ಭಾನುವಾರ, ಜುಲೈ 3, 2022
27 °C
ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಕೈ ಸೇರುತ್ತಿಲ್ಲ ಫಲ

ರಾಯಚೂರು: ಯುಗಾದಿ ಬಳಿಕವೇ ಮಾವಿನ ಸವಿರುಚಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಅತಿಹೆಚ್ಚು ಮಾವಿನ ತೋಟಗಳು ರಾಯಚೂರು ತಾಲ್ಲೂಕಿನಲ್ಲಿದ್ದು, ಏಪ್ರಿಲ್‌ ಎರಡನೇ ವಾರದಿಂದ ಮಾರುಕಟ್ಟೆಗೆ ಮಾವಿನಹಣ್ಣು ಲಗ್ಗೆ ಇಡಲಿವೆ.

ಯುಗಾದಿ ಹಬ್ಬದ ಬಳಿಕವೇ ಮಾವು ಸಮರ್ಪಕವಾಗಿ ಸಿಹಿ ತುಂಬಿಕೊಳ್ಳುತ್ತದೆ. ನೈಸರ್ಗಿಕವಾಗಿ ಮಾಗಿರುವ ಹಣ್ಣಿನಲ್ಲಿ ಸುವಾಸನೆ ಮತ್ತು ಸಿಹಿ ಇರುವುದರಿಂದ, ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂಬುದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ವಿವರಣೆ. ಮಾವಿನ ಸುಗ್ಗಿ ಆರಂಭವಾಗುವ ಪೂರ್ವದಲ್ಲೇ ಮಾರುಕಟ್ಟೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಜನರು ಎಚ್ಚರಿಕೆಯಿಂದ ಖರೀದಿಸಬೇಕು. ರಾಸಾಯನಿಕಗಳನ್ನು ಬಳಸಿ ಮಾವು ಕೃತಕವಾಗಿ ಮಾಗಿಸಿ ಕೆಲವು ವ್ಯಾಪಾರಿಗಳು ಮಾರಾಟಕ್ಕೆ ಇಟ್ಟಿರುತ್ತಾರೆ.

ರಾಯಚೂರು ಜಿಲ್ಲೆಯಲ್ಲಿ ಮಾನ್ವಿ, ಸಿಂಧನೂರು ತಾಲ್ಲೂಕುಗಳಲ್ಲಿಯೂ ಬೆರಳೆಣಿಕೆ ಪ್ರಮಾಣದಲ್ಲಿ ರೈತರು ಮಾವಿನ ತೋಟ ಮಾಡಿಕೊಂಡಿದ್ದಾರೆ. ಆದರೆ, ತರಹೇವಾರಿ ಮಾವಿನ ಹಣ್ಣಿನ ತೋಟಗಳು ರಾಯಚೂರು ತಾಲ್ಲೂಕಿನಲ್ಲಿವೆ. ಪ್ರಮುಖವಾಗಿ ಚಂದ್ರಬಂಡಾ, ಯರಗೇರಾ, ದೇವಸುಗೂರು ಹಾಗೂ ರಾಯಚೂರು ಹೋಬಳಿ ಗ್ರಾಮಗಳಲ್ಲಿ ಮಾವಿನ ತೋಟಗಳಿವೆ. ಅದರಲ್ಲೂ ಪ್ರಮುಖವಾಗಿ ಬೆನೆಸನ್‌ ತಳಿ ಮಾವಿನಹಣ್ಣನ್ನು ರೈತರು ಹೆಚ್ಚಾಗಿ ಬೆಳೆದಿದ್ದಾರೆ. ಸಣ್ಣ ಆಕಾರದ ಈ ಹಣ್ಣು ಸಕ್ಕರೆಯಂತೆ ಸಿಹಿಯಾಗಿ, ಸವಿಯಾಗಿರುತ್ತದೆ.

ಕೆಲವು ರೈತರು ಬೇರೆ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ರಫ್ತು ಮಾಡುವ ಗುಣಮಟ್ಟದ ಮತ್ತು ಬೇಡಿಕೆ ಇರುವ ತಳಿಯ ಮಾವು ಬೆಳೆದಿದ್ದಾರೆ. ಕೇಸರ್‌, ನೀಲಂ ಮಾವು ಬೇರೆ ತಳಿಗಿಂತಲೂ ದುಬಾರಿ. ಆದರೂ ಸ್ಥಳೀಯವಾಗಿಯೂ ಸಾಖಷ್ಟು ಜನರು ಖರೀದಿಸುವುದಿದೆ. ಮಾವು ಬೆಳೆಯುವ ರೈತರು ಸಾಮಾನ್ಯವಾಗಿ ಸಗಟಾಗಿ ಮಾರಾಟ ಮಾಡುತ್ತಾರೆ. ಆದರೆ, ಮಾರುಕಟ್ಟೆಯ ಲಾಭ ಪಡೆಯುವ ಕೆಲವು ಜಾಣ ರೈತರು, ಮನೆಮನೆಗೆ ಹಾಗೂ ಬೇರೆ ಊರುಗಳಿಗೆ ತಾವೇ ಪ್ಯಾಕಿಂಗ್‌ ಮಾಡಿ ರವಾನಿಸುತ್ತಾರೆ.

ನಿರೀಕ್ಷಿತ ಫಲವಿಲ್ಲ: ನೈಸರ್ಗಿಕವಾಗಿಯೇ ಮಾವಿನ ಚಿಗುರು ಈ ವರ್ಷ ಕಡಿಮೆ ಇತ್ತು. ಹೀಗಾಗಿ ಗಿಡದಲ್ಲಿ ಮಾವಿನಹಣ್ಣುಗಳು ಕೂಡಾ ಕಡಿಮೆ ಪ್ರಮಾಣದಲ್ಲೇ ಇವೆ. ಒಂದು ವರ್ಷ ಹೆಚ್ಚು ಬೆಳೆದರೆ, ಇನ್ನೊಂದು ವರ್ಷ ಕಡಿಮೆ ಬೆಳೆಯುವುದು ನಿಸರ್ಗದ ನಿಯಮ ಎನ್ನುತ್ತಾರೆ ತೋಟಗಾರಿಕೆ ವಿಜ್ಞಾನಿಗಳು.

ಕಳೆದ ವರ್ಷಕ್ಕಿಂತ ಈ ವರ್ಷ ಶೇ 40 ರಷ್ಟು ಕಡಿಮೆ ಪ್ರಮಾಣದಲ್ಲಿ ಮಾವಿನ ಫಸಲು ಬಂದಿದೆ. ಬೇಡಿಕೆ ಹೆಚ್ಚಿದಂತೆ ಸಹಜವಾಗಿ ಮಾವಿನಹಣ್ಣಿನ ದರವು ಆರಂಭದಲ್ಲೇ ದುಪ್ಪಟ್ಟಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇದೇ ಸ್ಥಿತಿ ಇದೆ. ಹೊರಗಡೆಯಿಂದ ಬರುವ ಮಾವಿನಹಣ್ಣಿನ ಪ್ರಮಾಣ ಹಾಗೂ ಬೇಡಿಕೆಯನ್ನು ಆಧರಿಸಿ ಮಾವಿನ ದರ ನಿಗದಿ ಆಗುತ್ತದೆ. ಏನೇ ಆದರೂ ಈ ವರ್ಷ ಮಾಮೂಲಿಗಿಂತ ಸ್ವಲ್ಪ ದುಬಾರಿ ಆಗಲಿದೆ.

’ಕಳೆದ ವರ್ಷ ಏಪ್ರಿಲ್‌ ಆರಂಭದಲ್ಲಿಯೇ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತಿತ್ತು. ಈ ವರ್ಷವೂ ಮಾವಿನ ಹಣ್ಣಿನ ಬರುವಿಕೆಗಾಗಿ ಕಾಯುತ್ತಿದ್ದೇವೆ. ಬಿಸಿಲಿನ ಬೇಗೆಯಲ್ಲಿ ಮಾವಿನಹಣ್ಣು ಸವಿಯುವುದು ಬಹಳ ಖುಷಿ ಕೊಡುತ್ತದೆ. ಮಕ್ಕಳು ಸೇರಿದಂತೆ ಮನೆಯವರೆಲ್ಲ ಇಷ್ಟುಪಟ್ಟು ಮಾವಿನಹಣ್ಣು ಸವಿಯುತ್ತೇವೆ. ಬೆನೆಸನ್‌ ಹಣ್ಣು ಇಷ್ಟವಾಗುತ್ತದೆ. ಅದರೊಂದಿಗೆ ಎಲ್ಲ ರೀತಿಯ ಮಾವು ಸವಿಯುತ್ತೇವೆ‘ ಎನ್ನುತ್ತಾರೆ ಎನ್‌ಜಿಓ ಕಾಲೋನಿಯ ಗೃಹಿಣಿ ಮೀನಾಕ್ಷಿ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು