ಮಾನ್ವಿ: ‘ಸೆ.16ರಂದು ಪ್ರವಾದಿ ಮುಹಮ್ಮದ್ (ಸ) ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಮುಸ್ಲಿಂ ಯುವ ಸಮಾಜದ ಅಧ್ಯಕ್ಷ ಸೈಯದ್ ಸಜ್ಜಾದ್ ಹುಸೇನ್ ಮತವಾಲೆ ಹೇಳಿದರು.
ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ.16 ರಂದು ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು ಈದ್ ಮಿಲಾದ್ ಎಂದು ಆಚರಿಸಲಾಗುತ್ತದೆ. ಅಂದು ಪಟ್ಟಣದ ಮಸ್ಜಿದ್.ಎ.ಹಸನೈನ್‌ನಿಂದ ಪುರಸಭೆ ಬಳಿಯ ಮಸಿದ್.ಎ.ಹಸನೈನ್‌ವರೆಗೂ ಮೆರವಣಿಗೆ ನಡೆಯುತ್ತದೆ. ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ವಿವಿಧ ಧರ್ಮಗಳ ಧರ್ಮಗುರುಗಳು, ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯನಾಯಕ ಮತ್ತಿತರ ಮುಖಂಡರು, ಪಟ್ಟಣದ ಸಾವಿರಾರು ಮುಸ್ಲಿಂ ಹಾಗೂ ಹಿಂದೂ ಸಮುದಾಯದವರು ಭಾಗವಹಿಸಲಿದ್ದಾರೆ’ ಎಂದರು.