಷೆಯಲ್ಲಿದೆ.

ಕರಡಕಲ್ಲ ಎಂದಾಕ್ಷಣ ಬಿಲ್ಲಮರಾಜನ ಆಳ್ವಿಕೆ, ಡೊಂಬರ ಚನ್ನಮ್ಮ, ಕೆರೆಗೆ ಹಾರವಾದ ಬಿಜ್ಜಮ್ಮ, ಅತ್ತೆಸೊಸೆ ಗುಡ್ಡ, ಕುಣಿಸೋಮೇಶ್ವರ ದೇವಸ್ಥಾನ ಸೇರಿದಂತೆ ಗ್ರಾಮದ ಬೀದಿ ಬೀದಿಗಳಲ್ಲಿರುವ ಐತಿಹಾಸಿಕ ಕುರುಹುಗಳು ಕಣ್ಮುಂದೆ ಬಂದು ಹೋಗುತ್ತವೆ.

ಬಿಲ್ಲಮರಾಜನ ಬೆಟ್ಟದ(ಗುಡ್ಡ) ಅರಮನೆ, ಸೈನಿಕರು ವಾಸಿಸುತ್ತಿದ್ದ ಮನೆಗಳ ಕುರುಹುಗಳ ಮಧ್ಯೆ ನವ ಶಿಲಾಯುಗದಲ್ಲಿ ಬಳಸುತ್ತಿದ್ದ ಕಲ್ಲಿನ ವೈವಿಧ್ಯಮಯ ಆಯುಧಗಳು, ಬಂಡೆ ಮೇಲೆ ಬಿಡಿಸಿದ ಸಂಜ್ಞೆಗಳ ರೇಖಾ ಚಿತ್ರಗಳು ಕಾಣಸಿಗುತ್ತವೆ. ಅಸ್ತಿಪಂಜರ ಮತ್ತು ಅಂತ್ಯಕ್ರಿಯೆಗೆ ಬಳಸುತ್ತಿದ್ದ ಮಣ್ಣಿನ ಕುರುಹುಗಳು ನವ ಶಿಲಾಯುಗದತ್ತ ಗಮನ ಸೆಳೆಯುತ್ತವೆ.

ಬೆಟ್ಟದಿಂದ ಕೆಳಗಡೆ ಬಂದರೆ ಅನೇಕ ಕುರುಹುಗಳ ಮೇಲೆಯೇ ನಡೆದು ಕುಣಿಸೋಮೇಶ್ವರ ದೇವಸ್ಥಾನಕ್ಕೆ ಬರುತ್ತೇವೆ. ಅಲ್ಲಿಂದ ಗ್ರಾಮದ ಅನೇಕ ದೇವಸ್ಥಾನ, ಮನೆಗಳ ಬುನಾದಿ, ಪಾಳು ಸ್ಥಳಗಳಲ್ಲಿ ಬಿದ್ದಿರುವ ನೂರಾರು ಶಾಸನಗಳು ಇತಿಹಾಸ ಸಾರುತ್ತಿವೆ.

‘ಮಣ್ಣಿನ ದಿಬ್ಬದಲ್ಲಿ ಮುಚ್ಚಿಕೊಂಡಿರುವುದು ಕಮ್ಮಟೇಶ್ವರ ದೇವಸ್ಥಾನ’ ಎಂದು ಶಾಸನವೊಂದರಲ್ಲಿ ಗುರುತಿಸಲಾಗಿದೆ. ದೇವಸ್ಥಾನದ ಕಂಬಗಳು, ಚಿತ್ರಕಲೆಯುಳ್ಳ ಶಿಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸುತ್ತಲಿನ ಜನರು ಅವುಗಳ ಮೇಲೆ ಕುಳ್ಳು (ಸಗಣಿ) ಬಡೆಯುತ್ತಿದ್ದಾರೆ. ಜನ ಲಕ್ಷ್ಮಿದೇವಿ ವಾಸಸ್ಥಾನ ಎಂದು ಬನ್ನಿಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಇವೆಲ್ಲದರ ಮೇಲೆ ಬೆಳಕು ಚೆಲ್ಲಿ ಸತ್ಯ ಹೊರಗೆಡವಲು ಉತ್ಖನನ ಅಗತ್ಯವಾಗಿದೆ.

‘ಕರಡಕಲ್ಲ ಸುತ್ತಮುತ್ತಲ ಬೆಟ್ಟ, ರುದ್ರಭೂಮಿ, ಜಮೀನು, ಕೆರೆ ಅಂಗಳ, ಬೀದಿ ಬೀದಿಗಳಲ್ಲಿ ಒಂದೊಂದು ಕತೆ ಹೇಳುವ ವಿಚಿತ್ರ ಮಾದರಿಯ ಶಿಲ್ಪಗಳು, ಶಾಸನಗಳು ಕಾಣಸಿಗುತ್ತವೆ. ಇವುಗಳ ಕುರಿತು ಪ್ರಾಚ್ಯವಸ್ತು ಇಲಾಖೆ ಆಸಕ್ತಿ ವಹಿಸಿ ಸಂರಕ್ಷಣೆಗೆ ಮುಂದಾಗಬೇಕಿದೆ’ ಎಂದು ಸಂಶೋಧಕ ಮಹಾದೇವ ನಾಗರಹಾಳ ಒತ್ತಾಯಿಸುತ್ತಾರೆ.

‘ರಾಯಚೂರು ಮತ್ತು ಹಂಪಿ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕರಡಕಲ್ಲ ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಹೀಗಾಗಿ ಯಾವುದೇ ಅನ್ವೇಷಣೆ, ಉತ್ಖನನ ನಡೆಸಲು ಆಗುವುದಿಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳುವ ಅಗತ್ಯವಿದೆ ಎನ್ನುತ್ತಿದ್ದಾರೆ’ ಎಂಬುದು ಸ್ಥಳೀಯರ ಆರೋಪ.

ಲಿಂಗಸುಗೂರು ತಾಲ್ಲೂಕು ಕರಡಕಲ್ಲ ಗ್ರಾಮದ ಹಾಳುಮಣ್ಣಿನ ದಿಬ್ಬದ ಮೂಲೆಯೊಂದರಲ್ಲಿ ಪ್ರಾಚೀನ ದೇವಸ್ಥಾನದ ಕಂಬಗಳು ಶಿಲ್ಪಕಲೆ ಪ್ರದರ್ಶಿಸುವ ಕಲ್ಲುಗಳು ಅನಾಥವಾಗಿ ಬಿದ್ದಿರುವುದು
ಲಿಂಗಸುಗೂರು ತಾಲ್ಲೂಕು ಕರಡಕಲ್ಲ ಗ್ರಾಮದ ಹಾಳುಮಣ್ಣಿನ ದಿಬ್ಬದ ಮೂಲೆಯೊಂದರಲ್ಲಿ ಪ್ರಾಚೀನ ದೇವಸ್ಥಾನದ ಕಂಬಗಳು ಶಿಲ್ಪಕಲೆ ಪ್ರದರ್ಶಿಸುವ ಕಲ್ಲುಗಳು ಅನಾಥವಾಗಿ ಬಿದ್ದಿರುವುದು

ಪಿಕಳಿಹಾಳ ಜಲದುರ್ಗ ಕರಡಕಲ್ಲ ಸೇರಿದಂತೆ ನವಶಿಲಾಯುಗ ಕುರುಹು ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ನಿಧಿಗಳ್ಳರ ಹಾವಳಿಗೆ ಕುರುಹುಗಳು ನಶಿಸುತ್ತಿವೆ

-ಸೋಮನಾಥ ನಾಯಕ ಸಮಾಜ ಸೇವಕ ಲಿಂಗಸುಗೂರು

ಕರಡಕಲ್ಲ ಒಂದು ಕಾಲದಲ್ಲಿ ಸಂಪದ್ಭರಿತ ರಾಜಧಾನಿಯಾಗಿತ್ತು. ಕಮ್ಮಟೇಶ್ವರ ದೇವಸ್ಥಾನ ನಾಣ್ಯ ತಯಾರಿಸುವ ಟಂಕಶಾಲೆಯಾಗಿತ್ತು. ದೆಹಲಿ ಸುಲ್ತಾನರ ದಾಳಿಗೆ ಅನೇಕ ಕುರುಹುಗಳ ಮುಚ್ಚಿಹೋಗಿವೆ

-ರಮೇಶ ಕಟ್ಟಿಮನಿ ಇತಿಹಾಸ ಪ್ರಿಯ ವಿದ್ಯಾರ್ಥಿ ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT