ಸೋಮವಾರ, ಆಗಸ್ಟ್ 8, 2022
23 °C
ಮಾದಿಗ ಮಹಾಸಭಾದಿಂದ ಕೇಂದ್ರ ಸಚಿವರಿಗೆ ಸನ್ಮಾನ ಸಮಾರಂಭ

ಮಾದಿಗ ಸಮುದಾಯ ಒಗ್ಗೂಡಿ :ಸಚಿವ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇಶದಲ್ಲಿ ಇಂದಿಗೂ ತಳ ಸಮುದಾಯಗಳನ್ನು ಹೀನಾಯವಾಗಿ ನಡೆಸಿಕೊಂಡು ಬರುವಂತಹ ಕೆಟ್ಟ ಪದ್ಧತಿ ಕಂಡು ಬರುತ್ತಿದೆ., ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮಾದಿಗ ಸಮುದಾಯಗಳೆಲ್ಲ ಒಗ್ಗೂಡಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಾದಿಗ ಮಹಾಸಭಾದ ತಾಲ್ಲೂಕು ಘಟಕದಿಂದ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಾದಿಗ ಸಮುದಾಯದಲ್ಲಿ 56 ಉಪ ಪಂಗಡಗಳಿದ್ದು, ರಾಜ್ಯದ ಮಾದಿಗರು ನಾಲ್ಕು ದಿಕ್ಕುಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಪ್ರಸ್ತುತ ಸಮುದಾಯವು ನೋವನ್ನು ಅನುಭವಿಸುತ್ತಿದ್ದು, ಹೀನಾಯ ಸ್ಥಿತಿ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅದೆಷ್ಟೋ ಪ್ರದೇಶಗಳಲ್ಲಿ ಮಾದಿಗ ಸಮುದಾಯದ ಜನರು ಹಂದಿ ಮಲಗುವ ಸ್ಥಳಗಳಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಅದೆಷ್ಟೊ ರಾಜ್ಯಗಳಲ್ಲಿ ಈಗಲೂ ಮಾದಿಗರ ವಿರುದ್ಧ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂದು ಹೇಳಿದರು.

ಮಾದಿಗರಿಗೆ ಪ್ರತ್ಯೇಕ ಶಾಲೆ, ವಸತಿ ನಿಲಯ ಹಾಗೂ ಮರಣ ಹೊಂದಿದ ಮೇಲೆ ಮನೆ ಮುಂದೆ ಹೆಣವನ್ನು ತೆಗೆದುಕೊಂಡು ಹೋಗದಂತೆ ನಿರ್ಬಂಧವಿದೆ. ಇದು ಮಾದಿಗ ಸಮುದಾಯ ಎದುರಿಸುತ್ತಿರುವ ಶೋಚನೀಯ ಸ್ಥಿತಿಯಾಗಿದೆ ಎಂದು ಹೇಳಿದರು.

ಹಿಂದುಳಿದ ತಳ ಸಮುದಾಯದ ಜನರಲ್ಲಿ ಪ್ರಜ್ಞಾವಂತಿಕೆ ಮೂಡದಿದ್ದರೆ ಬದಲಾವಣೆಯಾಗುವುದು ಅಸಾಧ್ಯ. ಮೊದಲು ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು. ಮಾದಿಗ ಸಮಾಜದ ಎಲ್ಲ ಉಪಪಂಗಡಗಳು ಒಗ್ಗಟ್ಟಾಗಿ ಪರಸ್ಪರ ಸಹಕಾರ ಮನೋಭಾವದೊಂದಿಗೆ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ನಾರಾಯಣ ಸ್ವಾಮಿ ಜನರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದಲ್ಲಿ ಸ್ಪಷ್ಟ ಹಾಗೂ ಗಂಭೀರವಾಗಿ ಪ್ರಸ್ತಾಪಿಸುವ ವ್ಯಕ್ತಿಯಾಗಿದ್ದಾರೆ. ಎಲ್ಲ ವರ್ಗಗಳ ಬಗ್ಗೆ ಚಿಂತನೆ ಕಾಳಜಿ ಇರುವ ಸಚಿವರಾಗಿದ್ದು, ಯಾವುದೇ ಸಭೆ ಸಮಾರಂಭಗಳನ್ನು ಸಾಂಕೇತಿವಾಗಿ ನಡೆಸದೇ ಸವಿಸ್ತಾರವಾಗಿ ಚರ್ಚಿಸಿ ಸಮಸ್ಯೆಗಳಿಗೆ ಕಾರಣರಾದ ತಪ್ಪಿತಸ್ಥರನ್ನು ತರಾಟೆಗೆ ತೆಗೆದುಕೊಳ್ಳುವ ನೇರ ನುಡಿಯ ಸಚಿವರು ಎಂದು ಹೇಳಿದರು. 

ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಕಾಳಜಿಯಿಂದ ಜನರಿಗೆ ತಲುಪಿಸುತ್ತಾರೆ. ಮುಂದಿನ ದಿನಗಳಲ್ಲಿ ನ್ಯಾ.ಸದಾಶಿವ ಆಯೋಗ ಹಾಗೂ ನ್ಯಾ.ನಾಗಮೋಹನ ದಾಸ ವರದಿ ಜಾರಿಗೊಳಿಸಲು ಪ್ರಯತ್ನಿಸುತ್ತಾರೆ ಎನ್ನುವ ಭರವಸೆಯೂ ಇದೆ ಎಂದು ತಿಳಿಸಿದರು.

ನಗರ ಶಾಸಕ ಡಾ.ಶಿವರಾಜ್ ಪಾಟೀಲ ಮಾತನಾಡಿದರು. 

ಬಂಡಾಯ ಸಾಹಿತಿ ಬಾಬು ಭಂಡಾರಿಗಲ್, ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಕೋಡ್ಲಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ , ಎಂ.ಆರ್.ಎಚ್.ಎಸ್ ರಾಜ್ಯ ಮುಖಂಡ ಅಂಬಣ್ಣ ಅರೋಲಿಕರ್, ಮಹಾಸಭಾದ ತಾಲ್ಲೂಕು ಅಧ್ಯಕ್ಷ ಪಿ.ಯಲ್ಲಪ್ಪ ಮತ್ತಿತರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು