ರಾಯಚೂರು: ದುಡಿಯುವ ಅವಧಿಯನ್ನು ಎಂಟು ತಾಸುಗಳಿಗೆ ಸಿಮೀತಗೊಳಿಸಬೇಕು ಎಂದು ಷಿಕಾಗೋದಲ್ಲಿ ಕಾರ್ಮಿಕರು ನಡೆಸಿದ ಮೆರವಣಿಗೆ ಮೇಲೆ ಗುಂಡಿನ ಮಳೆ ಸುರಿಸಲಾಗಿತ್ತು. ರಕ್ತಸಿಕ್ತ ಹೋರಾಟದಲ್ಲಿ ಕಾರ್ಮಿಕರು ವಿಜಯಪತಾಕೆ ಹಾರಿಸಿದ್ದ ಈ ದಿನವನ್ನು ಕಾರ್ಮಿಕರ ದಿನವೆಂದು ಆಚರಿಸಲಾಗುತ್ತಿದೆ ಎಂದು ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ (ಎಫ್‌ಐಟಿಯು) ಜಿಲ್ಲಾ ಘಟಕದ ಅಧ್ಯಕ್ಷ ಅಜೀಜ್ ಜಾಗಿರದಾರ್ ಹೇಳಿದರು.
ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಎಫ್‌ಐಟಿಯುನಿಂದ ಬುಧವಾರ ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಡಿಯುವ ವರ್ಗ ರಕ್ತದ ಮಡುವಿನಲ್ಲಿ ಕೆಂಬಾವುಟ ಎತ್ತಿ ಹಿಡಿದಿದ್ದರು. ಕಾರ್ಮಿಕರು ಹೋರಾಡಿ ಪಡೆದ ಹಕ್ಕುಗಳನ್ನು ಇಂದು ದಮನಿಸಲಾಗುತ್ತಿದೆ. ಸಾಮ್ರಾಜ್ಯಶಾಹಿ ನವ ಉದಾರವಾದಿ ನೀತಿಗಳು ಕಾರ್ಪೊರೇಟ್ ಉದ್ಯಮಿಗಳನ್ನು ಪೋಷಿಸುತ್ತಾ ಕಾರ್ಮಿಕ ವರ್ಗವನ್ನು ಶೋಷಣೆಗೆ ಒಳಪಡಿಸುವ ನಯ ನಾಜೂಕು ಕ್ರಮಗಳನ್ನು ಅನುಸರಿಸುತ್ತಿವೆ ಎಂದು ಹೇಳಿದರು.
ಅಭಿವೃದ್ಧಿಯ ಮಂತ್ರದೊಂದಿಗೆ ಉದ್ಯೋಗಗಳನ್ನು ನಾಶಪಡಿಸಲಾಗುತ್ತಿದೆ. ಎಲ್ಲಾ ಉದ್ಯೋಗಗಳಿಗೆ ಗುತ್ತಿಗೆ ರೂಪ ಕೊಡಲಾಗಿದೆ. ಕೋಮುವಾದ, ಧಾರ್ಮಿಕ ಮೂಲಭೂತವಾದ ಜಾತಿವಾದ, ಭಾಷೆ-ಗಡಿವಾದ ವಿಶ್ವ ಕಾರ್ಮಿಕರ ಏಕತೆಗೆ ಕಡಿವಾಣ ಹಾಕಲು ಹಾತೊರೆಯುತ್ತಿದೆ. ದುಡಿಯುವ ಜನತೆಯನ್ನು ವಿಭಜಿಸಿ ಸಂಕಷ್ಟಕ್ಕೆ ಈಡು ಮಾಡುವ ಪ್ರಕ್ರಿಯೆಗಳು ಮುಂದುವರೆದಿವೆ ಎಂದು ವಿಷಾದಿಸಿದರು.
ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಮಿಕ ವಿರೋಧಿ ಕ್ರಮಗಳು ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿವೆ. 1886 ರಿಂದ ಇಲ್ಲಿಯವರೆಗೆ ಕಾರ್ಮಿಕ ವರ್ಗದ ಚಳವಳಿಗಳಲ್ಲಿ ಅನೇಕ ಏರಿಳಿತಗಳು ಆಗಿವೆ. ಎರಡನೇ ಜಾಗತಿಕ ಯುದ್ಧ ನಂತರದ ದಿನಗಳಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಚಳವಳಿಗಳು ಅಭೂತಪೂರ್ವವಾದ ಗೆಲುವುಗಳನ್ನು ತಂದು ಕೊಟ್ಟಿವೆ ಎಂದರು.
ಕಾರ್ಮಿಕರು ಪಡೆದಿದ್ದ ಯಾವುದೇ ಹಕ್ಕುಗಳನ್ನು ಕಿತ್ತು ಕೊಳ್ಳುವ ಶಕ್ತಿಯನ್ನು ಅಂದು ಇರಲಿಲ್ಲ. ವರ್ಗ ಹೋರಾಟ, ವರ್ಗ ಜಾಗೃತಿ, ಸೈದ್ದಾಂತಿಕ, ರಾಜಕೀಯ, ದೃಷ್ಟಿಕೋನದ ತೀವ್ರ ಅಭಾವವು ಕಾರ್ಮಿಕ ವರ್ಗವನ್ನು ಸಂಕಷ್ಟಗಳಿಗೆ ದೂಡುತ್ತಿದೆ. ಕಾರ್ಪೋರೇಟ್ ಪರ ಚಿಂತಕರು ಕಾರ್ಮಿಕರ ನಡುವೆ ಪ್ರತಿಗಾಮಿ ಸಿದ್ಧಾಂತಗಳನ್ನು ಹರಡಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಗಲಗಿನ್ ಮಾತನಾಡಿ, ಜನ ವಿರೋಧಿ ಶಕ್ತಿಗಳನ್ನು ಅಧಿಕಾರದಿಂದ ಕಿತ್ತೆಸೆಯಲು ಹೋರಾಟಗಳು ನಡೆಯುತ್ತಿವೆ. ಪ್ರಬಲವಾದ ಚಳವಳಿಗಳು ನಡೆಯುತ್ತಿಲ್ಲ ಎಂದರು.
ಕಾರ್ಮಿಕ ವರ್ಗವು ಪರಿಸ್ಥಿತಿ ಅವಲೋಕಿಸಿಕೊಂಡು ಏಕತೆಯಿಂದ ಮುಂದೆ ಹೆಜ್ಜೆ ಇಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಬಣ್ಣ, ಕೃಷಿ ಕೂಲಿಕಾರ್ಮಿಕ ಸಂಘದ ಅಧ್ಯಕ್ಷ ಹನೀಫ್, ಹನುಮೇಶ ನಾಯ್ಕ್, ಹರೀಫ್, ದುರ್ಗಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.