ಸೋಮವಾರ, ಮೇ 23, 2022
20 °C
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ

ಧರ್ಮ ಒಡೆಯಲು ಯತ್ನಿಸಿದ ಕಾಂಗ್ರೆಸ್; ವಿಜಯೇಂದ್ರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ‘ಅಖಂಡ ವೀರಶೈವ ಧರ್ಮ ಒಡೆಯಲು ಒಳ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಅದರ ನಾಯಕರಿಗೆ ವೀರಶೈವ ಲಿಂಗಾಯತ ಸಮಾಜ ತಕ್ಕ ಪಾಠ ಕಲಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಬಾಳೇಕಾಯಿ ಮಿಲ್‌ನಲ್ಲಿ ಬುಧವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ವೀರಶೈವ ಲಿಂಗಾಯತ ಸಮಾಜಕ್ಕೆ ಕೈ ಹಾಕಿದವರು ಯಾರೂ ಅಧಿಕಾರದಲ್ಲಿ ಉಳಿದಿಲ್ಲ. ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವೀರಶೈವ ಸಮಾಜವನ್ನು ಒಡೆಯಲು ಹೋಗಿ ಮನೆ ಸೇರಿದ್ದು ಇತಿಹಾಸ’ ಎಂದರು.

‘ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ತಪ್ಪಿಸಲು ಜೆಡಿಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಕಾಂಗ್ರೆಸ್ ರಾಜ್ಯದ ಜನರ ನೀಡಿದ್ದ ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿತು. ಸತತ ಹೋರಾಟದ ಮೂಲಕ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಇದು ಕಾಂಗ್ರೆಸ್ ಮುಖಂಡರಿಗೆ ಅರಗಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ’ ಎಂದರು.

’ಬಿ.ಎಸ್. ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಪ್ರತಾಪಗೌಡ ಪಾಟೀಲ ಸೇರಿ 17 ಜನ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರತಾಪಗೌಡ ಪಾಟೀಲರನ್ನು ಗೆಲ್ಲಿಸಬೇಕಾಗಿದ್ದು ಪ್ರತಿಯೊಬ್ಬ ವೀರಶೈವ ಲಿಂಗಾಯತ ಸಮಾಜದವರ ಕರ್ತವ್ಯ’ ಎಂದರು.

‘ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಈಗಾಗಲೇ ನೆಲ ಕಚ್ಚಿದೆ. ಕ್ಷೇತ್ರದ ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ಉಪ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭೀತಿಯಿಂದ ಕಾಂಗ್ರೆಸ್ ಮುಖಂಡರು ಗಲಾಟೆ ಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಇದನ್ನೂ ಓದಿ: 

ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರು, ಯಡಿಯೂರಪ್ಪ ಅವರ ವಯಸ್ಸಿಗೆ ಬೆಲೆ ಕೊಡದೆ ಏಕ ವಚನದಲ್ಲಿ ಮಾತನಾಡುವ ಮೂಲಕ ಸಣ್ಣತನಕ್ಕೆ ಇಳಿಸಿದ್ದಾರೆ‘ ಎಂದರು.

ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಮಾತನಾಡಿ, ‘ಪ್ರತಾಪಗೌಡ ಪಾಟೀಲರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದರು.

ಸಂಸದ ಕರಡಿ ಸಂಗಣ್ಣ, ಶಾಸಕ ಎ.ಎಸ್. ನಡಹಳ್ಳಿ, ಕೃಷ್ಣಪ್ಪ, ರಣ್ಣ ಮನವಳ್ಳಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದವರು ಒಗ್ಗಟ್ಟಾಗಿ ಬಿಜೆಪಿ ಪರ ಮತ ನೀಡಬೇಕು ಎಂದರು.

ಶಾಸಕರಾದ ಕೃಷ್ಣಪ್ಪ, ಡಾ.ಶಿವರಾಜ ಪಾಟೀಲ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮನೋಹರ ಮಸ್ಕಿ, ಹನುಮನಗೌಡ ಬೇಳಗುರ್ಕಿ ಸೇರಿದಂತೆ ಅನೇಕ ಮುಖಂಡರು ಇದ್ದರು. ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ವೀರೇಶ ಪಾಟೀಲ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು