ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಲೋಕಸಭೆ: ಮಹಿಳಾ ಮತದಾರರ ಓಲೈಕೆಗೆ ಭಾರಿ ಪೈಪೋಟಿ

Published 2 ಮೇ 2024, 4:41 IST
Last Updated 2 ಮೇ 2024, 4:41 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಪರಿಶಿಷ್ಟ ಪಂಗಡ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಗಿಂತಲೂ ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಮಹಿಳಾ ಮತದಾರರೇ ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮಹಿಳಾ ಮತದಾರರ ಓಲೈಕೆಗೆ ಭಾರಿ ಪೈಪೋಟಿ ನಡೆಸಿವೆ.

ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿರುವ ಕಾರಣ ಕೈ ಮತ್ತು ಕಮಲ ಪಡೆ ಪುರುಷರ ಜತೆ ಮಹಿಳಾ ಮತದಾರರರನ್ನೂ ಹೆಚ್ಚಿನ ಮಟ್ಟದಲ್ಲಿ ಸೆಳೆಯಲು ಪಕ್ಷದ ಆಯಾ ಮಹಿಳಾ ಘಟಕಗಳ ಮೂಲಕ ಪ್ರಯತ್ನ ನಡೆಸಿವೆ. ರಾಜಕೀಯ ಪಕ್ಷಗಳ ಮಹಿಳಾ ಘಟಕಗಳು ಈ ದಿಸೆಯಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿವೆ.

7 ವಿಧಾನಸಭಾ ಕ್ಷೇತ್ರದಲ್ಲೂ ಮಹಿಳೆಯರೇ ಅಧಿಕ: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 1,14,829 ಪುರುಷರು, 1,19,259 ಮಹಿಳೆಯರು, ರಾಯಚೂರು ನಗರ ಕ್ಷೇತ್ರದಲ್ಲಿ 1,19,240 ಪುರುಷರು, 1,23,674 ಮಹಿಳೆಯರು, ಮಾನ್ವಿಯಲ್ಲಿ 1,17,414 ಪುರುಷರು, 1,23,674 ಮಹಿಳೆಯರು, ದೇವದುರ್ಗದಲ್ಲಿ 1,17,414 ಪುರುಷರು, 1,19,627 ಮಹಿಳೆಯರು, ಲಿಂಗಸುಗೂರಲ್ಲಿ 1,29,844 ಪುರುಷರು, 1,32,615 ಮಹಿಳೆಯರು, ಸುರಪುರದಲ್ಲಿ 1,41,618 ಪುರುಷರು, 1,39,729 ಮಹಿಳೆಯರು, ಶಹಾಪುರದಲ್ಲಿ 1,22,523 ಪುರುಷರು, 1,22,939 ಮಹಿಳೆಯರು, ಯಾದಗಿರಿಯಲ್ಲಿ 1,22,369 ಪುರುಷರು, 1,23,864 ಮಹಿಳಾ ಮತದಾರರು ಸೇರಿ ಒಟ್ಟು 10,05,246 ಮಹಿಳಾ ಮತದಾರರು ಇದ್ದಾರೆ. ಸುರಪುರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

2019ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 18,93,576 ಮತದಾರರು ಇದ್ದರು. 9,39,752 ಪುರುಷ ಹಾಗೂ 9,53,457 ಮಹಿಳಾ ಮತದಾರರಿದ್ದರು. ಅದರಲ್ಲಿ 5,71,152 ಪುರುಷರು ಹಾಗೂ 5,45,265 ಮಹಿಳೆಯರು ಮಾತ್ರ ಹಕ್ಕು ಚಲಾಯಿಸಿದ್ದರು. ಉಳಿದವರು ಮತದಾನದಿಂದ ದೂರ ಉಳಿದಿದ್ದರು.


ಮತದಾರರ ಸಂಖ್ಯೆಯಲ್ಲಿ ಹೆಚ್ಚಳ: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ 13,705 ಮಹಿಳಾ ಮತದಾರರು ಹೆಚ್ಚಾಗಿದ್ದರು. ಈ ಬಾರಿ ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ 19,571 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಪುರುಷ ಮತದಾರರು 9,85,675 ಇದ್ದರೆ, 10,05,246 ಮಹಿಳಾ ಮತದಾರರಿದ್ದಾರೆ.

ಜಿಲ್ಲೆಯಲ್ಲಿ 1853 ಮತಗಟ್ಟೆಗಳಿವೆ. ಮಹಿಳಾ ಮತದಾರರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಐದು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಿಂಕ್‌ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಪಾಂಡ್ವೆ ತಿಳಿಸಿದ್ದಾರೆ.

ರಾಯಚೂರು ನಗರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ರಾಯಚೂರು ನಗರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ರಾಯಚೂರು ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು ಮತದಾನ ಮಾಡುವ ಪ್ರತಿಜ್ಞೆ ಮಾಡಿದರು
ರಾಯಚೂರು ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು ಮತದಾನ ಮಾಡುವ ಪ್ರತಿಜ್ಞೆ ಮಾಡಿದರು

Highlights - ಸಂಜೆ ಕಾರ್ಯಕ್ರಮಗಳಲ್ಲಿ ಮಹಿಳೆಯರು ಭಾಗಿ ತಂಡಗಳಲ್ಲಿ ಪ್ರಚಾರ ಮಾಡುತ್ತಿರುವ ಕಾರ್ಯಕರ್ತೆಯರು ಪ್ರಚಾರದಲ್ಲಿ ಮಹಿಳೆಯರಿಗೆ ನೀಡಿದ ಕೊಡುಗೆಗಳ ಒತ್ತು

Quote - ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿರುವ ಕಾರಣ ಅವರ ಮತ ಸೆಳೆಯಲು ಕಾರ್ಯಕರ್ತೆಯರ ಗುಂಪು ಕಟ್ಟಿಕೊಂಡು ಬೂತ್‌ ಮಟ್ಟದಲ್ಲಿ ಪ್ರಚಾರ ತೀವ್ರಗೊಳಿಸಿದ್ದೇವೆ ಲಲಿತಾ ಕಡಗೋಲ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ

Quote - ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆಯೇ 10 ಲಕ್ಷ ಇದೆ. ಪ್ರಚಾರ ಸಭೆ ಹಾಗೂ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರ ಮನವೊಲಿಸುವ ಪ್ರಯತ್ನ ನಿರಂತರವಾಗಿ ನಡೆಸಲಾಗುತ್ತಿದೆ ನಾಗವೇಣಿ ಪಾಟೀಲ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ

Quote - ರಾಯಚೂರಲ್ಲಿ ದೊಡ್ಡ ಮಟ್ಟದಲ್ಲಿ ಜೆಡಿಎಸ್‌ನಿಂದ ಪ್ರಚಾರ ಸಭೆ ನಡೆಸಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಪರ ಪ್ರಚಾರ ತೀವ್ರಗೊಳಿಸಲಿದ್ದೇವೆ ಫಾತಿಮಾ ಹುಸೇನ್ ಜೆಡಿಎಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ

Cut-off box - ಟಿಕೆಟ್‌ಗೆ ಬೇಡ: ಮತಕ್ಕೆ ಬೇಕು ಪ್ರಸ್ತುತ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ನಿರ್ಣಾಯಕ ಸಂಖ್ಯೆಯಲ್ಲಿದ್ದರೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸಿವೆ. ಮಹಿಳೆಯರಿಗೇಕೆ ರಾಜಕಾರಣ? ಕುಟುಂಬ ಅಡುಗೆ ಮನೆ ನೋಡಿಕೊಂಡರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ರಾಜಕೀಯ ಪಕ್ಷಗಳಿವೆ. ಹೀಗಾಗಿ ಮಹಿಳೆಯರಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕ್ಷೇತ್ರ ಬಿಟ್ಟುಕೊಟ್ಟಿಲ್ಲ. 2019ರ ಚುನಾವಣೆಯಲ್ಲಿಯೂ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿತ್ತು. ಈ ಬಾರಿಯೂ ಮಹಿಳಾ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಇತಿಹಾಸದಲ್ಲಿ ಕೆಲ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿ ಗೆಲುವು ಸಾಧಿಸಿರುವ ದಾಖಲೆಗಳಿವೆ. 1952 ರಿಂದ 2019ರವರೆಗಿನ ರಾಯಚೂರು ಲೋಕಸಭಾ ಕ್ಷೇತ್ರದ ಇತಿಹಾಸ ಗಮನಿಸಿದರೆ 1998 ರಲ್ಲಿ ಸಿಪಿಐಎಂಎಲ್‌ ಪಕ್ಷದಿಂದ ಲಕ್ಷ್ಮಿದೇವಿ ವಿ.ಎಚ್‌.ಮಾಸ್ತರ್‌ ಅವರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಸಿಪಿಐ ಬಿಟ್ಟರೆ ಉಳಿದ ರಾಷ್ಟ್ರೀಯ ಪಕ್ಷಗಳು ಈವರೆಗೂ ಮಹಿಳೆಯರಿಗೆ ಮಣೆ ಹಾಕಿಲ್ಲ. ಈ ಬಾರಿ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳದ ರೈತ ಮಹಿಳೆ ಯಲ್ಲಮ್ಮ‌ ಬಸವರಾಜ ದಳಪತಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸುವ ಧೈರ್ಯ ತೋರಿದ್ದಾರೆ. ‘ಜಿಲ್ಲೆಯಲ್ಲಿ ಬಡವರ ಹಾಗೂ ಜನ ಸಾಮಾನ್ಯರ ಸ್ಥಿತಿ ಗಂಭೀರವಾಗಿದೆ. ಹಣಬಲ ಇದ್ದವರ ಈಗಿನ ಆಡಳಿತ ವ್ಯವಸ್ಥೆಯನ್ನು ನೋಡಿ ಬೇಸರಗೊಂಡಿರುವೆ. ಬಡವರಿಗೆ ನ್ಯಾಯ ದೊರಕಿಸಿಕೊಡಲು ಮಹಿಳೆಯರಲ್ಲಿ ಧೈರ್ಯ ತುಂಬುವ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿರುವೆ’ ಎಂದು ಯಲ್ಲಮ್ಮ ದಳಪತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT