ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿಯಿಂದ ಉದ್ಯೋಗ ಖಾತರಿ ಮುಂದುವರಿಸಿ: ಕೆಎಸ್ ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸೂಚನೆ
Last Updated 8 ಜೂನ್ 2021, 13:10 IST
ಅಕ್ಷರ ಗಾತ್ರ

ರಾಯಚೂರು: ‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕು ಹರಡದಂತೆ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡುವುದರೊಂದಿಗೆ ಉದ್ಯೋಗ ಖಾತರಿ ಯೋಜನೆಯಡಿ ಜನರಿಗೆ ಕೆಲಸ ಕೊಡಬೇಕು. ಜಾಬ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ದಿನದಂದೆ ಮಾಡಿಕೊಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೋವಿಡ್‌ ಸ್ಥಿತಿಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿಗ ಕ್ರಿಯಾಯೋಜನೆ ಮಾಡುವುದಕ್ಕೆ ಗ್ರಾಮ ಪಂಚಾಯಿತಿಗೆ ಅವಕಾಶ ಇದೆ ಎಂದರು.

ಜನರ ಒತ್ತಡ ಇದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಲಾಕ್‌ಡೌನ್ ಸಡಿಲಿಕೆ ಬಗ್ಗೆ ಕಿವಿಗೊಡಬಾರದು. ಜೂನ್ 14 ರವರೆಗೂ ಕಡ್ಡಾಯವಾಗಿ ಲಾಕ್‌ಡೌನ್ ಮುಂದುವರಿಸಬೇಕು. ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಮರ್ಪಕವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಲಾಕ್‌ಡೌನ್‌ ಇದ್ದಾಗ ದಿನಸಿ ಖರೀದಿಗಾಗಿ ಒಂದೇ ದಿನ ಎಲ್ಲರನ್ನು ಹೊರಗಡೆ ಬಿಟ್ಟರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿದಿನ ಒಂದೆರಡು ಗಂಟೆ ಅವಕಾಶ ನೀಡುವ ಬಗ್ಗೆ ಎಲ್ಲರೂ ಯೋಜಿಸಬೇಕು.ಯಾವುದೇ ಕಾರಣಕ್ಕೂ ಮದುವೆ, ಜಾತ್ರೆಗೆ ಅವಕಾಶ‌ ನೀಡಲೆಬಾರದು. ಕದ್ದುಮುಚ್ಚಿ ಕಾರ್ಯಕ್ರಮ ಮಾಡುವುದನ್ನು ತಡೆಗಟ್ಟಬೇಕು. ಇಂತಹ ಕಾರ್ಯಕ್ರಮ ಮಾಡುವುದರಿಂದಲೇ ಇಡೀ ರಾಜ್ಯಕ್ಕೆ ಸೋಂಕು ಹರಡುತ್ತದೆ.ಮುಲಾಜಿಲ್ಲದೆ ಲಾಕ್ ಡೌನ್ ಜಾರಿಗೊಳಿಸಿ ಎಂದು ಸಲಹೆ ನೀಡಿದರು.

ಜಲಧಾರೆ ಯೋಜನೆ ಜಾರಿಗೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದೆ. ಬಹುಗ್ರಾಮ ಯೋಜನೆಯಡಿ 39 ಯೋಜನೆಗಳಿಗೆ ಸಾವಿರಾರು ಕೋಟಿ‌ ವೆಚ್ಚ ಮಾಡಲಾಗಿದೆ. ಆದರೂ ಯಶಸ್ವಿಯಾಗಿಲ್ಲ. ರಾಯಚೂರು ಜಿಲ್ಲೆಯಲ್ಲಿ ನೀರಿನ ಮೂಲ‌ ಇದ್ದ ಬಹುಗ್ರಾಮ ಯೋಜನೆಗಳನ್ನು ಯಶಸ್ವಿ ಗೊಳಿಸಲು ಅಗತ್ಯ ನೆರವು ನೀಡಲಾಗುವುದು.ಇದೇ ತಿಂಗಳು ಶಾಸಕರು, ಸಂಸದರ ಸಭೆ ಕರೆದು ಜಲಧಾರೆ ಹಾಗೂ ಜಲಜೀವನ್ ಮಿಷನ್‌ ಯೋಜನೆ ಕುರಿತು ಚರ್ಚಿಸಬೇಕು ಎಂದು ಹೇಳಿದರು.

ಶಾಸಕ ವೆಂಕಟರಾವ್ ನಾಡಗೌ ಮಾತನಾಡಿ, ಉದ್ಯೋಗ ಖಾತರಿ ಅಡಿ ಕಾಲುವೆ ‌ಸ್ವಚ್ಛಗೊಳಿಸುವ ಕೆಲಸ ‌ಮಾಡಿಸಬೇಕು. ಸಿಂಧನೂರು ಕಾಲುವೆ ಭಾಗ ಇರುವುದರಿಂದ ಬಂಡು ನಿರ್ಮಾಣ, ಕೃಷಿಹೊಂಡ ಮಾಡುವ ಅಗತ್ಯವಿರುವುದಿಲ್ಲ. ದುಡಿಯಲು ಬರುವ ಕಾರ್ಮಿಕರ ಕಡ್ಡಾಯ ಪರೀಕ್ಷೆ ನಡೆಸಬೇಕು. ಯಾರಿಗಾದರೂ ಕೋವಿಡ್ ಸೋಂಕು ಇದ್ದರೆ, ಎಲ್ಲರಿಗೂ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಹೋಂ ಐಸೋಲೇಷನ್‌ಗೆ ಅವಕಾಶ ಮಾಡಿದ್ದರಿಂದ ಸೋಂಕು ಹೆಚ್ಚಳವಾಗಲು ಕಾರಣವಾಗಿದೆ. ದಯಮಾಡಿ ಮುಂಬರುವ ದಿನಗಳಲ್ಲಿ ಹೋಂ ಐಸೋಲೇಷನ್ ಅವಕಾಶ ಕೊಡಬಾರದು ಎಂದರು.

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಜಕ್ಕಲದಿನ್ನಿ ಗ್ರಾಮದಲ್ಲಿ ₹1.7 ಕೋಟಿ ಮೊತ್ತದ ಕುಡಿಯುವ ನೀರಿನ ಯೋಜನೆಯನ್ನು ಶಾಸಕರ ಗಮನಕ್ಕೆ ತರದೆ ಕಾಮಗಾರಿ ಆರಂಭಿಸಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂಸದರಾದ ಕರಡಿ ಸಂಗಣ್ಣ, ರಾಜಾ ಅಮರೇಶ್ವರ ನಾಯಕ ಮಾತನಾಡಿದರು.

ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಕೋವಿಡ್‌ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್‌ ತನ್ವೀರ್ ಆಸೀಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT