ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಟ್ಟಿಚಿನ್ನದಗಣಿ: ಚಿನ್ನದ ನಾಡಿನ ಆರಾಧ್ಯ ದೈವ ಲಿಂಗಾವಧೂತರು

ಹಟ್ಟಿಚಿನ್ನದಗಣಿ: ಲಿಂಗಾವಧೂತ ಶಿವಯೋಗಿಗಳ ಜಾತ್ರೆ ಇಂದು
Published : 5 ಆಗಸ್ಟ್ 2024, 5:39 IST
Last Updated : 5 ಆಗಸ್ಟ್ 2024, 5:39 IST
ಫಾಲೋ ಮಾಡಿ
Comments

ಹಟ್ಟಿಚಿನ್ನದಗಣಿ: ಇಲ್ಲಿ ಸೋಮವಾರ (ಆಗಸ್ಟ್‌ 5) ನಡೆಯುವ ಲಿಂಗಾವಧೂತ ಶಿವಯೋಗಿಗಳ ಜಾತ್ರೆಗೆ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

1866ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ ಲಿಂಗಾವಧೂತರು, ತದನಂತರ ಹಟ್ಟಿ ಪಟ್ಟಣಕ್ಕೆ ಬಂದು ಗದ್ದೆಪ್ಪ ಉಪ್ಪಾರ, ಅಮರಸಿಂಗ್ ಎಂಬ ಶಿಷ್ಯರ ಹತ್ತಿರ ಇರುತ್ತಾರೆ. ಅನೇಕ ಪವಾಡಗಳನ್ನು ಮಾಡಿ 1930 ರಲ್ಲಿ ಐಕ್ಯರಾದರೆಂದು ಹಿರಿಯರು ಹೇಳುತ್ತಾರೆ.

ವಿಜಯಪುರ ಜಿಲ್ಲೆಯವರಾದ ಲಿಂಗಾವಧೂತರು ಚಿಕ್ಕಂದಿನಿಂದಲೇ ಶಿವನ ದೀಕ್ಷೆ ಪಡೆದು ಊರೂರು ಅಲೆದಾಡುತ್ತಾ ಶಿವನ ಧ್ಯಾನ ಮಾಡಿದರು. ಭಕ್ತರ ಮನೆಯಲ್ಲಿ ನೆಲೆಸುತ್ತಾ ಮುಂಜಾನೆ ಮತ್ತೊಂದು ಊರಿಗೆ ತೆರಳುತ್ತಿದ್ದರು. ಕೊನೆಗಾಲದಲ್ಲಿ ಹಟ್ಟಿ ಪಟ್ಟಣದಲ್ಲಿ ನೆಲೆಸಿ ಗುಡಿಸಲಿನಲ್ಲಿ ವಾಸವಿದ್ದು ಶಿವನ ಆರಾಧನೆ ಮಾಡಿದರು.

ಮುಂಬೈಯಲ್ಲಿ ಲಿಂಗಾವಧೂತರ ಭಕ್ತರು ಸಾವಿರಾರು ಜನರಿದ್ದಾರೆ. ಅವರು ಪ್ರತಿ ವರ್ಷವೂ ಲಿಂಗಾವಧೂತರ ಜಾತ್ರೆಗೆ ಬಂದು ಶಿವಯೋಗಿಗಳ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಗದ್ದುಗೆಗೆ ಕಾಯಿ, ಕರ್ಪೂರ ಸಲ್ಲಿಸಿ ಹೋಗುತ್ತಾರೆ.

ಲಿಂಗಾವಧೂತರು ಹುಬ್ಬಳಿಯ ಸಿದ್ದಾರೂಢರ ಸಮಾಕಾಲಿನವರು ಎಂದು ಹೇಳಬಹುದು. ಇವರು ಸಿದ್ಧಿ ಪುರುಷರು. ಬ್ರಿಟಿಷರು ಇವರ ರಸ ವಿದ್ಯೆಯ ಸೂತ್ರಗಳನ್ನು ಪಡೆಯಲು ಭಕ್ತರ ಮೂಲಕ ಅಪಹರಿಸಿ ಅನೇಕ ರೀತಿಯಲ್ಲಿ ಚಿತ್ರಹಿಂಸೆ ನೀಡಿದ್ದರು. ಬೇಸತ್ತು ನಂತರ ಕ್ಷಮೆ ಕೋರಿ ಅವರನ್ನು ಹಟ್ಟಿ ಪಟ್ಟಣಕ್ಕೆ ಬಂದು ಬಿಟ್ಟು ಹೋಗಿದ್ದಾರೆ ಎಂದು ಹಿರಿಯರು ಹೇಳುತ್ತಾರೆ.

₹11 ಲಕ್ಷ ವೆಚ್ಚದಲ್ಲಿ ಹೊಸ ದೇವಸ್ಥಾನದ ಮಂದಿರವನ್ನು 2000ರಲ್ಲಿ ಪಂಚಪೀಠ ಜಗದ್ಗುರುಗಳನ್ನು ಕರೆಸಿ ಅವರ ಸಮ್ಮುಖದಲ್ಲಿ ನೂತನ ಲಿಂಗಾವಧೂತರ ದೇವಸ್ಥಾನ ಉದ್ಘಾಟನೆಯಾಯಿತು. ಹಟ್ಟಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ರೈತರು ಮಳೆಗಾಗಿ ಸಪ್ತಭಜನೆ ಮಾಡಿದಾಗ ಮಳೆ ಬಂದಿರುವುದು ಪವಾಡ ಹಾಗೂ ಹಟ್ಟಿ ಕಂಪನಿಯ ನೌಕರರು ಗಣಿಯೊಳಗೆ ಇಳಿಯಬೇಕಾದರೆ ಮೊದಲು ‘ಲಿಂಗಯ್ಯ ತಾತಾ ನೀನೇ ಕಾಪಾಡಪ್ಪ’ ಎಂದು ಸ್ಮರಿಸಿ, ಕೈಮುಗಿದು ಕೆಲಸಕ್ಕೆ ತೆರಳುತ್ತಾರೆ. ಇದರಿಂದ ಕಂಪನಿಯಲ್ಲಿ ಯಾವುದೇ ಅಪಘಾತಗಳು ಜರುಗಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ.

ದೇವಸ್ಥಾನವು ಗಟ್ಟಿ ಬಂಗಾರದ ಮೇಲೆ ಇದೆ ಎಂಬುವುದು ಹಿರಿಯರ ಅನಿಸಿಕೆಯಾಗಿದೆ. 1930ರಲ್ಲಿ ಲಿಂಗೈಕ್ಯರಾದ ಲಿಂಗಾವಧೂತರನ್ನು ಅವರು ವಾಸಿಸುತ್ತಿದ್ದ ಗುಡಿಸಲಿನ ಜಾಗದಲ್ಲಿ ಸಮಾಧಿ ಮಾಡಿ ಗುಡಿ ಕಟ್ಟಲಾಗಿತ್ತು. ಕಾಲಕ್ರಮೇಣ ಗುಡಿ ಅಭಿವೃದ್ಧಿ ಹೊಂದಿ ಇದೀಗ ಬೃಹತ್‌ ದೇವಸ್ಥಾನ ನಿರ್ಮಿಸಲಾಗಿದೆ.

ಶಿವನ ಆರಾಧಕರಾಗಿದ್ದರಿಂದ ಇವರ ನೆನಪಿಗಾಗಿ ಪ್ರತಿ ಶಿವರಾತ್ರಿಯಲ್ಲಿ ಶಿವ ಭಜನೆ ಹಮ್ಮಿಕೊಳ್ಳಲಾಗುತ್ತದೆ ಹಾಗೂ ನಗರಪಂಚಮಿಯಂದು ಜಾತ್ರಾ ಮಹೋತ್ಸವ ಅಮಾವಾಸ್ಯೆ ನಂತರ ದಿನದಂದು ನಡೆಸುತ್ತಾ ಬರಲಾಗುತ್ತಿದೆ.

ಲಿಂಗಾವಧೂತರ ಜಾತ್ರೆಯಲ್ಲಿ ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳುವುದು ನೋಡಿದರೆ ಅವರೊಬ್ಬ ಜಾತ್ಯತೀತ ಶರಣರಾಗಿದ್ದಾರೆ. ಬೇಡಿ ಬಂದ ಭಕ್ತರಿಗೆ ವರ ನೀಡುವ ದೈವ ಸ್ವರೂಪಿಯಾಗಿದ್ದಾರೆ -ಮಾಸ್ಟರ್ ಗುಂಡಪ್ಪಗೌಡ ಗುರಿಕಾರ ಕಾರ್ಮಿಕ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT